ಸೃಷ್ಟಿಯೇ ಒಂದು ಅದ್ಭುತ. ಸೃಷ್ಟಿಕರ್ತ ಸೃಷ್ಟಿಸಿದ ಜೀವಿಗಳು ಇನ್ನೊಂದು ಅದ್ಭುತ.ಪ್ರತಿಯೊಂದು ಜೀವಿಗಳಿಗೂ ತನ್ನ ಆಹಾರದ ಒಳಿತು ಕೆಡುಕಿನ ಬಗ್ಗೆ ಅರಿವಿದೆ ಎನ್ನುವುದು ಮತ್ತೊಂದು ಅದ್ಭುತ. ಆಹಾರದ ಬದಲು ಹಣ ಸಂಪಾದನೆಯತ್ತ ಮನಸ್ಸು ಬದಲಿಸಿದ ಮಾನವನಿಗೆ ಆಹಾರದ ಗುಣಮಟ್ಟದ ಅರಿವು ಬಾರದೇ ಇರುವುದು ಮಾತ್ರ ಅತ್ಯಂತ ದುರಂತ ಅದ್ಭುತ.
ತಾನು ಬಳಸುವ ಆಹಾರ ವಿಷಪೂರಿತವೇ ಆಗಿರಲಿ, ಯಾರು ಹೇಗೆ ಬೇಕಾದರೂ ಉತ್ಪಾದಿಸಿರಲಿ, ಅದು ತನಗೆ ಗೌಣ ಎಂಬ ಭಾವದಲ್ಲಿ ನಾವಿಂದು ಕಡಿಮೆ ಬೆಲೆಗೆ ದೊರೆಯುವ ಆಹಾರದತ್ತ ಗಮನ ಹರಿಸುತ್ತಿದ್ದೇವೆ. ತಾನು ಉತ್ಪಾದಿಸುವ ಆಹಾರವನ್ನು ಯಾರಿಗೆ ಏನಾದರೂ ಅಡ್ಡಿಯಿಲ್ಲ, ತನ್ನ ಥೈಲಿ ತುಂಬಿದರೆ ಸಾಕೆಂಬ ಭಾವದಲ್ಲಿ ಉತ್ಪಾದಿಸುವ ಹಂತದಲ್ಲೂ, ದಾಸ್ತಾನಿನ ಹಂತದಲ್ಲೂ ನಿರ್ಧಾಕ್ಷಿಣ್ಯವಾಗಿ ಯಾವುದೇ ವಿಷವನ್ನು ಬಳಸಲೂ ಹೇಸದ ಹಂತಕ್ಕೆ ಬಂದು ತಲುಪಿದ್ದೇವೆ. ಬೇರೆಯವರೂ ಬಳಸುವ ಕಾರಣ ತಾನು ಬಳಸುವುದು ತಪ್ಪಲ್ಲ ಎಂಬ ಸಮರ್ಥನೆ ಹಂತಕ್ಕೂ ತಲುಪಿದ್ದೇವೆ.
ನಾನು ಉಣ್ಣುವ ಆಹಾರವನ್ನು ನಾನೇ ಬೆಳೆಯಬೇಕೆಂಬ ಮತ್ತು ವಿಷರಹಿತ ಆಹಾರ ಬಳಸಬೇಕೆಂಬ ಹಂಬಲದಿಂದ ನನ್ನೂರಿನ ಸಮಸ್ತರೂ ಗದ್ದೆ ಬೇಸಾಯಕ್ಕೆ ವಿದಾಯ ಹೇಳಿದರೂ ನನ್ನ ಬೇಸಾಯ ಅನೂಚಾನವಾಗಿ ಸಾಗಿ ಬಂದಿದೆ. ಮಳೆಗಾಲದ ಬೆಳೆ (ಏಣಿಲು ) ಆರಂಭವಾಗುತ್ತಿದ್ದುದೆ ಗಂಧಶಾಲಿಯೊಂದಿಗೆ. ಮಾಗುತ್ತಿದ್ದಂತೆ ನೆಲ ಕಚ್ಚುವುದರಿಂದಾಗಿ ಯಾಂತ್ರಿಕರಣದ ಕೃಷಿಗೆ ಒಗ್ಗಿಕೊಳ್ಳದೆ ವಿದಾಯ ಹೇಳಬೇಕಾಯಿತು. ಆ ಜಾಗಕ್ಕೆ ಬಾಸುಮತಿ ಬಂತು. ಸಂಪೂರ್ಣ ಬಿಡುವುದು ಬೇಡ ಸ್ವಲ್ಪವಾದರೂ ಉಳಿಸಿಕೊಳ್ಳೋಣ ಎಂಬ ಭಾವದಲ್ಲಿ ಅಂಗಳದ ಕೃಷಿಗೆ ಶರಣು ಹೋದೆ. ಕೇವಲ ಆರು ಸೆಂಟ್ಸಿನಲ್ಲಿ ಇದ್ದ ಕಾರಣ ಒಂದು ಭತ್ತವೂ ಸಿಗದಂತೆ ಹಕ್ಕಿಗಳ ಪಾಲಾಯಿತು. ಹಾಕಿದ ಬಲೆಯನ್ನು ಲೆಕ್ಕಿಸದೆ,ಚಿತ್ರದುರ್ಗದ ಕೋಟೆ ಹೊಕ್ಕಂತೆ ಕಳ್ಳ ಗಿಂಡಿಯಲ್ಲಿ ಒಳಹೊಕ್ಕು ಭತ್ತವನ್ನು ಸಂಪೂರ್ಣ ಕಥಂ ಗೊಳಿಸಿದ್ದವು. ಓಬವ್ವನಾಗಲು ನನ್ನ ಮನಸ್ಸು ಒಪ್ಪಲಿಲ್ಲ. ಪ್ರಕೃತಿಯಲ್ಲಿ ನಿನ್ನಷ್ಟೇ ಹಕ್ಕುದಾರನು ನಾನೂ ಇದ್ದೇನೆ ಎಂಬ ಮೊದಲ ಪಾಠವನ್ನು ಕಲಿಸಿತು.
80 ಸೆಂಟಿನ ವಿಶಾಲ ಗದ್ದೆಯಾದ ಕಾರಣ ಬಾಸುಮತಿಗೆ ಹಕ್ಕಿಗಳ ಕಾಟ ಧಾರಾಳ ಇದ್ದರೂ, ಬರಬೇಕಾದ ಬೆಳೆಯ ಅರ್ಧ ಅಂಶದಷ್ಟು ನನ್ನ ಪಾಲಿಗೆ ದೊರೆಯುತ್ತಿತ್ತು. ಬಾಸುಮತಿ ಪಾಕೇತನಗಳಿಗೆ ವಿಶೇಷವಾದರೂ, ಊಟದ ದೃಷ್ಟಿಯಿಂದ ಅಷ್ಟು ಹಿತವಾಗದ ಕಾರಣ ಈ ವರ್ಷ ಇಂದ್ರಾಣಿ ಎಂಬ ಹೊಸ ಬೆಳೆಯನ್ನು ಬೆಳೆದೆ. ತೆನೆ ಹೊರಬಂದು ಪರಾಗ ಸ್ಪರ್ಶದ 15 ದಿನಗಳಲ್ಲಿಯೇ, ಅದೆಲ್ಲಿಯೋ ಇದ್ದ ಹಕ್ಕಿಗಳ ದಂಡು ಬಂದೇ ಬಂದವು. ಇಲ್ಲಿಯೇ ನಾನು ಕಂಡುಕೊಂಡ ಹೊಸ ಅದ್ಭುತ ಪಾಠ.
ಗದ್ದೆ ಎಂದ ಮೇಲೆ ದಿನಕ್ಕೊಂದಾವರ್ತಿಯಾದರೂ ಭೇಟಿ ಮನಸ್ಸಿಗೆ ಮುದ ನೀಡುತ್ತದೆ. ಗದ್ದೆಯ ಆರೋಗ್ಯವನ್ನು ವಿಚಾರಿಸಿದಂತೆಯೂ ಆಗುತ್ತದೆ. ನನ್ನ ಪಕ್ಕದಲ್ಲಿಯೇ mo4 ತಳಿಯ ಗದ್ದೆ. ಬೆಳೆಯುವ ಹಂತದಲ್ಲಿ ರಾಸಾಯನಿಕ ಬಳಸಿದ್ದರೂ, ತೆನೆ ಬಂದ ನಂತರದಲ್ಲಿ ವಿಷಪ್ರಾಶನ ಆಗಿರಲಿಲ್ಲ. ಎರಡು ಗದ್ದೆಗಳಲ್ಲಿ ಒಟ್ಟೊಟ್ಟಿಗೆ ತೆನೆ ಬಂದರೂ ಹಕ್ಕಿಗಳ ಧಾಳಿ ನನ್ನ ಗದ್ದೆಗೆ ಮಾತ್ರ. 15 ದಿನಗಳ ನಿರಂತರ ಪರೀಕ್ಷೆಯಲ್ಲಿ ಇದು ಮತ್ತೆ ಮತ್ತೆ ಸ್ಪಷ್ಟವಾಯಿತು. ಅವುಗಳು ರುಚಿಗೆ ಸತ್ವಕ್ಕೆ ಮಾರು ಹೋಗುತ್ತವೆ. ಒಳ್ಳೆಯದು ಯಾವುದು ಎಂಬ ಅನುಭವದ ಪರೀಕ್ಷೆಗೆ ಮನಸ್ಸು ತೆರೆದುಕೊಳ್ಳುತ್ತದೆ ಎಂಬ ಹೊಸ ಪಾಠ. ನಮ್ಮ ಸಾಂಪ್ರದಾಯಿಕ ತಳಿಗಳಾದ ಸತ್ವ ಭರಿತ, ಕಯಮ್ಮೆ, ರಾಜಕಯಮ್ಮೆ, ಅತಿಕರಾಯ ಕಜೆಜಯ, ತೊನ್ನೂರು,ನೀರಂಬಟೆ ಮುಂಡಪ್ಪ ಇತ್ಯಾದಿ ಇತ್ಯಾದಿ ತಳಿಗಳನ್ನು ಅದರ ರುಚಿಯನ್ನು ಮರೆತು ಅಧಿಕ ಇಳುವರಿಯ ಕಡೆಗೆ ಹೊರಳಿದುದನ್ನು ಪಕ್ಷಿಗಳು ಅದು ಯಾವ ಪರಿಯಲಿ ತೋರಿಸಿಕೊಟ್ಟಿತು ಎಂಬುದನ್ನು ನೋಡಿ ನಾನಂತೂ ಮೂಕ ವಿಸ್ಮಿತನಾಗಿದ್ದೆ.
ರಾಸಾಯನಿಕ ರಹಿತವಾಗಿದ್ದರೂ ರುಚಿಯ ವ್ಯತ್ಯಾಸವನ್ನು ಕಂಡುಹಿಡಿಯಬಲ್ಲವು ಮತ್ತು ಸವಿಯ ರುಚಿಯನ್ನು ಮೆರೆಯಬಲ್ಲವು. ಇವೆಲ್ಲವನ್ನು ಅರಿತಿದ್ದ ಮನುಷ್ಯನಿಗೆ ಇಂದು ಅರಿವು ಮರೆಯಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…