ನೀವು ಗೂಡ್ಸ್ ವಾಹನದಲ್ಲಿ ಎಪಿಎಂಸಿ ಆವರಣದೊಳಗೆ ನಿಮ್ಮ ಕೃಷಿ ಉತ್ಪನ್ನ ವನ್ನು ಕೊಂಡೊಯ್ದ ನಂತರ ಅಲ್ಲಿನ ತಪಾಸಣೆ ಕೇಂದ್ರ ದಲ್ಲಿ ಎಷ್ಟು ಮೂಟೆ ಕೃಷಿ ಉತ್ಪನ್ನ ? , ಯಾವ ಮಂಡಿಗೆ ಹಾಕುತ್ತಿದ್ದೀರಿ? ಎಂಬುದು ದಾಖಲಾಗುತ್ತದೆ.
ಉದಾಹರಣೆಗೆ, ನಮ್ಮ ಮಲೆನಾಡು ಅಡಿಕೆ ಮಾರಾಟ ಸಹಕಾರಿ ಸಂಘಗಳಲ್ಲಿ ಷೇರುದಾರ ರೈತರೊಬ್ಬರು ತಮ್ಮ ಕೃಷಿ ಉತ್ಪನ್ನ ವನ್ನು ಬುಧವಾರ ಕೊಂಡೊಯ್ದು ತೂಕ ಮಾಡಿಸಿ ವಾರದ ಮಾರಾಟದ ದಿನ ವ್ಯಾಪಾರ ಮಾಡಲು ಬರೆಸಿದರೆ ಭಾನುವಾರ ವ್ಯಾಪಾರದ ಟೆಂಡರ್ ನೆಡೆದು ಸೋಮವಾರ ಷೇರುದಾರ ‘ಸಹಕಾರಿ ಸಂಘದ ಶಾಖೆಯ” ಮಾರುಕಟ್ಟೆ ವಿಭಾಗಕ್ಕೆ ಹೋಗಿ ‘ಎ” ಬಿಲ್ ಕೊಟ್ಟು ಟೆಂಡರು ಆದ ಬಗ್ಗೆ ವಿಚಾರಿಸಿದರೆ ಹಿಂದಿನ ದಿನ ಆ ರೈತನ ಅಡಿಕೆ ಉತ್ಪನ್ನಕ್ಕೆ ಮಾರುಕಟ್ಟೆ ಟೆಂಡರುದಾರರು ಏನು ಬೆಲೆ ನಿಗದಿ ಮಾಡಿದ್ದಾರೆ ಎಂಬ ಮಾಹಿತಿ ಸಿಗುತ್ತದೆ. ಆ ರೈತನಿಗೆ ಆ ಬೆಲೆ ತೃಪ್ತಿ ತಂದರೆ ರೈತ ಆ ವಿಭಾಗದಲ್ಲಿ ಸಹಿ ಹಾಕಿ ಒಪ್ಪಿಗೆ ನೀಡಿ ಕಚೇರಿಯಲ್ಲಿ ಬಿಲ್ ಮಾಡಿಸಿ ಹಣ ಪಡೆದರಾಯಿತು. ಆಕಸ್ಮಾತ್ ಆ ಬೆಲೆ ರೈತನಿಗೆ ತೃಪ್ತಿ ತರದಿದ್ದಲ್ಲಿ ಟೆಂಡರ್ ಕ್ಯಾನ್ಸಲ್ ಮಾಡಿದರೆ ಮುಗೀತು. ಮತ್ತೆ ಮುಂದೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದಾಗ ಮಾರಾಟಕ್ಕೆ ತನ್ನ ಉತ್ಪನ್ನವನ್ನು ಬಿಡಬಹುದು.
ಇಲ್ಲಿ ರೈತರ ಉತ್ಪನ್ನ ಖರೀದಿಸುವ ಟೆಂಡರುದಾರನಿಗೂ ರೈತನಿಗೂ ಸಹಕಾರಿ ಮಾರಾಟ ಸಂಘ “ಕೊಂಡಿ”. ಇಲ್ಲಿ ಟೆಂಡರುದಾರನಿಗೆ ಉತ್ಪನ್ನದ ಗುಣ ಮಟ್ಟ ಮಾತ್ರ ಗುರುತಿಸಿ ಬೆಲೆ ನಿಗದಿ ಮಾಡುವ ಅವಕಾಶವಿರುತ್ತದೆ. ಇಲ್ಲಿ ಈ ಕೃಷಿ ಉತ್ಪನ್ನ ಯಾರದ್ದು ? ಎಂದು ಗೊತ್ತಾಗುವುದಿಲ್ಲ. ಇದು ಅತ್ಯುತ್ತಮ ವ್ಯವಸ್ಥೆ ಯಾಗಿರುತ್ತದೆ.
ನಮ್ಮ ಅಡಿಕೆ ಮಾರಾಟ ಸಹಕಾರಿ ಸಂಘಗಳ ವ್ಯಾಪಾರ ಪದ್ಧತಿಯಲ್ಲಿ ಇತರೆ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಇರುವುದಿಲ್ಲ.
ಮೊನ್ನೆ ನೀವುಗಳು ಟಿವಿ ಮಾದ್ಯಮದಲ್ಲಿ ಎಪಿಎಂಸಿ ಯಲ್ಲಿ ಟೊಮ್ಯಾಟೊ ವ್ಯಾಪಾರ ಆಗುವುದನ್ನು ತೋರಿಸುವುದನ್ನ ನೀವು ನೋಡಿರಬಹುದು. ಅಲ್ಲಿ ಟೊಮ್ಯಾಟೊ ಬೆಳೆದ ರೈತ ಟೊಮ್ಯಾಟೊ ಕ್ರೇಟ್ ನೊಂದಿಗೆ ಟೆಂಡರ್ ಗೆ ಎಪಿಎಂಸಿ ಗೆ ಬಂದಾಗ ಖರೀದಿದಾರರನೂ ಅಲ್ಲೇ ಇದ್ದ. ಟೊಮ್ಯಾಟೊ ಬೆಳೆಗಾರನಿಗೆ ಖರೀದಿದಾರನಿಗೆ ” ನೀ” ಇಷ್ಟು ಬೆಲೆಗೆ ಒಪ್ಪಿಕೊಂಡು ಟೊಮ್ಯಾಟೊ ನಮಗೆ ಮಾರು ಎಂಬಂತೆ ಒತ್ತಾಯ ಮಾಡುತ್ತಿದ್ದ. ಆದರೆ ಈ ವ್ಯವಸ್ಥೆ ಬಹಳ ತಪ್ಪು. ಇದು ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯ ಬಲುದೊಡ್ಡ ತಪ್ಪು. ಟೆಂಡರಿಂಗ್ ಗುಪ್ತವಾಗಿಯೇ ಆಗಬೇಕು. ಕೃಷಿಕನಿಗೆ ತನ್ನ ಉತ್ಪನ್ನ ಮಾರಾಟ ಮಾಡಲು ಖರೀದಿದಾರನಿಂದ ಒತ್ತಡ ಆಗಬಾರದು.
ಬಹಳ ಹಿಂದೆ ರೇಷ್ಮೆ ಮೊಟ್ಟೆ ಮಾರಾಟದ ಮುಖ್ಯ ಮಾರುಕಟ್ಟೆಯಾದ ” ರಾಮನಗರ” ದಲ್ಲಿ ನಮ್ಮ ಮಲೆನಾಡಿನಿಂದ ರೇಷ್ಮೆ ಮೊಟ್ಟೆ ವ್ಯಾಪಾರಕ್ಕೆ ರಾಮನಗರದ ರೇಷ್ಮೆ ಮಾರಾಟದ ಮಳಿಗೆಗೆ ಹೋದಾಗ ಖರೀದಿ ದಾರರಿಗೆ ದಲ್ಲಾಳಿಗಳ ಚೇಲಾಗಳು ರೈತನಿಗೆ ನೀ ಇವರಿಗೇ ಇಷ್ಟೇ ಬೆಲೆಗೆ ಮೊಟ್ಟೆ ಮಾರಾಟ ಮಾಡಬೇಕು ಎಂಬ ದುಂಡಾವರ್ತಿ ಮಾಡುತ್ತಿದ್ದರಂತೆ. ಈ ಮಾರುಕಟ್ಟೆ ವ್ಯವಸ್ಥೆ ಯ ಬಲು ದೊಡ್ಡ ಲೋಪವೇ ಇದು. ಉತ್ತರ ಭಾರತದ ಎಪಿಎಂಸಿ ಯಲ್ಲಿ ಬಹುತೇಕ ಕಡೆಗಳಲ್ಲಿ ಈ ಬಗೆಯ ರೈತ ಶೋಷಣೆ ಇದೆ.
ಆದರೆ ಈ ಶೋಷಣೆ ದುಂಡಾವರ್ತಿಯನ್ನು ಸರ್ಕಾರಗಳು ಮನಸು ಮಾಡಿದರೆ ಸೂಕ್ತ ಕಾನೂನು ಕ್ರಮ ಬಳಸಿ ನಿಯಂತ್ರಣ ಮಾಡಿ ರೈತನಿಗೆ ರಕ್ಷಣೆ ನೀಡಬಹುದು.
ಎಪಿಎಂಸಿ ಯಲ್ಲಿ ದಲ್ಲಾಳಿಗಳು ಶೋಷಣೆ ಮಾಡುತ್ತಾರೆ , ರೈತನಿಗೆ ಅನ್ಯಾಯ ಮಾಡುತ್ತಾರೆ ಎಂದು ಸರ್ಕಾರ ಕೃಷಿ ಕಾಯ್ದೆ ತಂದು ಎಪಿಎಂಸಿ ಯನ್ನೇ ರದ್ದು ಮಾಡಿ ಮುಕ್ತ ಮಾರುಕಟ್ಟೆ ಮಾಡುವುದು ನೂರಕ್ಕೆ ನೂರರಷ್ಟು ಶತ ಮೂರ್ಖತನದ ನಿರ್ಧಾರ.
ಮುಕ್ತ ಮಾರುಕಟ್ಟೆ ವ್ಯವಸ್ಥೆಯ ದೋಷಗಳೇನು…?: ಇಲ್ಲಿ ಮಾರಾಟ ಮಾಡಿದ ರೈತನಿಗೂ ನಿಖರ ಬಿಲ್ ಗಳಿಲ್ಲ. ವ್ಯಾಪಾರಿ ಎಷ್ಟು ಕೃಷಿ ಉತ್ಪನ್ನ ಖರೀದಿಸಿ ಎಷ್ಟು ತನ್ನ ಗೋಡೋನ್ ನಲ್ಲಿ ದಾಸ್ತಾನು ಮಾಡಿದ್ದಾನೆ ಎಂಬ ಲೆಕ್ಕಾಚಾರ ಸರ್ಕಾರಕ್ಕೂ ಸಿಗುವುದಿಲ್ಲ. ವ್ಯಾಪಾರಿ ತನ್ನಲ್ಲಿರುವ ಆ ಕೃಷಿ ಉತ್ಪನ್ನ ವನ್ನು ಮಾರುಕಟ್ಟೆ ಯಲ್ಲಿ ಮಾರಾಟ ಮಾಡದೇ ಮಾರುಕಟ್ಟೆ ಗೆ ಬಿಡದೇ ಕೃತಕ ಅಭಾವ ಸೃಷ್ಟಿಸಿ ತನ್ನ ಉತ್ಪನ್ನ ವನ್ನು ರೈತನಿಂದ ಖರೀದಿಸಿದ್ದಕ್ಕಿಂತ ಹಲವಾರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ತಾನೆ.ಇದರಿಂದ ರೈತನಿಗೂ ನಷ್ಟ ಮತ್ತು ಗ್ರಾಹಕ ನಿಗೂ ತುಟ್ಟಿ. ಸರ್ಕಾರಕ್ಕೂ ತೆರಿಗೆ ವಂಚನೆ.
