ಕಳೆದ ಅಗಸ್ಟ್ ತಿಂಗಳಲ್ಲಿ ಪ್ರಾಕೃತಿಕವಾಗಿ ನಮ್ಮ ಕೃಷಿಗೆ ಅಗಾಧ ಹೊಡೆತ….. ಮೂರು ನಿಮಿಷಗಳ ರಣ ಭೀಕರ ಗಾಳಿ ಮಳೆ….. ವರ್ಷಗಳ ಕಾಲ ರಾತ್ರಿ ಹಗಲೆನ್ನದೆ ಪ್ರೀತಿಯಿಂದ ,ಜತನವಾಗಿ ಸಾಕಿ ಬೆಳೆಸಿದ ಅಡಿಕೆ,ತೆಂಗು,ಮೆಣಸು,ಜಾಯಿಕಾಯಿ, ರಬ್ಬರ್ ಹಾಗೂ ಕಿರಾಲ್ ಬೋಗಿಯಂತಹ ದೈತ್ಯ ಹೆಮ್ಮರಗಳು ಧರಾಶಾಹಿಯಾಗಿತ್ತು. ಅದರೊಂದಿಗೆ ನಾವೂ ಮಾನಸಿಕವಾಗಿ ಕುಗ್ಗಿದ್ದು ನೊಂದದ್ದೂ ಹೌದು. ಯಾವುದೂ ಬೇಡವೆಂಬ ವೈರಾಗ್ಯವೂ ಆವರಿಸಿತ್ತು…
ಆಪ್ತರ, ಬಂಧು ಬಳಗ,ನೆಂಟರಿಷ್ಟರ ಸಾಂತ್ವನ ಆರದ ಗಾಯಕ್ಕೆ ಹಚ್ಚಿದ ಮುಲಾಮಾಗಿತ್ತಷ್ಟೇ …. ಆದರೂ ಅವ್ಯಕ್ತವಾಗಿ ಮನಸ್ಸಿಗೆ ನವ ಚೈತನ್ಯ ಕೊಟ್ಟದ್ದು ಅಷ್ಟೇ ಸತ್ಯ. ನನ್ನ ಸೋದರ ಮಾವನವರಂತೂ ಹೆದರಬೇಡ, ಏನಾಗಬೇಕು ನಿನಗೆ, ನಾನಿದ್ದೇನೆ, ಹೋದ ತೋಟಗಳನ್ನು ಸಂಪೂರ್ಣ ತೆಗೆದು ಹೊಸತು ಮಾಡು,ಹೊಸ ಹುರುಪು ತನ್ನಿಂದ ತಾನೇ ಮೂಡುತ್ತದೆ , ಕೂಡಲೇ ಮುಂದುವರಿಸು , ಅಡಿಕೆ ಗಿಡ ಎಷ್ಟು ಬೇಕು ನಿನಗೆ,ತಯಾರಾಗಿದೆ,ಕೊಂಡು ಹೋಗು,ಸಮಯ ಹಾಳು ಮಾಡಬೇಡ ಎಂದು ಧೈರ್ಯ ತುಂಬಿದಾಗ ಮನ ನಿರಾಳವಾಗಿತ್ತು. ಗಾಳಿಗೆ ಮುರಿದುಬಿದ್ದ ಸಾವಿರದಷ್ಟು ಅಡಿಕೆ ಮರಗಳನ್ನು ಕಡಿದು ತೆಗೆದು,ಒತ್ತಟ್ಟಿಗಿರಿಸಿ, ಬಗ್ಗಿ ಬಿಲ್ಲಿನಂತಾದ ಸುಮಾರು 300 ಅಡಿಕೆ ಗಿಡ ಮರಗಳನ್ನು ಫೈಬರ್ ರೋಪ್ ನಲ್ಲಿ ಎಳೆದು ಕಟ್ಟಿ ಅಡಿಕೆ ತೋಟವನ್ನು ಒಂದು ಸ್ಥಿತಿಗೆ ತಂದು ನಿಲ್ಲಿಸಿದೆವು. ಹಳೆ ತೋಟದಲ್ಲಿ ಎಡೆಗಿಡಗಳು ಬೇಕಾದಷ್ಟು ಇದ್ದ ಕಾರಣ ತೋಟ ಖಾಲಿ ಖಾಲಿಯಾಗಿಲ್ಲ, ಎಡೆಗಿಡಗಳು