ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!

October 8, 2026
1:15 PM
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಮನಸ್ಸಿನಲ್ಲಿರುವ ಶ್ಲಾಘನೆಯನ್ನು ಹೇಳದೇ ಉಳಿಸದೆ, ಸಮಯಕ್ಕೆ ಸರಿಯಾಗಿ ಒಂದು ಮಾತು ಹೇಳುವುದು ಕುಟುಂಬದ ವಾತಾವರಣವನ್ನೇ ಬದಲಿಸಬಹುದು.

ಮೊನ್ನೆ ಬೆಳಗಾವಿಗೆ ಹೋಗಿದ್ದಾಗ ರೈತರೊಂದಿಗೆ ಮಾತನಾಡಲು ಅಲ್ಲಿನ ಹೊಲಕ್ಕೆ ಭೇಟಿ ನೀಡಿದ್ದೆ. ಅಲ್ಲಿ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಾಳ ಅವರು ತಮ್ಮ ಕೃಷಿ ಬದುಕಿನ ಬಗ್ಗೆ ಹೇಳುತ್ತಿದ್ದರು. ಮಾತಿನ ನಡುವೆ ಪತ್ನಿಯ ಪಾತ್ರದ ಬಗ್ಗೆ ಅವರು ಹೇಳಿದ ಒಂದು ಮಾತು ನನಗೆ ಬಹಳ ಇಷ್ಟವಾಯಿತು. “ಜೋಳದ ತಳಿ ಉಳಿಸುವಲ್ಲಿ ಪ್ರಮುಖ ಪಾತ್ರ ಅವಳದೇ. ಅವಳೇ ನನ್ನ ಕೃಷಿ ಕಾಯಕ, ಸಾವಯವ ಕೃಷಿಯನ್ನು ಉಳಿಸುವುದಕ್ಕೆ, ಬೆಳೆಸುವುದಕ್ಕೆ ಕಾರಣ.” ಎಂದರು. ತಮ್ಮ ಕೃಷಿ ಸಾಧನೆಯ ಹಿಂದೆ ಪತ್ನಿಯ ಪಾತ್ರವನ್ನು ಅವರು ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಂಡು, ಶ್ಲಾಘಿಸುತ್ತಿದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಆ ಅಮ್ಮನ ಮುಖವನ್ನೂ ನಾನು ಗಮನಿಸಿದೆ. ಅಲ್ಲಿ ಒಂದು ರೀತಿಯ ಸಂತೋಷವಿತ್ತು. ಅದು ದೊಡ್ಡ ಪ್ರಶಸ್ತಿ ಸಿಕ್ಕ ಸಂತೋಷವಲ್ಲ. ಸನ್ಮಾನವಾದ ಖುಷಿಯೂ ಅಲ್ಲ. ಇನ್ನೊಬ್ಬರ ಮುಂದೆ ತನ್ನ ಬದುಕಿನ ಶ್ರಮವನ್ನು ತನ್ನ ಮನೆಯವನು ಗುರುತಿಸಿದ್ದಾನೆ ಎನ್ನುವ ಸಣ್ಣ ಖುಷಿ. ಅಷ್ಟೇ ಸಾಕಾಗುತ್ತದೆ.

ಈ ಘಟನೆ ನೋಡಿ ಬಂದಾಗ, ಪುತ್ತೂರಿನ ಸೇಡಿಯಾಪಿನ ಸ್ವಪ್ನಕ್ಕ ಅವರ ಕೃಷಿ ಚಟುವಟಿಕೆಗಳೂ ನೆನಪಾಗುತ್ತವೆ. ಕಸಿ ಕಟ್ಟುವುದು, ತರಕಾರಿ ಕೃಷಿ ಸೇರಿದಂತೆ ಹಲವು ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ತಮ್ಮ ಕೃಷಿ ಬದುಕನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕರಿಗೆ ಪ್ರೇರಣೆಯಾಗುತ್ತಿದ್ದಾರೆ ಕೂಡಾ. ತಮ್ಮ ಕೃಷಿ ಬದುಕಿನಲ್ಲಿ ಕೃಷಿಕನೂ ಆಗಿರುವ ಪತಿ ಚೈತ್ರನಾರಾಯಣ ಅವರ ನೆರವು, ಸಹಕಾರದ ಬಗ್ಗೆಯೂ ಅವರು ಆಗಾಗ ಮುಕ್ತವಾಗಿ ತನ್ನದೇ ರೀತಿಯಲ್ಲಿ ಹೇಳಿಕೊಳ್ಳುತ್ತಾರೆ.

ಇಬ್ಬರ ಮಾತುಗಳಲ್ಲೂ ನನಗೆ ಕಾಣುವುದು ಒಂದೇ ಸಂಗತಿ. ಕೃಷಿ ಒಬ್ಬರದ್ದಲ್ಲ, ಎಲ್ಲರೂ ಸೇರಿ. ಇದು ಕೃಷಿಯಲ್ಲಷ್ಟೇ ಅಲ್ಲ. ಎಲ್ಲಾ ಕಡೆಯೂ ಇದೇ ಹೆಜ್ಜೆ.

ಹೊಲದಲ್ಲಿ ಒಬ್ಬರು ಕಾಣಿಸಬಹುದು. ಆದರೆ ಆ ಕೃಷಿಯ ಹಿಂದೆ ಒಂದು ಇಡೀ ಕುಟುಂಬದ ಶ್ರಮವಿರುತ್ತದೆ. ಒಬ್ಬರು ಹೊಲದಲ್ಲಿ ದುಡಿಯುತ್ತಿದ್ದರೆ, ಇನ್ನೊಬ್ಬರು ಮನೆಯೊಳಗೆ ದುಡಿಯುತ್ತಿರುತ್ತಾರೆ. ಒಬ್ಬರು ಮಾರುಕಟ್ಟೆ ನೋಡುತ್ತಿದ್ದರೆ, ಮತ್ತೊಬ್ಬರು ಹಟ್ಟಿಯನ್ನು ನೋಡಿಕೊಳ್ಳುತ್ತಾರೆ. ಒಬ್ಬರು ಬೀಜ ಉಳಿಸುತ್ತಿದ್ದರೆ, ಇನ್ನೊಬ್ಬರು ಮುಂದಿನ ಬೆಳೆಗೆ ಅದನ್ನು ಸಿದ್ಧಪಡಿಸುತ್ತಿರುತ್ತಾರೆ. ಈ ಕೆಲಸಗಳಲ್ಲಿ ಬಹಳಷ್ಟು ಕೆಲಸಗಳಿಗೆ ಹೆಸರೇ ಇರುವುದಿಲ್ಲ. ಆದ್ದರಿಂದ ಅವುಗಳ ಮೌಲ್ಯವೂ ಕೆಲವೊಮ್ಮೆ ಕಾಣಿಸುವುದಿಲ್ಲ.

ನಮ್ಮ ಮನೆಯಲ್ಲೂ ಹಾಗೆಯೇ. ನನ್ನ ಪ್ರಯಾಣದ ಸಂದರ್ಭಗಳಲ್ಲಿ ಕೃಷಿ ಕೆಲಸದ ನಿರ್ವಹಣೆ, ತರಕಾರಿ ಕೃಷಿ, ಹಟ್ಟಿಯ ಕೆಲಸ, ಮನೆಯ ಹಲವು ಜವಾಬ್ದಾರಿಗಳು ಇದ್ದೇ ಇರುತ್ತವೆ. ನಾನು ಹೊರಗಿರುವಾಗ ಮನೆಯ ಈ ಕೆಲಸಗಳನ್ನು ನನ್ನ ಮನೆಯವಳು ನೋಡಿಕೊಳ್ಳುತ್ತಾಳೆ. ಅದು ಅವಳಿಗೆ ಸಹಜವಾದ ಕೆಲಸವಾಗಿ ಹೋಗಿದೆ. ಹಾಗೆಂದು ಪ್ರತೀ ಸಲವೂ ಹಾಗಲ್ಲ, ಕೆಲವು ಸಂದರ್ಭ ನಾನು ಮನೆಯಲ್ಲಿ ಉಳಿದು ಅವಳನ್ನೂ ಕಳುಹಿಸುವುದು ಇದೆ.

ಬಹುಶಃ ಇಲ್ಲಿಯೇ ನಾವು ಮಾಡುವ ಒಂದು ತಪ್ಪಿದೆ. ಪ್ರತಿದಿನ ನಡೆಯುವ ಕೆಲಸದ ಬೆಲೆ ನಮಗೆ ಕಾಣುವುದಿಲ್ಲ. ಯಾವಾಗ ಮನೆಯ ಎಲ್ಲಾ ಕೆಲಸಗಳೂ ನಮ್ಮ ಮೇಲೆಯೇ ಬೀಳುತ್ತದೆ. ಆಗ ಅರಿವಾಗುತ್ತದೆ ಸಂಕಷ್ಟ..!. ದಿನವೂ ಊಟ ಸಿದ್ಧವಾಗುತ್ತದೆ. ಮಕ್ಕಳು ಶಾಲೆಗೆ ಹೋಗುತ್ತಾರೆ,  ಹಟ್ಟಿ ಸ್ವಚ್ಛವಾಗಿರುತ್ತದೆ. ತರಕಾರಿ ಬೆಳೆಯುತ್ತದೆ. ಮನೆಯ ಸಣ್ಣಪುಟ್ಟ ಕೆಲಸಗಳು ಸಾಗುತ್ತವೆ. ಎಲ್ಲವೂ ಸರಾಗವಾಗಿದ್ದರೆ, “ಇದು ನಡೆಯಲೇಬೇಕಾದದ್ದು” ಎಂದುಕೊಂಡು ಬಿಡುತ್ತೇವೆ. ಆದರೆ ಅದರ ಹಿಂದೆ ಸಮಯವಿದೆ. ಶ್ರಮವಿದೆ, ದಣಿವಿದೆ. ಕೆಲವೊಮ್ಮೆ ಸ್ವಂತ ಆಸೆಗಳನ್ನು ಬದಿಗಿಟ್ಟು ಮಾಡುವ ತ್ಯಾಗವೂ ಇದೆ. ನಾವು ಗಮನಿಸುವುದು ಬಹಳ ಬಾರಿ ಕೆಲಸ ನಿಂತಾಗ ಮಾತ್ರ, ಅಥವಾ ನಮಗೇ ಆ ಕೆಲಸ ಸಿಕ್ಕಾಗ ಮಾತ್ರಾ.

ಎಷ್ಟೊಂದು ಲಿಂಕ್‌ ಇರಬೇಕಾಗುತ್ತದೆ ನೋಡಿ, ಇದೊಂದು ಸಣ್ಣ ಉದಾಹರಣೆ. ಬೆಳಗ್ಗೆ ಹಾಲು ಕರೆದು ಒಳಗೆ ತಲುಪಿದ ನಂತರ ಮುಂದಿನ ಕೆಲಸ ನಮಗಿಲ್ಲ. ಹಾಗೆ ನೋಡಿದರೆ ಉಳಿದ ಕೆಲಸಗಳೇ ಹೆಚ್ಚಿರುತ್ತದೆ. ಹಾಲು ಕಾಯಿಸುವುದು, ಕೆನೆ ತೆಗೆಯುವುದು, ಮೊಸರು ಮಾಡುವುದು, ಮಜ್ಜಿಗೆ ಕಡೆಯುವುದು, ಬೆಣ್ಣೆ ಸಂಗ್ರಹಿಸುವುದು ಅದನ್ನು ಶೇಖರಿಸಿ ತುಪ್ಪ ಮಾಡುವವರೆಗೆ ಎಷ್ಟು ಕೆಲಸ..?

