ಉತ್ತರ ಪ್ರದೇಶದ ಆಗ್ರಾ ಬಳಿಯ ಸಿಂಗ್ನಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ದೆಹಲಿಯಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಸಲ್ಲಿಸಿದ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆಲೂಗಡ್ಡೆ, ಸಿಹಿ ಗೆಣಸು ಹಾಗೂ ಸುಗ್ಗಿ ನಂತರದಲ್ಲಿ ಇವುಗಳ ಆಹಾರೋತ್ಪನ್ನ, ಮೌಲ್ಯವರ್ದಿತ ಆಹಾರ ಪದಾರ್ಥ, ಪೌಷ್ಟಿಕಾಂಶ ಭರಿತ ಆಹಾರ ಭದ್ರತೆ, ರೈತರ ಆದಾಯ ಹೆಚ್ಚಳ ಹಾಗೂ ಉದ್ಯೋಗಾವಕಾಶ ಕಲ್ಪಿಸಲು ಈ ಕೇಂದ್ರ ನೆರವಾಗಲಿದೆ ಎಂದರು. ಅಂತಾರಾಷ್ಟ್ರೀಯ ಆಲೂಗಡ್ಡೆ ಪ್ರಾದೇಶಿಕ ಕೇಂದ್ರ ಸ್ಥಾಪನೆಯಿಂದ ಕೃಷಿ ಮತ್ತು ಆಹಾರೋತ್ಪನ್ನ ವಲಯದಲ್ಲಿ ಹೂಡಿಕೆ ಆಕರ್ಷಿಸಲು ನೆರವಾಗಲಿದೆ. ದೇಶದಲ್ಲಿ ಆಲೂಗಡ್ಡೆ ವಲಯದ ಸ್ಥಾಪನೆ, ಆಹಾರ ಸಂಸ್ಕರಣೆ, ಸಾರಿಗೆ, ಮಾರುಕಟ್ಟೆ, ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದ್ದಾರೆ.