ಅಡಿಕೆಯ ಬಗ್ಗೆ , ಅಡಿಕೆ ಬೆಳೆಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದಂತೆಯೇ ಇದೀಗ ಮೇಘಾಲಯ ಕೃಷಿ ಸಚಿವ ಬಾಂಟೆಡೋರ್ ಲಿಂಗ್ಡೋಹ್ ಅವರು ಅಡಿಕೆಯಿಂದ ಆರೋಗ್ಯದ ಮೇಲೆ ಅಪಾಯದ ಕಾರಣ ಮುಂದಿರಿಸಿ ಭಾರತ ಸರ್ಕಾರವು ಇನ್ನು ಮುಂದೆ ಅಡಿಕೆಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಅನುಮೋದಿಸುವುದಿಲ್ಲ ಎಂದು ನೀಡಿರುವ ಹೇಳಿಕೆ ಇದೀಗ ಅಚ್ಚರಿಗೆ ಕಾರಣವಾಗಿದೆ.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕಳೆದ ಹಲವು ಸಮಯಗಳಿಂದ ಆಗಾಗ ವರದಿಗಳು ಕಂಡುಬರುತ್ತಿದ್ದವು. ಅಂತರಾಷ್ಟ್ರೀಯ ಮಟ್ಟದಲ್ಲಿ ಅಡಿಕೆಯ ಗುಣಲಕ್ಷಣಗಳ ಬಗ್ಗೆ ಅಧ್ಯಯನಗಳು ನಡೆದು ಋಣಾತ್ಮಕ ವರದಿಗಳೇ ಹೆಚ್ಚಾಗಿ ಪ್ರಕಟವಾಗುತ್ತಿದ್ದವು. ಭಾರತದಲ್ಲೂ ಅಂತಹದ್ದೇ ವರದಿಗಳು ಆಗಾಗ ಬರುತ್ತಿರುವ ಬೆನ್ನಲ್ಲೇ ಇದೀಗ ಮೇಘಾಲಯದ ಕೃಷಿ ಸಚಿವ ಬಾಂಟೆಡೋರ್ ಲಿಂಗ್ಡೋಹ್ ಅವರು ಆರೋಗ್ಯದ ಮೇಲಿನ ಅಪಾಯಗಳನ್ನು ಗುರುತಿಸಿ ಅಡಿಕೆಗಾಗಿ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಅಡಿಯಲ್ಲಿ ಭಾರತ ಸರ್ಕಾರವು ಇನ್ನು ಮುಂದೆ ಯೋಜನೆಗಳನ್ನು ಅನುಮೋದಿಸುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಮೇಘಾಲಯ ಸರ್ಕಾರದ ಬಜೆಟ್ ಅಧಿವೇಶನದ ಸಂದರ್ಭ ಈ ಹೇಳಿಕೆಯನ್ನು ಸದನದಲ್ಲಿ ನೀಡಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಮೇಘಾಲಯದ ದಿ ಶಿಲ್ಲಾಂಗ್ ಟೈಮ್ಸ್ ವರದಿ ಮಾಡಿದೆ.
ಈ ಬಗ್ಗೆ ಇನ್ನೂ ಮುಂದುವರಿಸಿ ಹೇಳಿದ ಮೇಘಾಲಯ ಕೃಷಿ ಸಚಿವ ಬಾಂಟೆಡೋರ್ ಲಿಂಗ್ಡೋಹ್, ಕೇಂದ್ರವು ಮಾರುಕಟ್ಟೆ ಮತ್ತು ತಪಾಸಣೆ ನಿರ್ದೇಶನಾಲಯದ ಅಡಿಯಲ್ಲಿನ ಸರಕು ಪಟ್ಟಿಯ ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ ವಿಭಾಗದ ಅಡಿಯಲ್ಲಿ ಅಡಿಕೆಯನ್ನು ಗುರುತಿಸಿದೆ ಎಂದೂ ಹೇಳಿರುವ ಬಗ್ಗೆ ಮೇಘಾಲಯ ಮಾಧ್ಯಮ ವರದಿ ಮಾಡಿದೆ.
ಮೇಘಾಲಯದಲ್ಲಿ ಕೂಡಾ ಅಡಿಕೆಯನ್ನು ಬೆಳೆಯುವ ಕೃಷಿಕರು ಇದ್ದಾರೆ. ಈ ಕಾರಣದಿಂದ ಮೇಘಾಲಯ ಸರ್ಕಾರವು ಈ ಬೆಳೆಗಾರರಿಗೆ ನೆರವು ನೀಡುತ್ತದೆ. ಅಡಿಕೆಯನ್ನು ಪ್ರಸ್ತುತ ಮೇಘಾಲಯ ರಾಜ್ಯವು ಕೃಷಿ ಉತ್ಪನ್ನ ಎಂದು ಪಟ್ಟಿ ಮಾಡಿದೆ ಎಂದು ಹೇಳಿದರು.
ಮೇಘಾಲಯದ ಅಡಿಕೆ ಕೃಷಿಯು ಮಳೆಯಿಂದ ಸುಳಿಕೊಳೆಯ ರೋಗಕ್ಕೆ ತುತ್ತಾಗಿರುವುದು ಹಾಗೂ ಇತರ ರೋಗಗಳಿಂದ ಕೃಷಿಕರು ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಬಂದಿರುವ ಪ್ರಶ್ನೆಗೆ ಕೃಷಿ ಸಚಿವರು ಉತ್ತರಿಸಿದ್ದರು. ಮಾಹಿತಿ ಪ್ರಕಾರ ಮೇಘಾಲಯದ 43 ಹಳ್ಳಿಗಳ ಸುಮಾರು 298.4 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಹಾನಿಗೊಳಗಾಗಿವೆ.