ಇದು ಹಳ್ಳಿಯ ಕಥೆಯಷ್ಟೇ ಅಲ್ಲ. ನಗರದಲ್ಲೂ ಇದೇ ಬದುಕು. ಬೆಳಗ್ಗೆ ಐದು ಗಂಟೆಗೆ ಎದ್ದು ಮಕ್ಕಳಿಗೆ ಟಿಫನ್‌ ಸಿದ್ಧ ಮಾಡುವ ಅಮ್ಮಂದಿರು. ಮನೆ ನೋಡಿಕೊಂಡು ಕೆಲಸಕ್ಕೆ ಹೋಗುವವರು. ಕೆಲಸ ಮುಗಿಸಿ ಮನೆಗೆ ಬಂದು ಮತ್ತೆ ಮನೆಯ ಜವಾಬ್ದಾರಿ ಹೊರುವವರು. ಅವರ ದಿನಚರಿಯಲ್ಲಿ “ರಜೆ” ಎಂಬ ಪದವೇ ಇಲ್ಲದಿರಬಹುದು. ಆದರೆ ಆ ಶ್ರಮಕ್ಕೆ ಬಹಳ ಬಾರಿ ಒಂದು ಸರಳ ಮಾತೂ ಸಿಗುವುದಿಲ್ಲ. ಇಂದಿನ ಅಡುಗೆ “ಚೆನ್ನಾಗಿ ಮಾಡಿದ್ದೀಯ.” ಅಥವಾ, “ನೀನು ನೋಡಿಕೊಳ್ಳುವುದರಿಂದಲೇ ನನ್ನ ಕೆಲಸ ಸುಲಭವಾಗುತ್ತದೆ.” ಇಂತಹ ಮಾತುಗಳಿಗೆ ಹಣ ಖರ್ಚಾಗುವುದಿಲ್ಲ. ಆದರೆ ಅದರ ಬೆಲೆ ದೊಡ್ಡದು.

ಮನುಷ್ಯನಿಗೆ ಯಾವಾಗಲೂ ದೊಡ್ಡ ಬಹುಮಾನ ಬೇಕಾಗಿಲ್ಲ. ತಾನು ಮಾಡುತ್ತಿರುವ ಕೆಲಸ ಯಾರಿಗಾದರೂ ಕಾಣುತ್ತಿದೆ ಎಂಬ ಭಾವನೆ ಸಾಕು. ಒಂದು ಬೆನ್ನುತಟ್ಟುವಿಕೆ… ಒಂದು ಕಾಳಜಿಯ ಮಾತು… ಒಂದು ಗೌರವದ ನೋಟ… ಇವು ಕೆಲವೊಮ್ಮೆ ದೊಡ್ಡ ಪ್ರೋತ್ಸಾಹಕ್ಕಿಂತ ಹೆಚ್ಚು ಶಕ್ತಿ ಕೊಡುತ್ತವೆ. ಅನೇಕ ಸಲ ತಾವು ಯಾರೋ ಮಾತಿಗೆ ಗೌರವ ನೀಡಿ ನಮ್ಮೆಲ್ಲಾ ಭಾವನೆಯನ್ನೂ ಬದಿಗಿಟ್ಟು ಮೌನವಾಗಿ ಬಿಡುತ್ತೇವೆ. ಆದರೆ ಆ ಮೌನವೇ ನಮ್ಮ ದೌರ್ಬಲ್ಯವಾಗಿ ಬಿಡುತ್ತದೆ. ನಮ್ಮ ಉತ್ಸಾಹ ತಗ್ಗಿಸಿದ ಬಳಿಕ ಅವರ ಕೆಲಸ ಮುಗಿಯುತ್ತದೆ..!.

ದಾಂಪತ್ಯದಲ್ಲಂತೂ ಇವುಗಳ ಬೆಲೆ ಇನ್ನಷ್ಟು. ಪ್ರೀತಿ ಎಂದರೆ ದುಬಾರಿ ಉಡುಗೊರೆಗಳಲ್ಲ. ವಿಶೇಷ ದಿನಗಳ ಆಚರಣೆಯಲ್ಲ. ಅವಳು ಅಡುಗೆ ಮಾಡಿದಾಗ “ಬಹಳ ಚೆನ್ನಾಗಿದೆ” ಎನ್ನುವುದರಲ್ಲಿ ಪ್ರೀತಿ ಇದೆ. ಅವನು ದಣಿದು ಮನೆಗೆ ಬಂದಾಗ “ಸುಸ್ತಾಯಿತಾ?” ಎಂದು ಕೇಳುವುದರಲ್ಲಿ ಪ್ರೀತಿ ಇದೆ.  ಹೊರಡುವಾಗ “Take Care” ಎನ್ನುವುದರಲ್ಲಿ ಕಾಳಜಿ ಇದೆ. ಹೊಲಕ್ಕೆ ತಂದುಕೊಡುವ ಊಟದಲ್ಲೂ ಪ್ರೀತಿ ಇದೆ. ಮತ್ತು ಮುಖ್ಯವಾಗಿ, “ನೀನು ಮಾಡುತ್ತಿರುವುದು ನನಗೆ ಕಾಣುತ್ತಿದೆ” ಎನ್ನುವ ಮಾತಿನಲ್ಲಿ ಗೌರವವಿದೆ.

ಇದಕ್ಕೆ ವಿರುದ್ಧವಾಗಿ, ಮನೆಯೊಳಗೆ ಮಾಡಿದ ಕೆಲಸಕ್ಕೆ ಮೆಚ್ಚುಗೆ ಇಲ್ಲದೆ, ಮಾಡಿದ ತಪ್ಪಿಗೆ ಮಾತ್ರ ಗಮನವಿದ್ದರೆ ನಿಧಾನವಾಗಿ ಅಂತರ ಬೆಳೆಯುತ್ತದೆ. “ನೀನು ಏನು ಮಾಡಿದ್ದೀಯ?”, ” ನೀನು ಸುಮ್ಮನೆ”.. ಎನ್ನುವ ಪ್ರಶ್ನೆ ಹೆಚ್ಚಾಗುತ್ತಾ, “ನೀನು ಇಷ್ಟು ಮಾಡಿದ್ದೀಯಲ್ಲ” ಎನ್ನುವ ಮಾತು ಕಡಿಮೆಯಾದಾಗ ಸಂಬಂಧದೊಳಗೆ ಬಿರುಕು ಮೂಡುತ್ತದೆ. ದಿನ ಬೆಳೆಗಾದರೆ “ಚರಿಪಿರಿ” ಇರುವ ಕಡೆ, ಸಿಕ್ಕಸಿಕ್ಕ ವಿಷಯಕ್ಕೆ ಜಗಳವಾದರೆ, ಯಾರದೋ ಕಾರಣಕ್ಕೆ ಜಗಳವಾದರೆ ಬಿರುಕುಗಳು ಸಹಜವೇ.  ಆ ಬಿರುಕು ಪತಿ–ಪತ್ನಿಯಲ್ಲೇ ನಿಲ್ಲುವುದಿಲ್ಲ. ಮಕ್ಕಳು ಅದನ್ನು ನೋಡುತ್ತಾ ಬೆಳೆಯುತ್ತಾರೆ. ಅಪ್ಪ ಅಮ್ಮನನ್ನು ಗೌರವಿಸುವುದನ್ನು ನೋಡುವ ಮಗು ಗೌರವ ಕಲಿಯುತ್ತದೆ. ಒಬ್ಬರ ಶ್ರಮವನ್ನು ಮತ್ತೊಬ್ಬರು ಗುರುತಿಸುವುದನ್ನು ನೋಡುವ ಮಗು ಕೃತಜ್ಞತೆ ಕಲಿಯುತ್ತದೆ. ಹೀಗಾಗಿ ಮನೆಯೊಳಗಿನ ಒಂದು ಮಾತು ಕೇವಲ ಇಬ್ಬರ ನಡುವಿನ ಮಾತಾಗಿರುವುದಿಲ್ಲ. ಅದು ಮಕ್ಕಳಿಗೆ ಸಿಗುವ ಒಂದು ಪಾಠವೂ ಆಗುತ್ತದೆ.

