ಒಂದೆಲಗ(Brahmi) ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ(Plant). ಅದು ಎಲೆ ಒಂದಾದರೂ ಗುಣ ಹಲವು ಎಂಬಂತೆ ಆರೋಗ್ಯ(Health) ವರ್ಧಕವಂತೂ ಹೌದು. ಸಾಮಾನ್ಯವಾಗಿ ಒಂದೆಲಗವು ಹಚ್ಚಹಸುರಿನಿಂದ ಕೂಡಿ, ಉರುಟುರುಟಾದ ಎಲೆ ಹೊಂದಿರುತ್ತದೆ. ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುವ ಇದು ಮೂರರಿಂದ ನಾಲ್ಕು ಅಂಗುಲಗಳಷ್ಟು ಎತ್ತರಕ್ಕೂ ಹಬ್ಬಬಲ್ಲುದು. ಒಂದೆಲಗದ ಮೂಲ ಏಷ್ಯಾ ಎಂದು ಗುರುತಿಸಲಾಗಿದೆ. ಸುಶ್ರುತ ಸಂಹಿತೆಧಿಯಲ್ಲಿಯೂ ಒಂದೆಲಗದ ಉಲ್ಲೇಖವಿದ್ದು, ಆಹಾರ(Food), ಬ್ರಾಹ್ಮಿ ಔಷಧವಾಗಿಯೂ(Medicine) ಇದನ್ನು ಉಪಯೋಗಿಸಲಾಗುತ್ತದೆ. ಭಾರತವಲ್ಲದೆ ದಕ್ಷಿಣ ಆಫ್ರಿಕಾ, ಚೀನಾಗಳಲ್ಲೂ ಸಾಂಪ್ರದಾಯಿಕ ಔಷಧವಾಗಿ ಬಳಸುತ್ತಾರೆ.
ವೈಜ್ಞಾನಿಕವಾಗಿ ‘ಸೆಂಟಿಲ್ಲಾ ಏಸಿಯಾಟಿಕ್’ ಎಂದು ಕರೆಯಿಸಿಕೊಳ್ಳುವ ಇದು ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಹೆಸರನ್ನು ಹೊಂದಿದೆ. ಕನ್ನಡದಲ್ಲಿ ಒಂದೆಲಗ, ಸಂಸ್ಕೃತದಲ್ಲಿ ಮಂಡೂಕಪರ್ಣಿ, ಹಿಂದಿಯಲ್ಲಿ ಬ್ರಾಹ್ಮಿ, ತುಳುವಿನಲ್ಲಿ ತಿಮರೆ, ಆಡುಭಾಷೆಯಲ್ಲಿ ಉರಗೆ, ಕೊಂಕಣಿ, ಮರಾಠಿ ಭಾಷೆಗಳಲ್ಲಿ ಕರಾನ್ನೊ, ತೆಲುಗಿನಲ್ಲಿ ಸರಸ್ವತೀ ಇವುಗಳಲ್ಲದೆ ವಲ್ಲಾಡಿ, ನುಂಡೂಕ, ದಿವ್ಯಾ, ಪರ್ಣಿ, ಏಕಪಾನಿ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ.ಒಂದೆಲಗ ತನ್ನಷ್ಟಕ್ಕೇ ಹುಟ್ಟಿ ಬೆಳೆಯುತ್ತದೆ. ಇದನ್ನು ನಾಟಿಗೈದು ಕೃಷಿ ಮಾಡುವ ಕ್ರಮ ಸಾಮಾನ್ಯವಾಗಿ ಇಲ್ಲ. ಧಾರಾಳ ನೀರಿನ ಆಶ್ರಯವುಳ್ಳ ನೆರಳು ಮತ್ತು ತಂಪಿನ ಪ್ರದೇಶಗಳಲ್ಲಿ ಮಣ್ಣಿನಲ್ಲಿರುವ ಸತ್ವ ಹೀರಿ ಬೆಳೆಯುತ್ತದೆ.
ಒಂದೆಲಗ ಔಷಧೀಯ ಗುಣಗಳು ಒಂದೆಲಗದಲ್ಲಿ ಔಷಧೀಯ ಗುಣವಿರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದರಲ್ಲಿರುವ ಬೆಕೊಸೈಡ್ ಎ ಮತ್ತು ಬಿ ರಾಸಾಯನಿಕವು ಮೆದುಳಿನಲ್ಲಿರುವ ನೆನಪು ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಪುನಶ್ಚೇತನ ನೀಡುವುದು.
ಒಂದೆಲಗದ ಬಳ್ಳಿ, ಎಲೆ, ಕಾಂಡ ಇವುಗಳನ್ನು ಚಟ್ನಿ, ತಂಬುಳಿ, ಹಾಗೂ ತಲೆಗೆ ಹಚ್ಚುವ ಎಣ್ಣೆಯ ತಯಾರಿಕೆಗಾಗಿ ಉಪಯೋಗವಾಗುವ ಗಿಡಮೂಲಿಕೆಯಾಗಿದೆ. ಇದೊಂದು ಉತ್ತಮ ಸ್ಮರಣಶಕ್ತಿ ವರ್ಧಕ ಔಷದೀಯ ಗುಣಗಳುಳ್ಳ ಬಳ್ಳಿ. ಒಂದೆಲಗ ಅಥವಾ ಉರಗದ ಸೊಪ್ಪಿನ ರಸವನ್ನು ಒಂದು ಚಮಚ ಶುದ್ಧ ಜೇನು ತುಪ್ಪ ಬೆರೆಸಿ ನಿತ್ಯವೂ ಮಕ್ಕಳಿಗೆ ನೀಡಿದರೆ ಮಕ್ಕಳ ಸ್ಮರಣಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಅಲ್ಲದೆ ರಕ್ತಹೀನತೆಯನ್ನೂ ನಿವಾರಿಸುತ್ತದೆ. ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಅರ್ಧ ಚಮಚದಿಂದ ನಾಲ್ಕು ಚಮಚದವರೆಗೆ ಜೇನು ತುಪ್ಪ ಬೆರೆಸಿ ನೀಡುವುದರಿಂದ ದೇಹ ಮನಸ್ಸು ಎರಡರ ಆರೋಗ್ಯವೂ ವೃದ್ಧಿಸುತ್ತದೆ. ಅಲ್ಲದೆ ಮನಸ್ಸನ್ನು ಶಾಂತಗೊಳಿಸಲು, ಸ್ಥಿರಗೊಳಿಸಲು, ಏಕಾಗ್ರತೆ, ಹೆಚ್ಚಿಸಲು ಹಾಗೂ ಸಾತ್ವಿಕತೆ ವರ್ಧಿಸಲು ಒಂದೆಲಗ ಸಹಕಾರಿ ಹಾಗಾಗಿ ಆಧ್ಯಾತ್ಮ ಸಾಧಕರು ಪ್ರಾಚೀನದಿಂದಲೂ ಬಳಸುತ್ತಿರುವ ಈ ಗಿಡಮೂಲಿಕೆಗೆ ದಿವ್ಯಾ, ಸರಸ್ವತೀ ಎಂಬ ಹೆಸರುಗಳೂ ಇವೆ.
ಅರ್ಧ ಚಮಚ ಒಂದೆಲಗದ ರಸಕ್ಕೆ ಒಂದು ಚಮಚದಷ್ಟು ಜೇನುತುಪ್ಪ ಸೇರಿಸಿ ಒಂದು ತಿಂಗಳ ಕಾಲ ಸೇವಿಸಿದರೆ ರಕ್ತಹೀನತೆ ನಿವಾರಣೆಯಾಗುತ್ತದೆ. ಹತ್ತು ಒಂದೆಲಗದ ಎಲೆ ಮತ್ತು 5 ಕಾಳುಮೆಣಸನ್ನು ಅರೆದು ಒಂದು ಬಟ್ಟಲು ಮಜ್ಜಿಗೆಯಲ್ಲಿ ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ಕೆಲ ಸಮಯದವರೆಗೆ ಮಾಡಿದರೆ ಹೃದಯದ ದೌರ್ಬಲ್ಯ ಗುಣವಾಗುತ್ತದೆ.
- ಒಂದೆಲಗ ಸೊಪ್ಪುನ್ನು ಅರೆದು ಅದರ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುತ್ತಿದ್ದರೆ ಮಹಿಳೆಯರ ಬಿಳಿ ಸೆರಗಿನ ಸಮಸ್ಯೆ ದೂರವಾಗುತ್ತದೆ.
- ನೆರಳಿನಲ್ಲಿ ಚೆನ್ನಾಗಿ ಒಣಗಿಸಿದ ಒಂದೆಲಗ ಸೊಪ್ಪುನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿ ಇಡಬೇಕು. ಪ್ರತಿದಿನ ಒಂದು ಚಮಚದಷ್ಟು ಚೂರ್ಣವನ್ನು ಸಮಪ್ರಮಾಣದ ಕಲ್ಲುಸಕ್ಕರೆ ಪುಡಿಯೊಂದಿಗೆ ಬರಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹಕ್ಕೆ ಪುಷ್ಟಿ, ಶಕ್ತಿ ದೊರೆಯುತ್ತದೆ.
- ಮೂರು – ನಾಲ್ಕು ಚಮಚದಷ್ಟು ಒಂದೆಲಗ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮೂರು – ನಾಲ್ಕು ಬಾರಿ ಸೇವಿಸುವುದರಿಂದ ಸ್ವರದ ಸಮಸ್ಯೆ ನಿವಾರಣೆಯಾಗುತ್ತದೆ.
- ಆನೆಕಾಲು ರೋಗದಿಂದ ಬಳಲುತ್ತಿರುವವರಿಗೆ ಒಂದೆಲಗದ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಪ್ರಯೋಜವಾಗುತ್ತದೆ.
- ಒಂದೆಲಗದ ರಸವನ್ನು ಗಾಯ ಮತ್ತು ಹುಣ್ಣುಗಳಿಗೆ ಹಚ್ಚಿದರೆ ಅವು ಬೇಗನೆ ವಾಸಿಯಾಗುತ್ತದೆ.
- ಕೆಮ್ಮು ದಮ್ಮು ನಿವಾರಣೆಗೆ ಒಂದೆಲಗ ಸೊಪ್ಪುನ್ನು ಜಜ್ಜಿ, ಶುಂಠಿ ಮತ್ತು ಕಾಳುಮೆಣಸನ್ನು ಜಜ್ಜಿ ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿದ ಕಷಾಯವನ್ನು ಕುಡಿಯಬೇಕು.
- ಎಳ್ಳೆಣ್ಣೆಯನ್ನು ಒಂದೆಲಗದ ರಸದೊಂದಿಗೆ ಬೆರಸಿ ಕುದಿಸಿದ ತೈಲವನ್ನು ತಣಿಸಿ, ಶೋದಿಸಿ ತಲೆಗೆ ಹಚ್ಚಿಕೊಳ್ಳತ್ತಿದ್ದರೆ ದೃಷ್ಟಿಶಕ್ತಿ ಹೆಚ್ಚುತ್ತದೆ.
- ತೀವ್ರವಾದ ತಲೆನೋವು ಕಾಡುತ್ತಿರುವಾಗ ಒಂದೆಲಗ ಸೊಪ್ಪುನ್ನು ಅರೆದು ರಸವನ್ನು ತೆಗೆದು ಹಣೆಗೆ ಲೇಪಿಸಿಕೊಳ್ಳಬೇಕು.
- ತೆಂಗಿನೆಣ್ಣೆಗೆ ಒಂದೆಲಗದ ರಸವನ್ನು ಮಿಶ್ರಮಾಡಿ ತಲೆಗೆ ಹಚ್ಚಿಕೊಂಡರೆ ತಲೆ ಕೂದಲಿನ ಆರೊಗ್ಯಕ್ಕೆ ಒಳ್ಳೆಯದು.
