ಚಳಿಗಾಲ ತೀವ್ರಗೊಳ್ಳುತ್ತಿರುವ ನಡುವೆಯೇ ಉತ್ತರ ಭಾರತವನ್ನು ದಟ್ಟವಾದ ಮಂಜು ಮತ್ತು ತಾಪಮಾನ ಕುಸಿತ ಕಾಡುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಉತ್ತರ ಭಾರತದ ಹಲವಾರು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಹೊಸ ಶೀತ ಅಲೆ ಎಚ್ಚರಿಕೆ ನೀಡಿದೆ.
ಜನವರಿ 12 ರ ಸೋಮವಾರ ಬಿಡುಗಡೆ ಮಾಡಿದ ಹವಾಮಾನ ಬುಲೆಟಿನ್ ಪ್ರಕಾರ, ಉತ್ತರ ಪ್ರದೇಶ, ಜಮ್ಮು–ಕಾಶ್ಮೀರ, ಹರಿಯಾಣ, ಚಂಡೀಗಢ, ದೆಹಲಿ ಹಾಗೂ ಉತ್ತರಾಖಂಡದಲ್ಲಿ ಶೀತ ಅಲೆ ಬೀಸುವ ಸಾಧ್ಯತೆ ಇದೆ. ಇದೇ ವೇಳೆ ರಾಜಸ್ಥಾನ, ಬಿಹಾರ ಮತ್ತು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮೀಜೋರಾಂ, ತ್ರಿಪುರ, ಮಣಿಪುರ ಹಾಗೂ ನಾಗಾಲ್ಯಾಂಡ್‌ನ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಮತ್ತು ಶೀತ ಅಲೆಯ ಪರಿಸ್ಥಿತಿ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.
ಹವಾಮಾನ ಇಲಾಖೆಯ ಮಾಹಿತಿಯಂತೆ, ಜನವರಿ 17, 2026 ರವರೆಗೆ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸುವ ನಿರೀಕ್ಷೆಯಿದೆ. ಸೋಮವಾರ ದೆಹಲಿಯ ಸಫ್ದರ್ಜಂಗ್‌ನಲ್ಲಿ ಕನಿಷ್ಠ ತಾಪಮಾನ 3.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಭಾನುವಾರ ಆಯನಗರ ಪ್ರದೇಶದಲ್ಲಿ 2.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿತ್ತು. ಪಾಲಂನಲ್ಲಿ ಕನಿಷ್ಠ ತಾಪಮಾನ ಸುಮಾರು 3 ಡಿಗ್ರಿಯಾಗಿದ್ದು, ಸಫ್ದರ್ಜಂಗ್‌ನಲ್ಲಿ 4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಟ್ಟ ಮಂಜಿನ ಪರಿಣಾಮವಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ವಿಶೇಷ ಸಲಹೆ ನೀಡಿದೆ. ಬೆಳಿಗ್ಗೆ 8 ಗಂಟೆಗೆ ಹೊರಡಿಸಿದ ಸೂಚನೆಯಂತೆ, ಕಡಿಮೆ ಗೋಚರತೆ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸುವಂತೆ ತಿಳಿಸಲಾಗಿದೆ.
ಪ್ರಸ್ತುತ ದೆಹಲಿಯಲ್ಲಿ CAT III ಷರತ್ತುಗಳನ್ನು ಜಾರಿಗೊಳಿಸಲಾಗಿದ್ದು, ಇದೇ ಷರತ್ತುಗಳ ಅಡಿಯಲ್ಲಿ ವಿಮಾನ ಸಂಚಾರ ನಡೆಯುತ್ತಿದೆ. ಇದರಿಂದಾಗಿ ವಿಮಾನಗಳ ವಿಳಂಬ ಮತ್ತು ರದ್ದು ಸಾಧ್ಯತೆ ಇದೆ. ಪ್ರಯಾಣಿಕರು ಇತ್ತೀಚಿನ ವಿಮಾನ ಮಾಹಿತಿಗಾಗಿ ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಅಥವಾ ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸುವಂತೆ ವಿಮಾನ ನಿಲ್ದಾಣ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ




