ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನಗಳು ಬರುವುದೇ ಅಪರೂಪ. ಬಂದ ಅನುದಾನಗಳು ಸರಿಯಾಗಿ ಬಳಕೆಯಾಗಬೇಕು, ಗುಣಮಟ್ಟದಿಂದ ಕೂಡಿರಬೇಕು ಎನ್ನುವುದು ಗ್ರಾಮೀಣ ಜನರೆಲ್ಲರ ಒತ್ತಾಯ. ಆದರೆ ಅನೇಕರು ಗ್ರಾಮೀಣ ಭಾಗಗಳಲ್ಲಿ ಗುಣಮಟ್ಟವಿಲ್ಲದ ಕಾಮಗಾರಿ ಮಾಡಿದರೆ ಯಾರಿಗೂ ತಿಳಿಯದು ಅಂದುಕೊಳ್ಳುತ್ತಾರೆ. ಅಂತಹವರಿಗೆ ಕೊಲ್ಲಮೊಗ್ರದ ಈ ಘಟನೆ ಎಚ್ಚರಿಕೆಯಾಗಬೇಕು.

ಸುಳ್ಯ ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಕಟ್ಟ-ಕರಂಗಲ್ಲು-ಕೊಲ್ಲಮೊಗ್ರ ಸಂಪರ್ಕ ರಸ್ತೆಗೆ ಸುಮಾರು 5.5ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ “ನಮ್ಮ ಗ್ರಾಮ-ನಮ್ಮ ರಸ್ತೆ”ಯ ಮೂಲಕ ಅನುದಾನ ಬಿಡುಗಡೆಗೊಂಡಿತ್ತು. ಈ ಕಾಮಗಾರಿ ಕಳೆದ ಎರಡು ತಿಂಗಳ ಹಿಂದೆ ಪೂರ್ತಿಗೊಂಡು ಸಂಚಾರಕ್ಕೆ ಯೋಗ್ಯವಾಗಿತ್ತು. ಆದರೆ ಕಾಮಗಾರಿ ನಡೆಯುವ ಸಮಯದಲ್ಲಿ ಊರಿನ ಜನರು ಪದೇ ಪದೇ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾಕಷ್ಟು ಬಾರಿ ದೂರು ಇಂಜಿನಿಯರ್ ಅವರಿಗೆ ನೀಡಿದ್ದರು. ಹಾಗಿದ್ದರೂ ಕ್ರಮಕೈಗೊಂಡಿಲ್ಲ ಎಂಬ ಆರೋಪ ಬಂದಿತ್ತು.ಈ ಕಾಮಗಾರಿ ಕುಂದಾಪುರದ ಮೂಲದ ಗುತ್ತಿಗೆದಾರರು ಪಡೆದುಕೊಂಡಿದ್ದರು.

ಮಳೆ ಪ್ರಾರಂಭವಾಗಿ ಮೊದಲ ವಾರದಲ್ಲಿ ಕಾಮಗಾರಿ ಹಲವು ಕಡೆಗಳಲ್ಲಿ ಗುಂಡಿ ಹಾಗೂ ಕಾಂಕ್ರೀಟು ಸಂಪೂರ್ಣವಾಗಿ ಬಿರುಕು ಕಾಣಿಸಿಕೊಂಡು ಬಹುಕಾಲದ ಬೇಡಿಕೆಯ ರಸ್ತೆ ಜನರಿಗೆ ನಿರಾಸೆ ಮೂಡಿಸಿ ಆಕ್ರೋಶಕ್ಕೆ ಕಾರಣವಾಗಿತ್ತು.ಮೊದಲ ಮಳೆಗೆ ತಡೆಗೋಡೆ ಒಂದು ಕುಸಿದು ಹೋಗಿತ್ತು.ಈ ಸಂಬಂಧ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಸ್ಥಳೀಯರು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದ ತಕ್ಷಣ ಸ್ಪಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದಾಗ ಕಾಮಗಾರಿಯ ಗುಣಮಟ್ಟ ಕೆಳದರ್ಜೆಯಲ್ಲಿರುವುದು ಕಂಡುಬಂದಿದೆ.ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಊರಿನವರು ತರಾಟೆಗೆ ತೆಗೆದುಕೊಂಡರು.

ಇಂಜಿನಿಯರ್ ಅವರಿಗೆ ಕಳಪೆ ಕಾಮಗಾರಿ ಬಗ್ಗೆ ನಿರಂತರ ದೂರು ನೀಡುತ್ತಿದ್ದ ಉದಯ ಶಿವಾಲ ಅವರ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿರುವ ಬಗ್ಗೆ ಉದಯ ಶಿವಾಲ ಪ್ರಶ್ನಿಸಿದರು.ಸಮಸ್ಯೆಗಳನ್ನು ಪ್ರಶ್ನಿಸುವವರಿಂದ ತಪ್ಪಿಸಿಕೊಳ್ಳುವ ಬಗ್ಗೆ ಸಾರ್ವಜನಿಕರು ಹೇಳಿದರು.
ತಕ್ಷಣವೇ ಕಳಪೆಯಾದ ಕಾಮಗಾರಿಯನ್ನು ಸಂಪೂರ್ಣವಾಗಿ ತೆಗೆದು ಹೊಸ ಕಾಮಗಾರಿ ನಡೆಸಿಕೊಡುವಂತೆ ಎಕ್ಸ್ ಕ್ಯೂಟಿವ್ ಇಂಜಿನಿಯರ್ ಸೂಚಿಸಿದರು. ಸಾರ್ವಜನಿಕರೊಂದಿಗೆ ನಾನು ಖಂಡಿತ ಇರುತ್ತೇನೆ ನೀವು ಭಯ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕಾಮಗಾರಿ ಪೂರ್ತಿಗೊಂಡ ಬಳಿಕ ಇನ್ನೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ. ಕಳಪೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಇಂಜಿನಿಯರ್ ವೇಣುಗೋಪಾಲ್ ಭರವಸೆ ನೀಡಿದರು.
