ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವಿಧಿಸಲಾಗಿದ್ದ 2 ವರ್ಷ ಜೈಲು ಶಿಕ್ಷೆಗೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರಿಗೆ ಮತ್ತೆ ರಿಲೀಫ್ ಸಿಕ್ಕಿಲ್ಲ.
ಬೇಸಿಗೆ ರಜೆಯ ನಂತರ ಅಂದರೆ, ಜೂನ್ 4 ರ ಬಳಿಕ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ತೀರ್ಪು ಪ್ರಕಟಿಸಲಿದ್ದಾರೆ. ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯ ಮೇಲೆ ಆದೇಶ ನೀಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ ನಡೆಸುವವರೆಗೆ ಮಧ್ಯಂತರ ತಡೆ ನೀಡುವಂತೆ ಕೋರಿ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು.
ಏನಿದು ಪ್ರಕರಣ?
ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಿರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವೆರೆಲ್ಲರ ಸರ್‌ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು. ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ಮಾರ್ಚ್ 23 ರಂದು ರಾಹುಲ್ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದರ ಜೊತೆ ಈ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ ನೀಡಿ ರಾಹುಲ್ ಗಾಂಧಿಗೆ ಜಾಮೀನು ಮಂಜೂರು ಮಾಡಿತ್ತು.
2 ವರ್ಷ ಜೈಲು ಶಿಕ್ಷೆಯಾದ ಹಿನ್ನೆಲೆಯಲ್ಲಿ ಲೋಕಸಭಾ ಸಚಿವಾಲಯ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು.