ಸಾವಯವ ದೃಷ್ಟಿ-ಸೃಷ್ಟಿ | ಭಾವುಕತೆ ಇದ್ದರೆ ಕೃಷಿ ಸಾಧ್ಯವೇ? | ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ… |

May 31, 2022
10:27 PM

ಕೆಲವು ದಿನಗಳ ಹಿಂದೆ ಸಾವಯವ ಕೃಷಿಯಿಂದ ನಿರೀಕ್ಷಿತ ಫಸಲು ಸಾಧ್ಯವೇ? ಎಂಬ ಕಿರು ಲೇಖನವನ್ನು ಬರೆದಿದ್ದೆ. ಮೆಚ್ಚುಗೆಯ ಪ್ರತಿಕ್ರಿಯೆಗಳು ನೂರಾರು ಬಂದರೂ ಪ್ರಶ್ನಾರ್ಥಕ ಪ್ರತಿಕ್ರಿಯೆಗಳು ಕೆಲವು.

Advertisement

1.ಭಾವುಕತೆ ಇದ್ದರೆ ಕೃಷಿ ಉತ್ಪತ್ತಿ ಸಾಧ್ಯವೇ?
2.ಕೃಷಿಯು ಒಂದು ವ್ಯಾಪಾರ ಹಾಗಾಗಿ ವ್ಯಾಪಾರ ಧರ್ಮ ಇರಬೇಕು.
3.ಬೇರೆ ಆರ್ಥಿಕ ಮೂಲಗಳು ಇಲ್ಲದೆ ಸಾವಯವ ಕೃಷಿ ಕಷ್ಟಸಾಧ್ಯ.
4.ಕೃಷಿ ಗೊಬ್ಬರ ವಿಧಾನದ ಬಗ್ಗೆ ಹೇಳಿದ್ದರೆ ಹೆಚ್ಚು ಸೂಕ್ತ.
5.ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವುದು ಕೃಷಿಗೆ ಲಗಾವು ಆಗಲಾರದು.

ಭಾವುಕತೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ಇರಬಹುದು. ನಾನು ಕಂಡಂತೆ ದನವನ್ನು ಪೂರ್ತಿಯಾಗಿ ಕರುವಿಗೆ ಬಿಟ್ಟು ಉಳಿದರೆ ಮಾತ್ರ ಕರೆಯುವುದು ಭಾವುಕತೆ, ಕರುವಿಗೂ ಬಿಟ್ಟು ನಾನೂ ಕರೆದುಕೊಳ್ಳುವುದು ಸಾವಯವ. ಕರುವಿಗೂ ಕೊಡದೆ ನಾನು ಮಾತ್ರ ಕರೆದುಕೊಳ್ಳುವುದು ವ್ಯಾಪಾರ ಅಥವಾ ರಾಸಾಯನಿಕ ಚಿಂತನೆ.

ಜೇನುಪೆಟ್ಟಿಗೆ ಇಟ್ಟಿದ್ದರೆ ಸಂಪೂರ್ಣ ಜೇನನ್ನು ನೊಣಗಳಿಗೆ ಬಿಡುವುದು ಭಾವುಕತೆ, ಸಂಸಾರ ಕೋಣೆಯ ಜೇನನ್ನು ಬಿಟ್ಟು ಮೇಲಿನ ಎರಿಗಳಿಂದ ಜೇನು ತೆಗೆಯುವುದು ಸಾವಯವ, ಈಗ ತೆಗೆದದ್ದು ಬಂತು ಎಂದು ಸಂಸಾರ ಕೋಣೆಯಿಂದಲೇ ಪೂರ್ತಿ ತೆಗೆದು ನೊಣಗಳನ್ನು ಹಾರಿಸಿ ಬಿಡುವುದು ರಾಸಾಯನಿಕ ಚಿಂತನೆ.

ತೆಂಗಿನ ಮರದಲ್ಲಿ ಎಳನೀರು ಸಂಪೂರ್ಣ ಮಂಗ ತಿಂದರೂ ಸುಮ್ಮನಿರುವುದು ಭಾವುಕತೆ, ಓಡಿಸುತ್ತಾ ಓಡಿಸುತ್ತಾ ಸ್ವಲ್ಪ ತಿಂದರೂ ಚಿಂತಿಸದೆ ಇರುವುದು ಸಾವಯವ, ಸಂಪೂರ್ಣ ನಿರ್ವಂಶ ಗೊಳಿಸುವ ಕೆಲಸ ರಾಸಾಯನಿಕ.