ಕಲ್ಲಪ್ಪ ಅವರು ಪತ್ನಿಯ ಶ್ರಮವನ್ನು ತಮ್ಮ ಕೃಷಿ ಸಾಧನೆಯ ಭಾಗವೆಂದು ಹೇಳಿದ್ದು ನನಗೆ ಇಷ್ಟವಾದದ್ದು ಇದೇ ಕಾರಣಕ್ಕೆ. ಗೆದ್ದಾಗ “ನಾನು” ಎನ್ನುವುದು ಸುಲಭ. ಆದರೆ ಗೆದ್ದಾಗ, “ನನ್ನ ಹಿಂದೆ ಅವಳೂ ಇದ್ದಾಳೆ” ಎಂದು ಹೇಳಲು ದೊಡ್ಡ ಮನಸ್ಸು ಬೇಕು. ಅವರು ಪತ್ನಿಯನ್ನು ಕೇವಲ ಹೊಗಳಲಿಲ್ಲ. ತಮ್ಮ ಯಶಸ್ಸಿನಲ್ಲಿ ಪತ್ನಿಯ ಪಾಲನ್ನು ಒಪ್ಪಿಕೊಂಡರು. ಬಹುಶಃ ಆ ಮಾತಿನ ಬೆಲೆ ಆ ಅಮ್ಮನಿಗೆ ಎಷ್ಟು ಎನ್ನುವುದು ನಮಗೆ ಗೊತ್ತಾಗದಿರಬಹುದು. ಆದರೆ ಅವರ ಮುಖದಲ್ಲಿದ್ದ ಆ ಸಣ್ಣ ಸಂತೋಷ ಸಾಕಷ್ಟು ಹೇಳುತ್ತಿತ್ತು.

ನಮ್ಮ ಬದುಕಿನಲ್ಲೂ ಇಂತಹ ಅನೇಕ ಜನರಿದ್ದಾರೆ. ನಾವು ಮುಂದೆ ಬರಲು ಹಿಂದೆ ನಿಂತವರು. ನಾವು ಹೊರಗೆ ಹೋಗಲು ಮನೆಯೊಳಗೆ ಉಳಿದವರು. ನಾವು ನಮ್ಮ ಕೆಲಸ ಮಾಡಲು ತಮ್ಮ ಕೆಲಸವನ್ನು ಮುಂದೂಡಿದವರು. ನಮ್ಮ ಯಶಸ್ಸಿನಲ್ಲಿ ತಮ್ಮ ಪಾಲು ಇದ್ದರೂ, ಅದನ್ನು ಹೇಳಿಕೊಳ್ಳದವರು. ಅವರ ಶ್ರಮವನ್ನು ನಾವು ಕೆಲವೊಮ್ಮೆ “ಅದು ಅವರ ಕೆಲಸ” ಎಂದುಕೊಂಡುಬಿಡುತ್ತೇವೆ. ಅದು ಅವರ ಕೆಲಸವಾಗಿರಬಹುದು. ಅದನ್ನು ಗುರುತಿಸುವುದು ನಮ್ಮ ಜವಾಬ್ದಾರಿಯಲ್ಲವೇ?.

ಇನ್ನೊಂದು ಸಂಗತಿ. ಕೆಲವೊಮ್ಮೆ ಮೆಚ್ಚುಗೆ ನಮ್ಮ ಮನಸ್ಸಿನಲ್ಲೇ ಇರುತ್ತದೆ. “ಅವಳು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ.” “ಅವನು ನನಗಾಗಿ ತುಂಬಾ ಶ್ರಮ ಪಡತ್ತಾನೆ.” “ಅವಳಿಲ್ಲದಿದ್ದರೆ ನನ್ನ ಬದುಕು ಇಷ್ಟು ಸರಾಗವಾಗುತ್ತಿರಲಿಲ್ಲ.” ಎಲ್ಲವೂ ಮನಸ್ಸಿನಲ್ಲಿರುತ್ತದೆ. ಆದರೆ ಹೇಳುವುದಿಲ್ಲ. ಇಲ್ಲಿಯೇ ನಾವು ತಪ್ಪು ಮಾಡುತ್ತೇವೆ. ಮನಸ್ಸಿನಲ್ಲಿರುವ ಶ್ಲಾಘನೆ, ಬಾಯಿಗೆ ಬಂದಾಗ ಮಾತ್ರ ಇನ್ನೊಬ್ಬರ ಮನಸ್ಸಿಗೆ ತಲುಪುತ್ತದೆ. ನಾವು ಪ್ರೀತಿಸುತ್ತೇವೆ ಎಂದುಕೊಂಡರೆ ಹೇಳಬೇಕು. ಗೌರವಿಸುತ್ತೇವೆ ಎಂದರೆ ತೋರಿಸಬೇಕು. ಯಾರಾದರೂ ನಮ್ಮ ಬದುಕನ್ನು ಸುಲಭಗೊಳಿಸುತ್ತಿದ್ದರೆ, ಅದನ್ನು ಗುರುತಿಸಬೇಕು. ಏಕೆಂದರೆ ಹೇಳದೇ ಉಳಿಸಿದ ಒಂದು ಮಾತು, ಕೆಲವೊಮ್ಮೆ ಎದುರಿನವರಿಗೆ ಬೇಕಿದ್ದ ಒಂದು ದಿನದ ಧೈರ್ಯವಾಗಿರಬಹುದು.

ಮನೆ ದೊಡ್ಡದಾಗಿರಬೇಕಿಲ್ಲ. ಹಣ ಜಾಸ್ತಿ ಇರಬೇಕಿಲ್ಲ. ಎಲ್ಲಾ ಸೌಲಭ್ಯಗಳೂ ಇರಬೇಕಿಲ್ಲ.  ನಮ್ಮ ಮನೆಯೊಳಗೆ ಒಬ್ಬರ ಶ್ರಮಕ್ಕೆ ಮತ್ತೊಬ್ಬರು ಬೆಲೆ ಕೊಟ್ಟರೆ ಸಾಕು. ಒಬ್ಬರ ದಣಿವನ್ನು ಮತ್ತೊಬ್ಬರು ಅರ್ಥಮಾಡಿಕೊಂಡರೆ ಸಾಕು. ಒಬ್ಬರ ಯಶಸ್ಸಿನಲ್ಲಿ ಮತ್ತೊಬ್ಬರು ತಮ್ಮ ಪಾಲನ್ನು ಕಂಡುಕೊಂಡರೆ ಸಾಕು.  ಮನೆ ಎನ್ನುವುದು ಗೋಡೆಗಳಿಂದ ಕಟ್ಟಿದ ಜಾಗವಲ್ಲ ಪರಸ್ಪರ ಅರಿತುಕೊಳ್ಳುವ ಜಾಗ.

ಕಲ್ಲಪ್ಪ ಅವರ ಆ ಒಂದು ಮಾತು ನನ್ನ ಮನಸ್ಸಿನಲ್ಲಿ ಉಳಿದಿರುವುದೂ ಅದಕ್ಕಾಗಿಯೇ. ಬಹುಶಃ ನಮ್ಮ ಮನೆಯಲ್ಲೂ ಯಾರೋ ಒಬ್ಬರು ಇಂತಹ ಒಂದು ಮಾತಿಗಾಗಿ ಕಾಯುತ್ತಿರಬಹುದು. ಅವರು ಕೇಳದೇ ಇರಬಹುದು. ನಿರೀಕ್ಷೆ ವ್ಯಕ್ತಪಡಿಸದೇ ಇರಬಹುದು. ಆದರೆ ಕಾಯುತ್ತಿರಬಹುದು. ಹಾಗಾಗಿ ಇಂದು ಒಮ್ಮೆ ಮನೆಯವರ ಕಡೆ ನೋಡಿ. ಬಹಳ ದಿನಗಳಿಂದ ಹೇಳಬೇಕೆಂದುಕೊಂಡು ಹೇಳದೆ ಉಳಿಸಿರುವ ಮಾತನ್ನು ಹೇಳಿಬಿಡಿ. “ನೀನು ಮಾಡುತ್ತಿರುವುದು ನನಗೆ ಕಾಣುತ್ತಿದೆ.” ಅಥವಾ, “ನೀನು ಇದ್ದೀಯಲ್ಲ, ಅದಕ್ಕೇ ನನಗೆ ಇಷ್ಟು ಸಾಧ್ಯವಾಗಿದೆ.” ಅಥವಾ ಬಹಳ ಸರಳವಾಗಿ “ಧನ್ಯವಾದ.”

ನಮಗೇನು ಗೊತ್ತು… ಆ ಒಂದು ಮಾತು ಅವರ ದಿನವನ್ನು ಬದಲಿಸಬಹುದು. ಅವರ ಮನಸ್ಸನ್ನು ಹಗುರಗೊಳಿಸಬಹುದು. ನಿಮ್ಮ ನಡುವಿನ ಒಂದು ಸಣ್ಣ ಅಂತರವನ್ನು ಕಡಿಮೆ ಮಾಡಬಹುದು. ಮನೆಯ ವಾತಾವರಣವನ್ನೇ ಬದಲಿಸಬಹುದು. ಕೆಲವೊಮ್ಮೆ ಬದುಕಿನ ದೊಡ್ಡ ತಿರುವುಗಳು ದೊಡ್ಡ ಘಟನೆಗಳಿಂದ ಬರುವುದಿಲ್ಲ. ನಾವು ಹೇಳಬೇಕಿದ್ದ ಒಂದು ಮಾತನ್ನು, ಸರಿಯಾದ ಸಮಯದಲ್ಲಿ ಹೇಳುವುದರಿಂದ ಬರುತ್ತವೆ.

ಒಂದು ಶ್ಲಾಘನೆ… ಬಹುಶಃ, ಒಂದು ಬದುಕಿಗೇ ಹೊಸ ತಿರುವು ಕೊಡಬಹುದು. ನನ್ನನ್ನೂ ಎಚ್ಚರಿಸಿದ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಾಳ ಅವರಿಗೆ ಧನ್ಯವಾದ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 08-10-2026 | ಅ.11ರಿಂದ ಮಳೆ ಇಳಿಕೆ; ಅ.15ರಿಂದ ಹಿಂಗಾರು ಮಳೆ ಆರಂಭದ ಸೂಚನೆ
October 8, 2026
2:48 PM
by: ಸಾಯಿಶೇಖರ್ ಕರಿಕಳ
ಜಾನುವಾರುಗಳ ಮೇವಿಗಾಗಿ ₹25 ಕೋಟಿ ಬಿಡುಗಡೆ
October 8, 2026
7:28 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನ ಐಐಎಂನಲ್ಲಿ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’ ಅಧ್ಯಯನ ವರದಿ ಬಿಡುಗಡೆ
October 8, 2026
7:21 AM
by: ದ ರೂರಲ್ ಮಿರರ್.ಕಾಂ
ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ
October 7, 2026
11:35 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror