ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಸೋಂಕಿನ ಯಾವುದೇ ಆತಂಕ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೀವ್ರ ಉಸಿರಾಟ ಸಮಸ್ಯೆ ಇದ್ದವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆ ನಡೆಸಲಾಗುವುದು. ಇದಕ್ಕೆ ಅಗತ್ಯ ಇರುವಷ್ಟು ಪರಿಕರಗಳ ದಾಸ್ತಾನು ಇದೆ ಎಂದು ತಿಳಿಸಿದ್ದಾರೆ. ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಮೂವರು ಮಹಿಳೆಯರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಅವರೆಲ್ಲರೂ ಗುಣಮುಖರಾಗಿದ್ದಾರೆ. ಕೊರೋನಾ ಸಂಬಂಧಿಸಿದ ವದಂತಿಗಳನ್ನು ಜನತೆ ನಂಬಬಾರದು. ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ಸುದ್ದಿಗಳು ನೈಜವಲ್ಲ. ಸದ್ಯದ ಮಟ್ಟಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕದ ಸ್ಥಿತಿ ಇಲ್ಲ. ಕೊರೋನಾ ಈಗ ಉಳಿದ ಎಲ್ಲ ಸೋಂಕುಗಳಂತೆ ಸಾಮಾನ್ಯ ರೋಗವಾಗಿದೆ. ಕೊರೋನಾ ರೋಗಾಣು ಈಗ ದುರ್ಬಲವಾಗಿದೆ. ಆದರೆ, ಎಚ್ಚರಿಕೆ ಅಗತ್ಯ. ಕೊರೋನಾ ಎದುರಿಸಲು ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.