ಈಚೆಗೆ ಭಾರತದಲ್ಲಿ ಸಾವಯವ ಕೃಷಿ ಹೆಚ್ಚು ಸದ್ದು ಮಾಡುತ್ತಿದೆ. ಆದರ ವಿದೇಶದಲ್ಲಿ ಅದಕ್ಕಿಂತಲೂ ಒಂದು ಹೆಜ್ಜೆ ಮುಂದುವರಿದು ಪುನರುತ್ಪಾದಕ ಕೃಷಿಯ(Regenerative agriculture) ಬಗ್ಗೆ ಚರ್ಚೆಯಾಗುತ್ತಿದೆ. ಪುನರುತ್ಪಾದಕ ಕೃಷಿಯಲ್ಲಿ ಮಣ್ಣಿನ ಆರೋಗ್ಯದಲ್ಲಿ ಆಗುವ ಬದಲಾವಣೆ, ಸಾವಯವ ಇಂಗಾಲದ ಪ್ರಮಾಣ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ಜೀವವೈವಿಧ್ಯ ಮತ್ತು ರೈತರ ಉತ್ಪಾದನಾ ವೆಚ್ಚದ ಬದಲಾವಣೆಗಳನ್ನು ಅಳೆಯುವ ಸಮಗ್ರ ಕೃಷಿ ವಿಧಾನವಾಗಿ ನೋಡಲಾಗುತ್ತಿದೆ.
ಕೃಷಿಯಲ್ಲಿ ಸಾವಯವ ಪದ್ಧತಿ (Organic Agriculture) ಮತ್ತು ಪುನರುತ್ಪಾದಕ ಕೃಷಿ (Regenerative Agriculture) ಎಂಬ ಪದಗಳು ಹೆಚ್ಚಾಗಿ ಬಳಕೆಯಾಗುತ್ತಿವೆ. ಎರಡೂ ವಿಧಾನಗಳು ಮಣ್ಣಿನ ಆರೋಗ್ಯ, ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತವೆಯಾದರೂ, ಅವುಗಳ ಉದ್ದೇಶ, ಮಾನದಂಡ ಹಾಗೂ ಅನುಸರಿಸುವ ಕ್ರಮಗಳಲ್ಲಿ ಕೆಲವು ಪ್ರಮುಖ ವ್ಯತ್ಯಾಸಗಳಿವೆ ಎಂದು ಅಮೆರಿಕದ ಪಾಶ್ಚಿಮಾತ್ಯ ಬೆಳೆಗಾರರ ಸಂಘಟನೆ ಪ್ರಕಟಿಸಿರುವ ಮಾಹಿತಿ ವಿವರಿಸಿದೆ.
ಸಾವಯವ ಕೃಷಿ ಎಂದರೇನು? : ಸಾವಯವ ಕೃಷಿಯು ಬೆಳೆ ಉತ್ಪಾದನೆ ಮತ್ತು ಪಶುಸಂಗೋಪನೆಯಲ್ಲಿ ಆರೋಗ್ಯ, ಪರಿಸರ, ನ್ಯಾಯಸಮ್ಮತತೆ ಹಾಗೂ ಕಾಳಜಿ ಎಂಬ ನಾಲ್ಕು ಮೂಲ ತತ್ವಗಳನ್ನು ಆಧರಿಸಿದ ಸಮಗ್ರ ಕೃಷಿ ವಿಧಾನವಾಗಿದೆ.
ಈ ಪದ್ಧತಿಯಲ್ಲಿ ಮಣ್ಣಿನ ಫಲವತ್ತತೆ, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯವನ್ನು ಕಾಪಾಡಲು ನೈಸರ್ಗಿಕ ಪ್ರಕ್ರಿಯೆಗಳಿಗೆ ಆದ್ಯತೆ ನೀಡಲಾಗುತ್ತದೆ. ಬೆಳೆ ಪರಿವರ್ತನೆ, ಹೊದಿಕೆ ಬೆಳೆ (Cover Crops), ಕಾಂಪೋಸ್ಟ್ ಬಳಕೆ ