ನೇಪಾಳ ಸರ್ಕಾರವು ಈ ಆರ್ಥಿಕ ವರ್ಷಕ್ಕೆ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ , ಏಲಕ್ಕಿ , ಕಪ್ಪು ಮತ್ತು ಬಿಳಿ ಕಾಳುಮೆಣಸು ಆಮದುಗೆ ಅಧಿಕೃತ ಅನುಮತಿ ನೀಡಿದೆ. ಆದರೆ ಆಮದು ಮಾಡಲು ಇಚ್ಛಿಸುವ ಕೈಗಾರಿಕೆಗಳು ಉದ್ಯಮ ಇಲಾಖೆ (Department of Industry)ಯಿಂದ ಕಡ್ಡಾಯ ಅನುಮೋದನೆ ಪಡೆಯಬೇಕು. ಇಲಾಖೆಯು ಕೈಗಾರಿಕಾ ಅವಶ್ಯಕತೆ, ದೇಶೀಯ ಲಭ್ಯತೆ ಹಾಗೂ ಅಗತ್ಯ ಪ್ರಮಾಣವನ್ನು ಪರಿಶೀಲಿಸಿ ಅನುಮತಿ ನೀಡಲಿದೆ.
ಹೊಸವಾಗಿ ಸ್ಥಾಪಿತವಾಗಿರುವ ಕೈಗಾರಿಕೆಗಳು ತಮ್ಮ ಉದ್ಯಮ ನೋಂದಣಿ ದಾಖಲೆಗಳು, ತೆರಿಗೆ ವಿವರಗಳು ಹಾಗೂ ಉತ್ಪಾದನಾ ಯೋಜನೆಗಳನ್ನು ಸಲ್ಲಿಸಬೇಕಾಗುತ್ತದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು ಹಿಂದಿನ ವರ್ಷಗಳಲ್ಲಿ ಮಾಡಿರುವ ಆಮದು ಪ್ರಮಾಣ ಮತ್ತು ಬಳಕೆಯ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಪ್ರಕಾರ, ಈ ಕ್ರಮವು ಆಮದು ಪದಾರ್ಥಗಳ ಸರಿಯಾದ ಕೈಗಾರಿಕಾ ಬಳಕೆಯನ್ನು ಖಚಿತಪಡಿಸುವುದು, ಅಕ್ರಮ ವ್ಯಾಪಾರವನ್ನು ನಿಯಂತ್ರಿಸುವುದು ಹಾಗೂ ದೇಶೀಯ ಉತ್ಪಾದನೆ ಮತ್ತು ಮೌಲ್ಯವರ್ಧಿತ ಕೈಗಾರಿಕೆಗಳಿಗೆ ಬೆಂಬಲ ನೀಡುವುದು ಎಂಬ ಉದ್ದೇಶ ಹೊಂದಿದೆ.
ನೇಪಾಳದ ಆಮದು ನಿರ್ಧಾರವು ಭಾರತದ ಅಡಿಕೆ ಮಾರುಕಟ್ಟೆಗೆ ಪರಿಣಾಮ ಬೀರಲಿದೆಯೇ ಎಂಬುದು ಈಗಿನ ಪ್ರಶ್ನೆ. ನೇಪಾಳ ಸರ್ಕಾರ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ ಆಮದುಗೆ ಅಧಿಕೃತ ಅನುಮತಿ ನೀಡಿರುವುದು ದಕ್ಷಿಣ ಏಷ್ಯಾದ ಅಡಿಕೆ ವ್ಯಾಪಾರದಲ್ಲಿ ಹೊಸ ಸಂಚಲನ ತಂದಿದೆ. ಇದರಿಂದ ಭಾರತ, ವಿಶೇಷವಾಗಿ ಕರ್ನಾಟಕ ಮತ್ತು ಕೇರಳದ ಅಡಿಕೆ ಮಾರುಕಟ್ಟೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತ ಮತ್ತು ನೇಪಾಳ ನಡುವೆ ಮುಕ್ತ ಗಡಿ ವ್ಯಾಪಾರ ಇರುವುದರಿಂದ, ನೇಪಾಳಕ್ಕೆ ಆಮದುಗೊಳ್ಳುವ ಅಡಿಕೆಯ ಒಂದು ಭಾಗ ಮರುರಪ್ತಾಗಿ ಭಾರತಕ್ಕೆ ಹರಿದುಬರುವ ಅಪಾಯ ಇರುತ್ತದೆ. ಕೈಗಾರಿಕಾ ಬಳಕೆ ಎಂದು ಆಮದು ಮಾಡಿದ ಅಡಿಕೆ, ಅಕ್ರಮವಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದರೆ ಸ್ಥಳೀಯ ಉತ್ಪಾದಕರಿಗೆ ಬೆಲೆ ಕುಸಿತ ಉಂಟಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಭಾರತ ಕೆಲವು ದೇಶಗಳಿಗೆ ಅಡಿಕೆ ರಫ್ತು ಮಾಡುತ್ತದೆ. ನೇಪಾಳದಲ್ಲಿ ಕೈಗಾರಿಕೆಗಳಿಗೆ ಅಧಿಕೃತ ಆಮದು ಅವಕಾಶ ನೀಡಿದರೆ, ನೇಪಾಳ ಮಾರುಕಟ್ಟೆಯಲ್ಲಿ ಭಾರತೀಯ ಅಡಿಕೆಗೆ ಬೇಡಿಕೆ ಕಡಿಮೆಯಾಗಬಹುದು ಹಾಗೂ ಆಮದು ಅಡಿಕೆಯ ಮೇಲಿನ ಅವಲಂಬನೆ ಹೆಚ್ಚಬಹುದು, ಇದರಿಂದ ಭಾರತದ ರಫ್ತು ಅವಕಾಶ ಕಡಿಮೆಯಾಗುವ ಸಾಧ್ಯತೆ ಇದೆ.