ದೊಡ್ಡ ದೊಡ್ಡ ದಲ್ಲಾಳಿಗಳು ದೊಡ್ಡ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಗಳ ವ್ಯವಹಾರ ದಲ್ಲಿ ಹೀಗಿನ ಏರಾಪೇರಿ ಮಾಡುತ್ತಾರೆ. ಇದು ಮುಕ್ತ ಮಾರುಕಟ್ಟೆಯ ಲೋಪ. ಆದರೆ ಎಪಿಎಂಸಿ ಯಲ್ಲೂ ಸಣ್ಣ ಪ್ರಮಾಣದ ಬೆಳೆಗಾರರಿಗೆ ಆಗಾಗ ವಂಚನೆಗಳಾಗುತ್ತವೆ. ಆದರೆ ಅವೆಲ್ಲ ಸರಿಯಾದ ಆಡಳಿತ ಇದ್ದರೆ ಸರಿಪಡಿಸಲು ಬರುವಂತದ್ದು.
ಆದರೆ ಮುಕ್ತ ವೇ ನಮಗೆ ಅಡ್ಡಿಯಿಲ್ಲ , ಎಪಿಎಂಸಿ ಮೂಲಕ ವ್ಯಾಪಾರ ನಷ್ಟ , ಮುಕ್ತ ಮಾರುಕಟ್ಟೆಯೇ ಸರಿ, ಕೆಲವು ರೈತರಂತೂ ಮುಕ್ತ ಮಾರುಕಟ್ಟೆಯ ಬಗ್ಗೆ ನೀವು ಹೇಳಿದ್ದೆಲ್ಲಾ ಸುಳ್ಳು ಎನ್ನುತ್ತಾರೆ. ಸರಿ…. ಅವರಿಗೆ ನನ್ನದೊಂದೇ ಒಂದು ಪ್ರಶ್ನೆ…? ಒಂದು ವೇಳೆ ಎಪಿಎಂಸಿ ಯೇ ಇಲ್ಲವಾದರೆ ಕೃಷಿ ಉತ್ಪನ್ನದ ಬೆಲೆಯನ್ನು ಮುಕ್ತ ವ್ಯಾಪಾರಿಗಳು ಯಾವ ಆಧಾರದ ಮೇಲೆ ನಿಗದಿ ಪಡಿಸುತ್ತಾರೆ….!?
ಕೃಷಿ ಮಾರುಕಟ್ಟೆ ಕಾಯ್ದೆ ಬಂದು ರೈತ ಹೋರಾಟ ನೆಡೆಯುವ ಸಂಧರ್ಭದಲ್ಲಿ ಮತ್ತು ಸರ್ಕಾರ ಕಾಯ್ದೆ ಹಿಂಪಡೆದ ಮೇಲೂ ಸರ್ಕಾರದ ಕಡೆಯವರಿಂದ, ಪಕ್ಷ ಸಂಘಟನೆಯ ಅಭಿಮಾನಿಗಳಿಂದ , ಸಮರ್ಥಕರಿಂದ ಈ ಬಗ್ಗೆ ನಿಖರ ಸಮಾಧಾನಕರ ಉತ್ತರ ಸಿಕ್ಕಿಲ್ಲ.