- ಸೈನಸೈಟಿಸ್ ಸಮಸ್ಯೆ ಇದ್ದಾಗ ಹುರುಳಿಯನ್ನು ಒಂದೆಲಗ ಸೊಪ್ಪಿನೊಂದಿಗೆ ಬೇಯಿಸಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಬೆರಸಿ ಸೇವಿಸಿದರೆ ಕಫವು ಕರಗಿ ಸೈನಸ್ ಸಮಸ್ಯೆ ನಿವಾರಣೆಯಾಗುತ್ತದೆ
ಅಪೌಷ್ಟಿಕತೆ ಹಾಗೂ ಪಿತ್ತದೋಷದಿಂದ ಕೂದಲು ಉದುರುವುದು, ಬಿಳಿಯಾಗುವುದನ್ನು ತಡೆಯಲು ಒಂದೆಲಗದ ಎಲೆ ಸಹಿತ ಬಳ್ಳಿಯನ್ನು ತೊಳೆದು, ಅರೆದು ಅದರ ರಸಕ್ಕೆ ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಗೆ ಸೇವಿಸುವುದು ಒಳ್ಳೆಯದು.
ಬಾಣಂತಿಯರಿಗೆ ಒಂದೆಲಗವನ್ನು ಒಣಗಿಸಿ ಹುಡಿ ಮಾಡಿ, ಜೀರಿಗೆ ಪುಡಿಯೊಂದಿಗೆ ಹಾಲಿನಲ್ಲಿ ಬೆರೆಸಿ ಸೇವಿಸಲು ನೀಡುವುದರಿಂದ ಎದೆಹಾಲು ವೃದ್ಧಿಸುತ್ತದೆ. ಉರಿಮೂತ್ರ, ಮೂತ್ರಕಟ್ಟು ಉಂಟಾದಾಗ ಒಂದು ಕಪ್ ಎಳನೀರಿಗೆ 4 ಚಮಚ ಒಂದೆಲಗದ ರಸ, ಅರ್ಧ ಚಮಚ ಕೊತ್ತಂಬರಿ ಬೀಜದ ಹುಡಿ ಬೆರೆಸಿ ಕುಡಿದರೆ ಶಮನವಾಗುವುದು.
ಮಲಬದ್ಧತೆಯಿಂದ ಬಳಲುವವರು ಒಂದೆಲಗದಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಿದರೆ ಉತ್ತಮ.
ಒಂದೆಲಗದ ಪಲ್ಯ, ತಂಬುಳಿ, ಚಟ್ನಿ, ಸಲಾಡ್ ಬಲು ರುಚಿ. ಅಲ್ಲದೆ ಚಾ, ಕಾಫಿಯ ಬದಲಾಗಿ ಒಂದೆಲಗದ ಪುಡಿಯಿಂದ ಕಷಾಯ ತಯಾರಿಸಿ ಸೇವಿಸುವವರೂ ಇದ್ದಾರೆ. ಬೇಸಗೆಯಲ್ಲಿ ಇದರ ಜ್ಯೂಸ್ ಆರೋಗಕ್ಕೆ ಹಿತಕರ. ನಿದ್ರಾಹೀನತೆ ಇರುವವರು ಒಂದೆಲಗದಿಂದ ತಯಾರಿಸಿದ ಗುಳಿಗೆಗಳನ್ನು ಸೇವಿಸುವುದರಿಂದ ಹಾಯಾಗಿ ನಿದ್ರಿಸಬಹುದು. ಹೀಗೆ ಹಿತ್ತಲ ಬಳ್ಳಿಯ ಔಷಧೀಯ ಗುಣಗಳು ವೈದ್ಯಕೀಯ ಲೋಕದಲ್ಲೂ ಪ್ರಸಿದ್ಧಿಯನ್ನು ಪಡೆದಿವೆ. ನಮ್ಮಲ್ಲಿ ಇಂದಿಗೂ ಸಣ್ಣ ಮಕ್ಕಳಿಗೆ ಮುಂಜಾನೆ ಖಾಲಿ ಹೊಟ್ಟೆಗೆ ಒಂದು ಚಮಚ ಒಂದೆಲಗ ರಸ ಹಾಗೂ ಆಗಾಗ ತುಳಸಿ ರಸವನ್ನು ನೀಡುವ ಪದ್ದತಿ ಇದೆ. ಹಿಂದೆ ಎಲ್ಲಡೆ ಕಾಣ ಸಿಗುತ್ತಿದ್ದ ಈ ಬಳ್ಳಿಗಳು ಇಂದು ಅಲ್ಲಲ್ಲಿ ಮಾತ್ರ ಕಾಣ ಸಿಗುತ್ತವೆ.
Source : health tips