ಬೇಸಗೆಯ ಈ ಸಂದರ್ಭ ತಾಪಮಾನ ಹೆಚ್ಚಾಗುತ್ತಿದ್ದಂತೆಯೇ ವಿದ್ಯುತ್ ಬಗ್ಗೆ ಚರ್ಚೆಗಳು ಆರಂಭವಾಗಿದೆ. ವಿಧಾನಸಭೆ, ವಿಧಾನಪರಿಷತ್ ನಲ್ಲೂ ವಿದ್ಯುತ್ ಬಗ್ಗೆ ಚರ್ಚೆಗಳು ನಡೆದಿವೆ. ಈ ಸಂದರ್ಭ ಸಚಿವರು ನೀಡಿದ ಉತ್ತರ ಇಲ್ಲಿದೆ. ………ಮುಂದೆ ಓದಿ……..
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ನೀರಾವರಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ. ಎಲ್ಲಿಯೂ ವಿದ್ಯುತ್ ಕಡಿತ ಮಾಡಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ಸಿದ್ದು ಸವದಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ದುರಸ್ತಿ ಸಮಯದಲ್ಲಿ ವಿದ್ಯುತ್ ಕಡಿತವಾಗಬಹುದು. ಆದರೆ ರೈತರ ಪಂಪ್ ಸೆಟ್ ಗಳಿಗೆ ನೀಡುತ್ತಿರುವ ವಿದ್ಯುತ್ ಅನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಬಾರದು ಎಂದು ಎಸ್ಕಾಂಗಳ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ದಿನದ 24 ಗಂಟೆ ವಿದ್ಯುತ್ ಪೂರೈಸುವ ನಿರಂತರ ಜ್ಯೋತಿ ಯೋಜನೆ ಚಾಲ್ತಿಯಲ್ಲಿದೆ. ಕೃಷಿಗೆ 7 ಗಂಟೆ ಪೂರೈಸುವ ಜೊತೆಯಲ್ಲೇ ನಿರಂತರ ಜ್ಯೋತಿ ಯೋಜನೆಯಡಿ ಸಿಂಗಲ್ ಫೇಸ್ ನಲ್ಲಿ ವಿದ್ಯುತ್ ನೀಡುವಂತೆ ಕಳೆದ ಜನವರಿಯಲ್ಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಂಗಲ್ ಫೇಸ್ ಅನ್ನು ಬಲವಂತವಾಗಿ ತ್ರಿ-ಫೇಸ್ ಮಾಡಿದರೆ ಅನಗತ್ಯವಾಗಿ ಒತ್ತಡ ಹೆಚ್ಚಾಗಿ ವಿದ್ಯುತ್ ಸಲಕರಣೆಗಳು ಸುಟ್ಟುಹೋಗಲಿವೆ. ಹೀಗಾಗಿ ಎಚ್ಚರಿಕೆ ವಹಿಸಲಾಗಿದೆ ಎಂದರು.
ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ಲೈನ್ ಗಳ ದೋಷಗಳನ್ನು ಸರಿಪಡಿಸಲು ಶೀಘ್ರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ ವಿಧಾನಸಭೆಯಲ್ಲಿ ಹೇಳಿದ್ದಾರೆ.ಪ್ರಶ್ನೋತ್ತರ ಕಲಾಪದ ವೇಳೆ ತೇರದಾಳ ಶಾಸಕ ಸಿದ್ದು ಸವದಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮ-ಸಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ಟ್ರಾನ್ಸ್ ಫಾರ್ಮರ್ ಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿಲ್ಲ. ಆದರೆ ಬದಲಾವಣೆ ಅಗತ್ಯವಿದೆ. ಮುಂದಿನ ಎರಡು ವರ್ಷಗಳಲ್ಲಿ ಅಗತ್ಯವಿರುವೆಡೆ ಟ್ರಾನ್ಸ್ ಫಾರ್ಮರ್ ಹಾಗೂ ವಿದ್ಯುತ್ ಲೈನ್ ಗಳಲ್ಲಿನ ದೋಷಗಳನ್ನು ಸರಿಪಡಿಸಲಾಗುವುದು. ಮುಖ್ಯವಾಗಿ ಸ್ಥಳೀಯ ಮಟ್ಟದಲ್ಲಿ ಇಂಧನ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ಕೃಷಿ ಫೀಡರ್‌ಗಳಿಗೆ ಹಗಲಿನ ವೇಳೆಯಲ್ಲೇ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು. ಅಂತರ್ಜಲ ಕುಸಿತದ ಕಾರಣಗಳನ್ನು ಉಲ್ಲೇಖಿಸಿ 3 ಪೇಸ್ ವಿದ್ಯುತ್ ಸರಬರಾಜಿನ ಬ್ಯಾಟ್‌ಗಳ ಸಮಯವನ್ನು ಬದಲಾಯಿಸಲು ಯಾವುದೇ ಕೋರಿಕೆ ಬಂದಿರುವುದಿಲ್ಲ. ಜಿಸ್ಕಾಂ ವ್ಯಾಪ್ತಿಯಲ್ಲಿ ಪ್ರಸ್ತುತ ವಿದ್ಯುತ್ ಗುಣಮಟ್ಟವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು. ಇನ್ನೊಂದು ವರ್ಷದಲ್ಲಿ ಆಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಉದ್ದೇಶವಿದೆ. ನಾಲ್ಕೂವರೆ ಲಕ್ಷಗಳಲ್ಲಿ 2 ಲಕ್ಷ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಉಚಿತ ದೂರವಾಣಿ 1912ಗೆ ಕರೆ ಮಾಡಿ ದೂರು ದಾಖಲಿಸಿದರೆ, ಅಧಿಕಾರಿಗಳು ಉತ್ತರದಾಯಿಗಳಾಗಿರುತ್ತಾರೆ ಎಂದು ಹೇಳಿದರು.
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು ಸದೃಢಗೊಳಿಸಲು ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಸಿದ್ದು ಸವದಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ 56 ಉಪ ಕೇಂದ್ರಗಳು ಮತ್ತು ಮುಂದಿನ ವರ್ಷ 100 ಕಡೆಗಳಲ್ಲಿ ಉಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಒಟ್ಟಾರೆ ಎರಡು ವರ್ಷಗಳಲ್ಲಿ ಉಪ ಕೇಂದ್ರಗಳನ್ನು ಬದಲಾವಣೆ ಮಾಡಲಾಗುವುದು. ಕುಸುಮ್ ಯೋಜನೆಯಡಿ ರಾಜ್ಯದಲ್ಲಿ 3 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.