ಮುಕ್ತದ ಬಗ್ಗೆ ಜಿಜ್ಞಾಸೆ : ಉದಾಹರಣೆಗೆ ಈಗ ಎಪಿಎಂಸಿ ಯಲ್ಲಿ ಕೆಂಪಡಿಕೆ ರಾಶಿ ಇಡಿಗೆ ಕ್ವಿಂಟಾಲ್ ಗೆ 54000 ರೂಪಾಯಿ ಇದ್ದಲ್ಲಿ ಹೊರಗಿನ ಮುಕ್ತ ವ್ಯಾಪಾರಿಗಳು 55000 ವೋ 55500 ವೋ 60000 ವೋ ಕೊಡಬಹುದು. ಈಗ ಹೊರಗಿನ ಮುಕ್ತ ದವರು ಬಹುತೇಕ ಕೃಷಿ ಉತ್ಪನ್ನ ಗಳಿಗೆ ಎಪಿಎಂಸಿ ಗಿಂತ ತುಸು ಹೆಚ್ಚೇ ಬೆಲೆ ಕೊಡುತ್ತಾರೆ. ಹಾಗೆಯೇ ಅಡಿಕೆ ಗೂ ಎಪಿಎಂಸಿ ಗಿಂತ ಕೆಲವೊಮ್ಮೆ ಮುಕ್ತ ದವರು ತುಸು ಹೆಚ್ಚು ಬೆಲೆ ನೀಡಿ ಖರೀದಿಸುತ್ತಾರೆ. ಆದರೆ ಎಪಿಎಂಸಿ ಯೇ ಮಾರುಕಟ್ಟೆ ಕೇಂದ್ರ ಬಿಂದುವಾಗಿಲ್ಲವಾದರೆ ಯಾವ ಆಧಾರದ ಮೇಲೆ ಕೃಷಿ ಉತ್ಪನ್ನ =ಕ್ಕೆ ಬೆಲೆ ನಿಗದಿ ಮಾಡುತ್ತಾರೆ…..?. ಮುಕ್ತ ದಲ್ಲಿ ರೈತ ಎಷ್ಟು ಬೆಳಿತಾನೆ..?. ಮುಕ್ತದವನು ಎಷ್ಟು ಖರೀದಿಸಿ ಎಷ್ಟು ದಾಸ್ತಾನು ಮಾಡಿದ್ದಾನೆ...? ಮತ್ತು ಖರೀದಿದಾರ ಎಷ್ಟು ಕೃಷಿ ಉತ್ಪನ್ನಕ್ಕೆ ಬೇಡಿಕೆಯಿಟ್ಟಿದ್ದಾನೆ…? ಗೊತ್ತೇ ಆಗೋಲ್ಲ…!! ಇದ್ಯಾವುದಕ್ಕೂ ಲೆಕ್ಕ ಪತ್ರ ದಾಖಲೆ ಇಲ್ಲದೆ ಯಾವುದೇ ಕೃಷಿ ಉತ್ಪನ್ನ ದ
ಮಾರುಕಟ್ಟೆ ಮೌಲ್ಯ ಕಟ್ಟಲು ಸಾದ್ಯವೇ ಇಲ್ಲ.ಇದೆಲ್ಲವೂ ಕೃಷಿ ಉತ್ಪನ್ನ ವೊಂದರ ಬೆಲೆ ನಿಗದಿ ಮಾಡಲು ಅತ್ಯಂತ ಅವಶ್ಯಕ.