Advertisement
ಅಡಿಕೆ ತೋಟಕ್ಕೆ ಏನೂ ಹಾಕದೆ ಬಂದದ್ದನ್ನು ಮಾತ್ರ ಕೊಯ್ದುಕೊಂಡು ತೃಪ್ತಿಯಿಂದ ಇರುತ್ತೇನೆ ಎಂಬುದು ಭಾವುಕತೆ, ಸಾವಯವ ಗೊಬ್ಬರವನ್ನು ಬಳಸಿ, ಸಮೂಹ ನಾಶಕ ವಿಷವನ್ನು ಬಳಸದೆ , ಬಂದದ್ದಕ್ಕೆ ತೃಪ್ತಿ ಪಡುವುದು ಸಾವಯವ, ಬಿಟ್ಟ ಎಲ್ಲಾ ಅಡಿಕೆ ಮಿಡಿಯು ಉಳಿಯಬೇಕು ಯಾವ ಜೀವಿ ನಾಶವಾದರೂ ನನಗೆ ಚಿಂತೆಯಿಲ್ಲ ಎಂಬ ಯೋಚನೆ ರಾಸಾಯನಿಕ.

ಬಂದ ಉತ್ಪತ್ತಿಯಲ್ಲಿ ವ್ಯಾಪಾರ ಧರ್ಮ ನೂರಕ್ಕೆ 99% ಕೃಷಿಕರಲ್ಲಿ ಇದೆ. ಅದು ಇಲ್ಲದೆ ಇದ್ದರೆ ವಂಚಕರು ಎಂದಷ್ಟೇ ಹೇಳಿಸಿ ಕೊಳ್ಳಬಹುದು.

ನನ್ನ ಅಜ್ಜನ ಕಾಲದಿಂದಲೂ ನಾವು ಕೃಷಿಕರು. ಕೃಷಿ ಬಿಟ್ಟು ಯಾವ ಆದಾಯ ಮೂಲವೂ ನನ್ನಲ್ಲಿಲ್ಲ. ಸಾವಯವ ಆರಂಭ ಮಾಡಿದಾಗ ನಾನೂ ಸಾಲಗಾರನಾಗಿದ್ದೆ . ಇಂದು ಸಾಲಮುಕ್ತ. ಬ್ಯಾಂಕಿನಿಂದ ನೋಟೀಸು ಬರುವುದು ಠೇವಣಿ ನವೀಕರಣ ಮತ್ತು 15h ಸ್ವಯಂ ಘೋಷಣಾ ಪತ್ರ. ಯಾವುದೇ ಉಚಿತಗಳ ಹಿಂದೆ ಬಿದ್ದಿಲ್ಲ. ಸಾಲಮನ್ನಾವಾಗಲಿ, ಬಡ್ಡಿ ಇಲ್ಲದ ಸಾಲಗಳಾಗಲಿ, ಇಂತವುಗಳನ್ನು ಕಂಡಿಲ್ಲ. ಸುಖೀ ಸಂಸಾರದ ಜೀವನಕ್ಕೆ ಯಾವ ಕೊರತೆಯೂ ಆಗಿಲ್ಲ. ಇನ್ನೇನು ಬೇಕು?.

ನನಗಿರುವುದು 6 ಎಕರೆ ಅಡಿಕೆ ತೋಟ, ಮೂರು ಎಕರೆ ತೆಂಗಿನ ತೋಟ, ಒಂದು ಎಕರೆ ಗದ್ದೆ. 15 ಎಕರೆಯಷ್ಟು ಕಾಡು. 22 ಮಲೆನಾಡು ಗಿಡ್ಡ ಹಸುಗಳ ಗೊಬ್ಬರ ಮತ್ತು ಒಂದು ಮರಕ್ಕೆ ವರ್ಷಕ್ಕೆ ಅರ್ಧ ಕೆಜಿಯಷ್ಟು ಹರಳಿಂಡಿ, ಸೋಗೆ ಬಾಳೆಎಲೆ, ಅಡಿಕೆ ಸಿಪ್ಪೆ ಮುಂತಾದವು ಮರದ ಬುಡಕ್ಕೆ. ಸ್ಲರಿಗೇಷನ್ ಮೂಲಕ ಗೊಬ್ಬರ ಹಾಕುವ ವಿಧಾನದಿಂದಾಗಿ ಖರ್ಚು ಕನಿಷ್ಠ. ದೇಶಿ ತಳಿ ಆದುದರಿಂದ ಹುಲ್ಲು ಮಾಡುವುದು ಮಾತ್ರ ಕೆಲಸ. ಈ ತೋಟದ ಮಧ್ಯೆ ಎಲ್ಲಾ ಅಂತರ ಬೆಳೆಗಳು ಇವೆ.

ನಮ್ಮ ಗ್ರಾಮೀಣ ಹಳೆಯ ಲೆಕ್ಕದಲ್ಲಿ 18 ಖಂಡಿಯಿಂದ 25 ಖಂಡಿಯವರೆಗೆ( ಒಂದು ಖಂಡಿಗೆ 260 ಕೆಜಿ ) ಏರಿಳಿತಗಳು ನಡೆಯುತ್ತಿರುತ್ತದೆ. ಉಪಬೆಳೆಗ ಳು ಶಕ್ತಿಯನ್ನು ತುಂಬುತ್ತದೆ. ಒಂದು ಎಕರೆಗೆ ಗದ್ದೆಯ ಎರಡು ಬೆಳೆ ಆಹಾರದ ಕೊರತೆಯನ್ನು ಸಂಪೂರ್ಣ ನಿಭಾಯಿಸುತ್ತದೆ. ನನ್ನೊಬ್ಬನದೇ ಗದ್ದೆಯಾದ ಕಾರಣ 10 ಕ್ವಿಂಟಾಲ್ ಭತ್ತ ಬರಬೇಕಾದುದು ಆರು ಕ್ವಿಂಟಾಲ್ ನ ಒಳಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

Advertisement

ಭಾವುಕತೆ ಎಂದು ನಾನೇನು ಸುಮ್ಮನೆ ಕುಳಿತಿಲ್ಲ. ಮಂಗ ಬಂದರೆ ಓಡಿಸುತ್ತೇನೆ, ಹಂದಿ ಬಾರದ ಹಾಗೆ ತಂತಿಬೇಲಿ ಕಟ್ಟುತ್ತೇನೆ, ಕೊಳೆ ರೋಗ ಬಾರದಂತೆ ಎರಡು ಬೋರ್ಡೋ ಸ್ಪ್ರೇ ಮಾಡುತ್ತೇನೆ . ರಾಸಾಯನಿಕವಲ್ಲವೇ ಎಂಬ ಪ್ರಶ್ನೆ ಬರಬಹುದು. ಖಂಡಿತವಾಗಿಯೂ ಹೌದು, ಹಾಗೆಂದ ಮಾತ್ರಕ್ಕೆ ನಾನೇನೂ ವಿಜ್ಞಾನದ ರಾಸಾಯನಿಕದ ಕಡುವಿರೋಧಿ ಅಲ್ಲ. ಬೋರ್ಡೋ ಕಳೆದ 150 ವರ್ಷಗಳಿಂದ ಬಳಸುತ್ತಿದ್ದರೂ ಎಲ್ಲಿಯೂ ಹಾನಿ ಮಾಡಿದ ಪುರಾವೆಗಳಿಲ್ಲ.

ಯಾವುದೇ ರಾಸಾಯನಿಕಗಳು ಉದ್ದೇಶಿತವನ್ನು ಮಾತ್ರ ನಾಶ ಮಾಡುತ್ತಿದ್ದರೆ ಒಪ್ಪಿಕೊಳ್ಳಬಹುದು. ದುರಂತವೆಂದರೆ ಎಲ್ಲವೂ ಸಮೂಹನಾಶಕ. ಉಪದ್ರ ಕೀಟಗಳನ್ನು ತಿಂದು ಬದುಕುತ್ತಿದ್ದ ಕಾಗೆಗಳು, ಕುಪ್ಪುಳುಗಳು, ಗುಬ್ಬಿಗಳು, ಬಜಾಕ್ಕುರೆ ಹಕ್ಕಿಗಳು ಇತ್ಯಾದಿಗಳು ಇಂದು ನಾಶದತ್ತ ಹೊರಟಿವೆ. ಹಾಗಿರುವಾಗ ಇವುಗಳನ್ನು ಇನ್ನೂ ಇನ್ನೂ ಬಳಸಬೇಕೆ?