ತಲೆ ಎತ್ತಿ ನಿಂತು ಧೈರ್ಯ ತುಂಬುತ್ತಿವೆ. ಕೃಷಿ,ತೋಟ ಎಂದರೆ ಸೈನ್ಯದಂತಿರಬೇಕು ನಾವು ಸೈನಿಕರಂತಿರಬೇಕು ಎಂಬ ಅಜ್ಜ ಯಾವಾಗಲೂ ಹೇಳುತಿದ್ದ ಮಾತಿನ ಸತ್ಯ ಅರಿವಾಗಿತ್ತು. ಅಂದರೆ,ಸೈನಿಕನಂತೆ ಸದಾ ಜಾಗೃತನಾಗಿದ್ದು ಗಮನಿಸುತ್ತಾ,ಖಾಲಿಯಾದೆಡೆ ಎಡೆಗಿಡಗಳನ್ನು ನಡುತ್ತಾ, ಸದಾ ಗಮನಿಸಬೇಕು ಎಂಬುದು ಅಜ್ಜನವರ ಮಾತಿನ ಇಂಗಿತವಾಗಿತ್ತು. ಸದಾ ಸೈನ್ಯಕ್ಕೆ ಹೊಸ ಸೈನಿಕರ ಸೇರ್ಪಡೆ,ತರಬೇತಿ, ಕಾರ್ಯಾಚರಣೆ ಹೇಗೆ ನಡೆಯುತ್ತೋ ಅಂತೆಯೇ ಕೃಷಿಯಲ್ಲಿ ಕೂಡಾ ವ್ಯವಸ್ಥಿತವಾಗಿ ಕಾಲಕಾಲದ ಕೆಲಸ ಕಾರ್ಯಗಳು ನಡೆಯಬೇಕು ಎನ್ನುವ ಮಾತು ಅಜ್ಜನವರದಾಗಿತ್ತು.
ಹಾಗೆಯೇ , 50 % ಮುರಿದು ಹೋದ ರಬ್ಬರ್ ತೋಟವನ್ನು ಸಂಪೂರ್ಣ ತೆಗೆದು ಹೊಸ ತೋಟ ಮಾಡಿದೆವು. ದೇವರ ಕೃಪೆಯಿದೆ, ಗುರುಹಿರಿಯರ ಆಶೀರ್ವಾದದ ಬಲವಿದೆ ಎಂಬ ನಂಬಿಕೆಯೊಂದಿಗೆ ಹೊಸ ಕೃಷಿ,ಹೊಸ ಪ್ರಯೋಗದತ್ತ ಮುಖ ಮಾಡಿದೆವು. ಒಂದು ಹಂತಕ್ಕೆ ತಂದು ನಿಲ್ಲಿಸಲು ಸತತ ಆರು ತಿಂಗಳು ಯಂತ್ರದಂತೆ ಕೆಲಸ ಕೆಲಸ ಕೆಲಸ…. ಈಗ ಇರೋದು ಗಮ್ಮತ್ತು… ಮಾಯಾ ಮರ್ಕಟವೆಂಬ ಮನದಲ್ಲಿ ಧುತ್ತೆಂದು ಏರಿ ಬರುವ ಪ್ರಶ್ನೆಗಳು, ಕಾಡುವ ಕೊರತೆಗಳ ಸಾಲು ಪಟ್ಟಿಗಳು…
ಈಗ ಅಡಿಕೆ ಬೇಕಾ….. ನಾಳೆ ದರ ಕುಸಿದರೆ… ಕೆಲಸದವರು ಸಿಕ್ಕದಿದ್ದರೇ….ಎಲೆಚುಕ್ಕಿ ಬಂದರೇ…..ಅರಸಿನ ಬಂದರೇ..
ಈಗ ಇರುವ ತೋಟ ಸಾಕಲ್ವಾ.. ….ಹಾ,ಅಡಿಕೆಯಲ್ಲದಿದ್ದರೆ ಬೇರೆ ಯಾವುದು ಮಾಡೋಣಾ… ಉತ್ತರವಿಲ್ಲ……… .ನೋಡೋಣ,ಇದ್ದರೆ ಹೊಸ ಪ್ರಯೋಗಗಳು ಮಾಡೋಣ…..
ನಾನು ಮೂವತ್ತ ಐದು ವರ್ಷಗಳ ಹಿಂದೆ ಕೃಷಿಗೆ ಇಳಿದಾಗಲೇ ಈ ಪ್ರಶ್ನೆ ಇದ್ದೇ ಇತ್ತು…ದರ ಏರಿಳಿತವಾದದ್ದು ಹೌದು…ಜೀವನ ನೌಕೆ ಸಾಗಿದ್ದೂ ಹೌದು… ಭವಿಷ್ಯವನ್ನು ಕಂಡವರಿಲ್ಲವಲ್ಲವೇ… ಧನಾತ್ಮಕ ಚಿಂತನೆಯೊಂದೇ ಕೃಷಿಗೆ ನಿಜ ಬಲ,ಗೊಬ್ಬರ… ರೋಗ,ತಾಪತ್ರಯ ಇರುವಂತಹದ್ದೇ….ನೋಡೋಣ……ಹೊಸತಾಗಿ ಒಂದು ಅಂಗಡಿ ಓಪನ್ ಮಾಡೋಣ…ಷೆ…ವ್ಯಾಪರವೇ ಆಗದಿದ್ದರೆ, ವಕೀಲ ವೃತ್ತಿ ಮಾಡೋಣ,ಕಕ್ಷಿದಾರನೇ ಬಾರದಿದ್ದರೆ, ವೈದ್ಯನಾಗೋಣ…ಜನರೇ ಹತ್ತಿರ ಸುಳಿಯದಿದ್ದರೆ…. ಷೆ… ತಾಪತ್ರಯಗಳ ಸರಮಾಲೆ…ಕೇವಲ ಚಿಂತೆ ಮಾತ್ರ… ಈಗ ಇರುವ ತೋಟ ಸಾಕು…ಅದು ತೋಟಕ್ಕೆ ಮಾತ್ರ ಮೀಸಲು ಸಲಹೆಯೋ…ಯಾಕೆ ಉದ್ಯೋಗಿ,ವರ್ಷಕ್ಕೆರಡು ಸಲ ಕಂಪನಿಯಿಂದ ಕಂಪೆನಿಗೆ ಹಾರೋದು, ಯಾಕೆ ಉದ್ಯಮಿಯೊಬ್ಬ ತನ್ನ ಉದ್ಯಮ ವಿಸ್ತರಿಸುವುದು…ಇದೆಲ್ಲಾ ಮಾನವನ ಸಹಜ ಗುಣ…ಸಾಧಿಸುವ ಆಸೆ,ಛಲಗಳಿಲ್ಲದಿದ್ದರೆ ಜೀವನ ನಿಂತ ನೀರಾಗದೇ….
ಅಷ್ಟಕ್ಕೂ ಹೊಸ ಕಾರೊಂದು ,ಇಪ್ಪತ್ತೋ ಮೂವತ್ತೋ ಲಕ್ಷಗಟ್ಟಲೆ ಕೊಟ್ಟು ಕಣ್ಮುಚ್ಚಿ ತರುವಾಗ ಈ ಎಲ್ಲಾ ಚಿಂತೆ ನಮಗಿರುತ್ತದೆಯೇ….ಕಾರು ತರುತ್ತಿರುವಾಗ ಹೊಂಡಕ್ಕೆ ಬಿದ್ದರೆ, ಮರಕ್ಕೆ ಢಮಾರ್ ಆದರೆ, ಇಂಜಿನ್ ಕೆಟ್ಟು ಹೋದರೆ, ಯಾರಾದರೂ ಕದ್ದು ಕೊಂಡೊಯ್ದರೆ, ಹಾಗದರೆ ,ಹೀಗಾದರೆ ಎಂಬ ಆದರೆಗಳ ಬಗ್ಗೆ…..ಅದ್ಯಾವ ಚಿಂತೆಯೂ ಮಾಡೋದಿಲ್ಲ….ಲಕ್ಷಗಳ ಬಯಸಿದ ಕಾರ್ ರಸ್ತೆಗಿಳಿದು ದಿನ ಕಳೆದಂತೆಯೇ ಬೆಲೆ ಕಳೆದುಕೊಳ್ಳುತ್ತನೇ ಹೋಗುತ್ತಲ್ಲಾ… ಚಿಂತಿಸ್ತೇವಾ…ಇಲ್ಲವಲ್ಲ…ಯಾಕೆ ಯಾಕೆ…ಯಾಕೆಂದರೆ ಅದು ಖುಷಿಯ ವಿಷಯ,ಹೊಸಹೊಸ ಕಾರೋ,ಬೈಕೋ ಅದರಲ್ಲಿ ಹೋಗುವ ಸಂತಸ ….ಬಯಕೆ……ಹಾಗಾಗಿ ಓಕೆ….ಅದರೆ ಅಷ್ಟು ಖರ್ಚು ಬಯಸದ ಕೃಷಿ ಒತ್ತಾಯದ ಬಸಿರು, ಬಲವಂತದ ಮಾಘ ಸ್ನಾನ… ಅದಕ್ಕಾಗಿ ಸಾವಿರಾರು ಪ್ರಶ್ನೆಗಳು,ಚಿಂತೆಗಳು….ಹೊಸ ಕಾರಿನ ಸುತ್ತ ದಿನಕ್ಕೆ ಹದಿನೆಂಟು ಬಾರಿ ಸುತ್ತ ಬರಬಹುದು, ತೋಟದತ್ತ ದಿನಕ್ಕೆಷ್ಟು ಬಾರಿ ಮುಖ ಮಾಡುತ್ತೇವೆ…ಇರಲಿ….ಕಾರಿಗೆ ಹಾಕಿದ ಪೆಟ್ರೋಲಿಯಂ ಹೊಗೆಯಾಗಿ ಮಾಯವಾದರೆ, ಕೃಷಿಗೆ ಬಳಸಿದ ಗೊಬ್ಬರ ಫಸಲಾಗಿ ಬಂದೀತು ಎಂದು ಮನಸ್ಸಿಟ್ಟು, ಪ್ರೀತಿಯಿಟ್ಟು ಕೃಷಿ ಮಾಡೋಣ…ಸೋಲು ಎಂಬುದೇ ಇಲ್ಲ, ಏರಿಳಿತಗಳಷ್ಟೇ…..
ದರ ಕುಸಿಯಲೂ ಬಹುದು….ಸ್ವಲ್ಪ ತಿರುಗಾಟ ಕಡಿತ ಮಾಡೋಣ, ಒಂದು ಮಾರು ದೂರಕ್ಕೂ ಬೈಕೇರುವುದನ್ನು ಬಿಡೋಣ….ಅಗತ್ಯವಿಲ್ಲದ ಖರ್ಚು ಸದ್ಯಕ್ಕೆ ನಿಲ್ಲಿಸೊಣ….ಯಾಕೆ ಎಜೆಸ್ಟ್ ಸಾಧ್ಯವಿಲ್ಲ… ಇದೆ….ನಮ್ಮ ಮಾನಸಿಕ ಸ್ಥಿತಿ ಮೊದಲಾಗಿ ಬದಲಾಗಬೇಕಿದೆ. ನಮ್ಮ ಮೊದಲ ಪ್ರಾಶಸ್ತ್ಯ ಯಾವುದಕ್ಕೇ ಎನ್ನುವುದು ಮೊದಲು ತೀರ್ಮಾನಿಸಿಕೊಳ್ಳಬೇಕಲ್ಲವೇ…. ಯಸ್… ಜೀವನ,ಉದ್ಯೋಗ,ವ್ಯವಹಾರ,ಉದ್ದಿಮೆ ,ಕೃಷಿ ,ಎಲ್ಲವೂ ಯಾವತ್ತಿದ್ದರೂ ಹೋರಾಟವೇ….ಏಳು ಬೀಳುಗಳು ಇರುವಂತಹದ್ದೇ…. ಎದೆಗುಂದಬಾರದಷ್ಟೆ….ಪ್ರಶ್ನೆಗಳೇ ಪೇಡಂಭೂತವಾಗಿ ಕಾಡುತ್ತಾ ಇರಬಾರದಷ್ಟೇ, ಚಿಂತೆಯಲ್ಲೇ ದಿನ ವ್ಯರ್ಥವಾಗಬಾರದು….. ಎನಂತೀರಿ…..
ಸುಂದರವನೆಸಗು ಜೀವನವ ಸಾಹಸದಿಂದೆ
ಕುಂದಿಲ್ಲವದಕೆ ಸಾಹಸಭಂಗದಿಂದೆ
ಮುಂದಕದು ಸಾಗುವುದು ಮರಳಿ ಸಾಹಸದಿಂದೆ
ಚೆಂದ ಧೀರೋದ್ಯಮವೆ ಮಂಕುತಿಮ್ಮ.
ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…
ಲಡಾಖ್‌ನ ದ್ರಾಸುದಲ್ಲಿಂದು 26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…
ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ.…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…
ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…
ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…