ಈಗ “ಎಪಿಎಂಸಿ” ಇರುವುದಕ್ಕೆ ರೈತರು ಎಪಿಎಂಸಿ ಗೆ ಅಡಿಕೆ ಹಾಕದೇ ತಮಗೇ ಕೃಷಿ ಉತ್ಪನ್ನ ಮಾರಾಟ ಮಾಡಲಿ ಎಂಬ ಉದ್ದೇಶಕ್ಕಾಗಿ ಮುಕ್ತದವನು “ಹೆಚ್ಚು ಬೆಲೆ ” ನೀಡುತ್ತಿದ್ದಾನೆ. ಒಂದು ವೇಳೆ ಎಪಿಎಂಸಿ ಯೇ ಇಲ್ಲವಾದರೆ “ಹೆಚ್ಚು” ಬೆಲೆ ಕೊಟ್ಟು ರೈತನಿಂದ ನೇರ ಕೃಷಿ ಉತ್ಪನ್ನ ವನ್ನು ಖರೀದಿಸಲು ಮುಕ್ತದವನಿಗೆ “ಹುಚ್ಚೇ…”!???
ಇವತ್ತಿಗೂ ಮಲೆನಾಡಿನಲ್ಲಿ ಮುಕ್ತದವನ ಕೈಲೇ ಹೆಚ್ಚು ಮಾರುಕಟ್ಟೆ ಪ್ರಾಬಲ್ಯರುವ “ಸಿಪ್ಪೆ ಗೋಟು” ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಒಮ್ಮೆ ಅಧ್ಯಯನ ಮಾಡಿದರೆ ಮುಕ್ತದವರು ಏನೆಂಬುದು ತಿಳಿಯುತ್ತದೆ.
ನಮ್ಮ ಮಲೆನಾಡಿನ “ಸಿಪ್ಪೆ ಗೋಟಿ” ನ ಪ್ರಮುಖ ಕೇಂದ್ರ ಮಾರುಕಟ್ಟೆ ಸಾಗರ ಎಪಿಎಂಸಿ ಯಲ್ಲಿ ಸಿಪ್ಪೆಗೋಟಿಗೆ ಅತಿ ಹೆಚ್ಚು ಬೆಲೆ ನಿಗದಿ ಮಾಡಿದರೆ ಈ ಮುಕ್ತ ದ ವ್ಯಾಪಾರಿ ಗಳು ರೈತರ ಮನೆಗೆ ನೇರ ಖರೀದಿಗೆ ಬರೋಲ್ಲ..!! ಯಾವಾಗ ಸಿಪ್ಪೆ ಗೋಟಿನ ಬೆಲೆ ಕಡಿಮೆಯಾಗುತ್ತದೋ ಆಗ ನಿಧಾನವಾಗಿ ವ್ಯಾಪಾರಿಗಳು ರೈತರ ಮನೆಗೆ ಅಡಿಕೆ ಖರೀದಿಸಲು ಹೊರಡುತ್ತಾರೆ. ಮುಕ್ತ ಮಾರುಕಟ್ಟೆ ಯವರು ಬೆಲೆ ಹೆಚ್ಚು ನೀಡುತ್ತಾನೆ ಎಂಬುದು ತಾತ್ಕಾಲಿಕ ಆಶಾವಾದ ಮಾತ್ರ. “ಮುಕ್ತ ಮಾರುಕಟ್ಟೆ ” ಎಂದು ಕುಣಿಯುವ ವರಿಗೆ ನಾವು ರೈತರು ಮರಳಿ ” ವಸಾಹತು ಷಾಹಿಗಳ ” ಕೈಲಿ ಸಿಕ್ಕಿ ಹಾಕಿಕೊಳ್ತೀವಿ ಎನ್ನುವ ಸತ್ಯ ದ ಅರಿವಿಲ್ಲ.
ಕೊನೆಯ ಮಾತು… ರೈತ ಬಾಂಧವರೇ… ಮಲೆನಾಡು ಕರಾವಳಿಯ ಅಡಿಕೆ ಕೃಷಿ ಭವಿಷ್ಯವನ್ನು ಬದಲಾಗಿರುವ ಹವಾಮಾನ ವೈಪರೀತ್ಯ ವೇ ನಿರ್ಧರಿಸುತ್ತದೆ. ಒಂದು ಕಡೆ ಋತುಮಾನದ ವ್ಯತ್ಯಾಸ. ಈ ಕಾರಣದಿಂದಾಗಿ ನಿಯಂತ್ರಣಕ್ಕೆ ಬಾರದ ಅಡಿಕೆ ಹಳದಿ ಎಲೆ , ಎಲೆಚುಕ್ಕಿ ರೋಗಗಳು. ಕಸ್ತೂರಿ ರಂಗನ್ ಸೇರಿದಂತೆ ಹಲವು ಅರಣ್ಯ ಕಾಯ್ದೆಗಳು ಹಲವಾರು ಸಾಂಪ್ರದಾಯಿಕ ಅಡಿಕೆ ಬೆಳೆಗಾರರ ಅಡಿಕೆ ಕೃಷಿಗೆ ಕೃಷಿಕರ ಜೀವನಕ್ಕೆ ಎರವಾಗಬಹುದು. ಸರ್ಕಾರ ಮಲೆನಾಡು ಕರಾವಳಿ ಜನರನ್ನು ನ್ಯಾಯಾಲಯದ ತೀರ್ಪು ಗೌರವಿಸಲು ಗುರಿಯಾಗಿಸುವ ಎಲ್ಲಾ ಸಾಧ್ಯತೆ ಯೂ ನಿಚ್ಚಳವಾಗಿದೆ.ಸದಾ ಈ ಸಂಘರ್ಷದ ಕಾರಣಕ್ಕೆ ಈ ಭಾಗದ ಕೃಷಿ ಚಟುವಟಿಕೆಗಳಿಗೆ ಕರಿ ನೆರಳು ಬೀರಲಿದೆ. ಇನ್ನೊಂದು ಕಡೆಯಲ್ಲಿ future generation ಕೃಷಿಯ ಕಡೆಗೆ ಆಸಕ್ತಿ ಹೊಂದಿಲ್ಲದೇ ಇರುವ ಕಾರಣಕ್ಕೂ ಮಲೆನಾಡು ಮತ್ತು ಕರಾವಳಿ ಕೃಷಿಗೆ ಖಂಡಿತವಾಗಿಯೂ ಭವಿಷ್ಯವಿಲ್ಲ.
ಖಂಡಿತವಾಗಿಯೂ ಎಪಿಎಂಸಿ ರದ್ದಾದ ದಿನದಿಂದ ದೇಶದ ಕೃಷಿ ನಾಶ ಶುರುವಾಗುತ್ತದೆ. ಈ ಎಪಿಎಂಸಿ ಕೃಷಿ ಕಾಯ್ದೆ -ಮುಕ್ತ ಮಾರುಕಟ್ಟೆ ಉದ್ದೇಶ ” ಅಡಿಕೆ” ಯಂತಹ ಸೀಮಿತ ಉದ್ದೇಶದ commercial ಬೆಳೆ ಗಿಂತ ಆಹಾರ ಧಾನ್ಯ ಬೆಳೆಗಳ ಉದ್ದೇಶ ಕ್ಕೆ ಬಂಡವಾಳ ಷಾಹಿ ಗುಂಪುಗಳು ಸರ್ಕಾರದ ಮೂಲಕ ಈ ಕಾಯ್ದೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದವು. ಈ ಕಾಯ್ದೆ ಜಾರಿ ಕಾಲದ ವಿಶ್ವ ದ ಗಮನ ಸೆಳೆದಿದ್ದ ಬಹು ದೊಡ್ಡ ಉದ್ಯಮಿಯೊಬ್ಬರು ಈ ಸಂಭವನೀಯ ಕಾಯ್ದೆ ಜಾರಿಗೆ ಬಂದೇ ಬರುತ್ತದೆ ಎಂಬ ನಂಬಿಕೆಯಿಂದ ಕೋಟ್ಯಂತರ ವೆಚ್ಚದ ದೊಡ್ಡ ದೊಡ್ಡ ಧಾನ್ಯ ಸಂಗ್ರಹಾಗಾರವನ್ನ ನಿರ್ಮಾಣ ಮಾಡಿದ್ದರು. ಮಾರುಕಟ್ಟೆ ಕಾಯ್ದೆ ಹೀಗಿನ ಬಂಡವಾಳ ಷಾಹಿ ಗಳ ಅನುಕೂಲ ಕ್ಕಾಗಿ ತರಲು ಯೋಜಿತ ವಾಗಿತ್ತು. ಹೊರತುಪಡಿಸಿ ಖಂಡಿತವಾಗಿಯೂ ಈ ಮಾರುಕಟ್ಟೆ ಕಾಯ್ದೆ ರೈತರ ಹಿತಕ್ಕಾಗಿ ಅಲ್ಲ.
ಮಾರುಕಟ್ಟೆ ಗೆ ಒಂದು ನಿರ್ದಿಷ್ಟ ಕೇಂದ್ರ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಯಾವುದೇ ಕೃಷಿ ಉತ್ಪನ್ನ ಕ್ಕೂ ಉತ್ತಮ ಬೆಲೆ ಬಾರದು. ಈ ಮುಕ್ತ ಮಾರುಕಟ್ಟೆ ಯ ಮೂಲ ಉದ್ದೇಶ ವೇ ಕೃಷಿ ಯ ಮಾರುಕಟ್ಟೆ ಕೇಂದ್ರಿಕೃತೆಯನ್ನ ತೆಗೆದು ಹಾಕಿ ತಾವು ಮಾರುಕಟ್ಟೆ monopoly ಮಾಡಬೇಕು ಎಂದು. ಇದೇ ಎಪಿಎಂಸಿ ಕಾಯ್ದೆ ಜಾರಿ ಮಾಡಲೇ ಬೇಕೆಂದು ಪ್ರಯತ್ನ ಮಾಡಿದವರ ಮೂಲ ಉದ್ದೇಶ.
ಆತ್ಮೀಯ ರೈತ ಬಾಂಧವರೇ, ಯಾವತ್ತೂ ಈ ಮುಕ್ತ ಮಾರುಕಟ್ಟೆಯನ್ನು ದಯಮಾಡಿ ಬೆಂಬಲಿಸಬೇಡಿ. ಒಂದು ವೇಳೆ ಹಾಗೇನಾದರೂ ಈ ದೇಶದಲ್ಲಿ ಮುಕ್ತ ಮಾರುಕಟ್ಟೆ ಜಾರಿಗೆ ಬಂದರೆ ನಮ್ಮ ಭಾರತವೂ ನೆರೆಯ ಪಾಕಿಸ್ತಾನ , ಶ್ರೀಲಂಕಾ ದೇಶಗಳಂತೆ ಗ್ರಾಹಕರು “ಕೊಂಡುಣ್ಣಲಾರದ” ಬೆಲೆ ಹೆಚ್ಚಿ ಜನ ಹಸಿವಿನಿಂದ ಕಂಗೆಟ್ಟು ಸಾಯ್ತಾರೆ. ʻಹಾಗಾಗಬಾರದಲ್ವ…?
ಭಾರತ ಮತ್ತು ಕೃಷಿ ಎರಡೂ ಬೇರೆ ಬೇರೆ ಅಲ್ಲ. ಜೈ ಕಿಸಾನ್… ಕೃಷಿ ಉಳಿಯಲಿ.. ಭಾರತ ಬೆಳೆಯಲಿ..ಭಾರತ ಉಳಿಯಲಿ..
Advertisement
ಮುಕ್ತ ಮುಕ್ತ…. ಭಾಗ-1 | ಸಾಧಕ-ಬಾಧಕ | ಅಡಿಕೆಯಲ್ಲಿ ಮುಕ್ತ ವ್ಯಾಪಾರ ಎಂಬ ಮಾರುಕಟ್ಟೆ…! |
Advertisement