ಆತ್ಮೀಯ ಮುಖ್ಯಮಂತ್ರಿಗಳೇ, ಪಶು ಸಂಗೋಪನಾ ಸಚಿವರೇ, ಘನ ಸರ್ಕಾರವು ಗೋ ಸಂರಕ್ಷಣೆಗೆ ಬದ್ಧವಾಗಿ ಕಾನೂನನ್ನು ಮತ್ತಷ್ಟು ಕಠಿಣ ಗೊಳಿಸಿದ ಬಗೆಗಿನ ಜಾಹೀರಾತೊಂದನ್ನು ಓದಿದೆ. ಸರ್ಕಾರಕ್ಕಿರುವ ಗೋವಿನ ಬಗೆಗಿನ ಪ್ರೀತಿ ಮತ್ತು ಕಾಳಜಿಗೆ ಅನಂತ ಧನ್ಯವಾದಗಳು…
ನಾನೋರ್ವ ಕೃಷಿಕ. ಕೃಷಿಗೆ ಪೂರಕವಾಗಿ ಗೋವು ಎಂದು ನಂಬಿಕೊಂಡು ಕಳೆದ 50 ವರುಷಗಳಿಗಿಂತಲೂ ಹೆಚ್ಚು ಸಮಯದಿಂದ 20ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಗೋವನ್ನು ಪ್ರೀತಿಯಿಂದ ಸಾಕಿ ಸಲಹುತ್ತಾ ಬಂದಿದ್ದೇನೆ. ಅದರಲ್ಲಿ ನೆಮ್ಮದಿಯನ್ನೂ ಕಂಡಿದ್ದೇನೆ. ಗೋವು ನನಗೆಂದೂ ಮೋಸ ಮಾಡಿಲ್ಲ. ಗೋ ಆಧಾರಿತ ಕೃಷಿಯ ಮೂಲಕ ನನ್ನ ಎಲ್ಲಾ ಅಗತ್ಯತೆಗಳನ್ನು ಮಿತವಾಗಿ ಗಳಿಸಿಕೊಂಡಿದ್ದೇನೆ ಮತ್ತು ಬಳಸಿಕೊಂಡಿದ್ದೇನೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬುದು ಗಾದೆಯ ಮಾತು. ಇಂದು ಗೋ ಸಾಕುವ ರೈತರ ಪರಿಸ್ಥಿತಿ ಬರೆ ಕಾಯಿಸಿದ ಎಮ್ಮೆಯಂತಾಗಿದೆ. ತೀವ್ರವಾದ ಕಾರ್ಮಿಕ ಕೊರತೆಯಿಂದ ರೈತ ಇಂದು ಹೈರಾಣಾಗಿದ್ದಾನೆ. ಆ ಕಾರಣದಿಂದ ಕೃಷಿ ಕೆಲಸಕ್ಕಾಗಿ ಯಾಂತ್ರಿಕರಣದತ್ತ ಮುಖ ಮಾಡಿದ್ದಾನೆ. ಸರ್ಕಾರವು ಸಬ್ಸಿಡಿ, ಸಾಲ, ಉಚಿತಗಳ ಮೂಲಕ ಯಾಂತ್ರಿಕರಣಕ್ಕೆ ಒಂದಷ್ಟು ಪ್ರೋತ್ಸಾಹವನ್ನು ಕೊಡುತ್ತಿದೆ. ಯಾಂತ್ರಿಕರಣದಿಂದ ಆಗುವ ಶೀಘ್ರ ಕೆಲಸ ಮತ್ತು ಕಾರ್ಮಿಕ ಕೊರತೆಯ ಕಾರಣದಿಂದಾಗಿ ಇಂದು ಗದ್ದೆ ಉಳುವುದಕ್ಕಾಗಲಿ, ಸಾಗಾಟಕ್ಕಾಗಲಿ ಎತ್ತುಗಳ ಬಳಕೆ ಇಲ್ಲ. ಹಳ್ಳಿ ಹಳ್ಳಿಗಳಲ್ಲಿ ಕೃತಕ ಗರ್ಭಧಾರಣ ಕೇಂದ್ರಗಳಿರುವ ಕಾರಣ, ಗರ್ಭಧಾರಣೆಗೂ ಇಂದು ಹೋರಿಗಳ ಅಗತ್ಯತೆ ಇಲ್ಲವೆಂದಾಗಿದೆ. ಐವತ್ತು ವರುಷಗಳ ಹಿಂದಿನ ಗೋಮಾಳಗಳು ಇಂದು ಎಲ್ಲೂ ಇಲ್ಲ. ಆ ಕಾರಣದಿಂದ ಹೊರಗಡೆ ಬಿಟ್ಟರೆ ಇನ್ಯಾರೋ ಕಷ್ಟಪಟ್ಟು ಬೆಳೆಸಿದ ಕೃಷಿಯನ್ನು ಗೋವುಗಳು ತಿಂದು ಹಾಳು ಮಾಡುವ ಕಾರಣದಿಂದ ಕಟ್ಟಿ ಹಾಕಿ ಸಾಕುವುದು ಅನಿವಾರ್ಯ. ಒಂದು ಕಡೆಯಿಂದ ಕಾರ್ಮಿಕ ಕೊರತೆ,ತೀವ್ರವಾದ ಮೇವಿನ ಸಮಸ್ಯೆ, ಈ ಕಾರಣದಿಂದಾಗಿ ನಮ್ಮ ಕೃಷಿಯ ಅಗತ್ಯಕ್ಕಿಂತ ಜಾಸ್ತಿಯ ಜಾನುವಾರುಗಳನ್ನು ಸಾಕುವುದು ದುಸ್ತರವಾಗಿದೆ.
ಸರಿಯಾಗಿ ಸಾಕುವ ಯಾವುದೇ ಕೃಷಿಕನ ಹಟ್ಟಿಯಲ್ಲಿ, ಪ್ರತಿ ಮೂರು ವರ್ಷಕ್ಕೊಮ್ಮೆ ಸಂಖ್ಯೆ ದ್ವಿಗುಣವಾಗುತ್ತಾ ಹೋಗುತ್ತದೆ. ಹೊಸ ಕಾನೂನಿನಿಂದಾಗಿ ಹೆಚ್ಚಾದ ಸಂಖ್ಯೆಗೆ ಏನು ಗತಿ ಎಂಬ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿದೆ. ಗೋ ಭಕ್ಷಕರು ಎಷ್ಟು ಸಮಸ್ಯೆಯೋ ಅದಕ್ಕಿಂತ ಹೆಚ್ಚಿನ ಸಮಸ್ಯೆಯಾಗಿ ಕಾಡುವುದು ರೈತ ಗೋಸಾಕಣೆಯಿಂದ ವಿಮುಖರಾಗುವುದು. ಗೋಸಂತತಿ ವೃದ್ಧಿಸಬೇಕಾದರೆ ದನಗಳ ಸಂಖ್ಯೆ ಜಾಸ್ತಿಯಾಗಬೇಕೇ ವಿನಃ ಹೋರಿಗಳ ಸಂಖ್ಯೆ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಲಿತ ಹೋರಿಯನ್ನು ಹಿಡಿಯಬೇಕಾದರೆ ಕಟ್ಟು ಮಸ್ತಾದ ಎರಡಾದರೂ ಆಳುಬೇಕು. ಮೂರು ವರ್ಷಕ್ಕೊಮ್ಮೆ ಗರ್ಭಧಾರಣೆಯ ದೃಷ್ಟಿಯಿಂದ ಹೋರಿಗಳನ್ನು ಬದಲಾಯಿಸಲೇ ಬೇಕು. ಇಂತಹ ಅನಿವಾರ್ಯತೆಗಳಿಂದಾಗಿ ಹೆಚ್ಚಾದ ಸಂಖ್ಯೆಯ ಗಂಡು ಕರುಗಳನ್ನು, ಬದಲಾವಣೆಯ ಹೋರಿಯನ್ನು ಯಾರಿಗಾದರೂ ಕೊಡಲೇಬೇಕು. ಇಂದು ಯಾವುದೇ ಗೋಶಾಲೆಗಳಿಗೆ ಸಂಖ್ಯೆಯ ಅನಿವಾರ್ಯತೆಯಿಂದಾಗಿ ಗೋವುಗಳು ಬೇಡ. ಕೆಲವು ದೂರದ ಗೋಶಾಲೆಗಳಲ್ಲಿ ತೆಗೆದುಕೊಂಡರೂ ಸಾಗಣೆ ಖರ್ಚಿನ ವಿಪರೀತ ಹೊರೆ ಮತ್ತು ಸಾಕುವಿಕೆಗಾಗಿ ಕೊಡುವ ಒಂದಷ್ಟು ದೇಣಿಗೆ ಕೃಷಿಕ ಭರಿಸಲಾರದ ಸ್ಥಿತಿಯಲ್ಲಿದ್ದಾನೆ.
ಅನೇಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ರೈತನಿಗೆ ಮತ್ತಷ್ಟು ಸಮಸ್ಯೆಯೊಡ್ದುವ ಕಾನೂನಿನಿಂದ ಮುಕ್ತವಾಗಲು ನನ್ನದೊಂದೆರಡು ಸಲಹೆಯನ್ನು ಸ್ವೀಕರಿಸುತ್ತೀರಿ ಎಂದು ನಂಬುತ್ತೇನೆ.
ಅದೆಷ್ಟೋ ಕೋಟಿ ಸಬ್ಸಿಡಿಯನ್ನು ಕೊಟ್ಟು ರಾಸಾಯನಿಕ ಕೃಷಿಯನ್ನು ಪ್ರೋತ್ಸಾಹಿಸುವ ಸರ್ಕಾರ, ಸಾವಯವ ಪ್ರೀತಿಯಿಂದ ಯಾವುದೇ ಸಹಾಯಧನ ಇಲ್ಲದೆ ಗೋವಾಧಾರಿತ ಕೃಷಿಯಲ್ಲಿ ನಿರತರಾದ ಕೃಷಿಕನಲ್ಲಿ ಹೆಚ್ಚಾದ ಗಂಡು ಕರುಗಳಿಗೆ ತಾಲೂಕು ಮಟ್ಟದಲ್ಲಾದರೂ ಒಂದು ಗೋಶಾಲೆಯನ್ನು ತೆರೆದು ರೈತನ ಕಡೆಯಿಂದ ಸ್ವೀಕರಿಸುವಂತೆ ಆಗಬೇಕು ಮತ್ತು ಅಲ್ಲಿಯವರೆಗೆ ಗೋಶಾಲೆಯವರೆಗಿನ ಸಾಗಾಟ ವ್ಯವಸ್ಥೆಯನ್ನು ಉಚಿತವಾಗಿ ಮಾಡಲೇಬೇಕು. ಸಾಕುವುದಕ್ಕೆ ಪೂರಕ ವಾತಾವರಣವಿಲ್ಲದೆ ಕಾನೂನು ಮಾಡಿರುವುದರಿಂದ ಮತ್ತಷ್ಟು ಗೋಸಾಕಣಿಕೆಯಿಂದ ವಿಮುಖರಾಗುವುದು ನಿಶ್ಚಯ.
ಕಾಲ ನದಿಯಲಿ ನಮ್ಮ ಬಾಳ ದೋಣಿಯು ಮೆರೆದು,
ತೇಲುತ್ತೆ ಭಯವ ಕಾಣದೆ ಸಾಗುತಿರಲು,
ಗಾಳಿ ಯಾವಾಗಮೊ ಬಂದೆತ್ತಣಿನೋ ಬೀಸುತ್ತಾ,
ಮೇಲು ಕೀಳಾಗಿಪುದು ಮಂಕುತಿಮ್ಮ.
ಕಾಲ ನದಿಯಲ್ಲಿ ಸಾಗುತ್ತಿದ್ದ ಗೋ ಎಂಬ ಬಾಳ ದೋಣಿಯು, ಗೋ ರಕ್ಷಣೆ ಎಂಬ ಬಿರುಗಾಳಿಗೆ ಸಿಕ್ಕಿ ಮೇಲು ಕೆಳಗಾಗುತ್ತಿದೆ. ಗಾಳಿ ತಡೆಯುವ ಕೆಲಸವಾಗಲಿ ಎಂಬ ಭಿನ್ನಹ. ಕೃಷಿಕನ ರೋದನ ಅರಣ್ಯರೋದನವಾಗದೇ ಇರಲಿ ಎಂದು ಆಶಿಸುತ್ತೇನೆ.
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …
ಬೇಸಿಗೆಯಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…