22.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಬಿಟ್ಟು ಬಿಟ್ಟು ಮಳೆ ಹಾಗೂ ಬಿಸಿಲಿನ ವಾತಾವರಣದ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಇರಬಹುದು. ಈಗಿನಂತೆ ಜೂನ್ 22ರಿಂದ ಮಳೆ ಸ್ವಲ್ಪ ಹೆಚ್ಚಾಗುವ ಲಕ್ಷಣಗಳಿದ್ದರೂ ಭಾರಿ ಮಳೆಯ ಸಾಧ್ಯತೆ ಕಾಣಿಸುತ್ತಿಲ್ಲ. ಬಿಟ್ಟು ಬಿಟ್ಟು ಸಾಮಾನ್ಯ ಮಳೆ ಜೂನ್ 28ರ ತನಕ ಮುಂದುವರಿಯಬಹುದು. 29ರಿಂದ ಮಳೆ ಬಿಡುವು ಪಡೆಯುವ ಸಾಧ್ಯತೆಗಳಿವೆ.
ಮಲೆನಾಡು : ಕೊಡಗು ಅಲ್ಲಲ್ಲಿ ಬಿಟ್ಟು ಬಿಟ್ಟು ಮಳೆಯ ಮುನ್ಸೂಚನೆ ಇದ್ದು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ದಿನದಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಜೂನ್ 22ರಂದು ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಿದ್ದರೂ 23ರಿಂದ ಕಡಿಮೆಯಾಗುವ ಲಕ್ಷಣಗಳಿವೆ. ದಿನದಲ್ಲಿ 2,3 ಸಾಮಾನ್ಯ ಮಳೆ ಜೂನ್ 29ರ ತನಕ ಮುಂದುವರಿಯುವ ಸೂಚನೆಗಳಿವೆ.
ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು. ದಕ್ಷಿಣ ಒಳನಾಡಿನ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಧ್ಯಾಹ್ನ ನಂತರ, ಸಂಜೆ ಮೋಡ ಹಾಗೂ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಮುನ್ಸೂಚನೆ ಇದೆ. ಈಗಿನಂತೆ ಮುಂದಿನ 10 ದಿನಗಳವರೆಗೂ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾತ್ತಿದೆ.
ಬಂಗಾಳಕೊಲ್ಲಿಯ ತಿರುಗುವಿಕೆಯು ಉತ್ತರ ಪ್ರದೇಶ ತಲುಪಿದ್ದು ಅಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇಂಡೋನೇಷ್ಯಾದಲ್ಲಿ ಉದ್ರೇಕಗೊಂಡಿರುವ ಜ್ವಾಲಾಮುಖಿಯು ನಮ್ಮ ಮುಂಗಾರಿನ ಮೇಲೆ ಯಾವ ರೀತಿಯ ಪರಿಣಾಮಗಳು ಬೀರಬಹುದು? ಮುಂಗಾರು ಕ್ಷೀಣಿಸುವ ಸಾಧ್ಯತೆಗಳಿವೆಯೇ? ಅಥವಾ ದೀರ್ಘ ಅವಧಿಗೆ ವಿಸ್ತರಿಸಬಹುದೇ? ತಜ್ಞರು ಅಧ್ಯಯನ ನಡೆಸಬೇಕಾದ ಅಗತ್ಯವಿದೆ.