ಕೆಲದಿನಗಳ ಹಿಂದೆ ಅಡಿಕೆ ಮಂಡಿ ಒಂದಕ್ಕೆ ಹೋಗಿದ್ದೆ. ಮಂಡಿಗೆ ಖಾಯಂ ಆಗಿ ಬರುವ ಡಾಕ್ಟರ್ ಒಬ್ಬರ ಪ್ರಕಾರ ಇಂದು ಕನಿಷ್ಠ ಹತ್ತಕ್ಕೆ ನಾಲ್ಕು ಮನೆಯಲ್ಲಾದರೂ ಕ್ಯಾನ್ಸರ್ ಪೇಷಂಟ್ ಗಳು ಇದ್ದಾರಂತೆ. ಬಾಕಿ ಕಾಯಿಲೆಗಳ ಬಗ್ಗೆ ನಾನೇನು ವಿವರ ಕೊಡಬೇಕಾಗಿಲ್ಲ. ನಮ್ಮ ಪೀಳಿಗೆಗೆ ಕೃಷಿ ಮುಗಿಯಬೇಕೇ ಮುಂದಿನ ಪೀಳಿಗೆಗೂ ಉಳಿಯಬೇಕೆ ಎಂಬುದು ಮಾತ್ರ ನನ್ನ ಚಿಂತನೆ.

ಎಷ್ಟು ಕಷ್ಟಪಟ್ಟರೂ ಸರಿ ಪ್ರಾಮಾಣಿಕ ದುಡಿಮೆ ಮಾಡಿದರೆ ಫಲ ದೊರೆತೇ ದೊರೆಯುತ್ತದೆ ಎಂಬುದಕ್ಕೆ ಪಾಂಡವರು ಉದಾಹರಣೆ. ಯಾವ ದಾರಿಯಾದರೂ ಸರಿ ಎಲ್ಲಾ ಫಲ ನನಗೇ ದೊರೆಯಬೇಕು ಎಂಬುದಕ್ಕೆ ಕೌರವರು ಉದಾಹರಣೆ. ಅವರವರ ಚಿಂತನೆ ಯೋಚನೆಯ ದಾರಿ ಅವರವರಿಗೆ ಬಿಟ್ಟದ್ದು.

ತೃಪ್ತಿಯನರಿಯದ ವಾಂಛೆ, ಜೀರ್ಣಿಸದ ಭುಕ್ತಿ,
ಸುಪ್ತದೊಳು ಕೊಳೆಯುತ್ತೆ ವಿಷಬೀಜವಾಗಿ,
ಪ್ರಾಪ್ತಿ ಗೊಳಿಪುದು ದೇಹಕ್ಕೆ ಉನ್ಮಾದ ತಾಪಗಳು
ಸುಪ್ತವಾಗುವುದೆಂತಿಚ್ಚೆ ಮಂಕುತಿಮ್ಮ.

Advertisement

ಇಂತಹ ಘಟನೆಗಳನ್ನೆಲ್ಲ ಮೊದಲೇ ಊಹಿಸಿ ಬರೆದ ಮಂಕುತಿಮ್ಮನಿಗೆ ಒಂದು ನಮನ.

ಬರಹ :
ಎ.ಪಿ. ಸದಾಶಿವ ಮರಿಕೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಹೊಸರುಚಿ | ಹಲಸಿನ ಬೀಜದ ಪರೋಟ
July 12, 2025
7:11 AM
by: ದಿವ್ಯ ಮಹೇಶ್
ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?
July 10, 2025
7:53 PM
by: ಡಾ.ಚಂದ್ರಶೇಖರ ದಾಮ್ಲೆ
ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು
July 9, 2025
2:25 PM
by: ಅರುಣ್‌ ಕುಮಾರ್ ಕಾಂಚೋಡು
ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?
July 8, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group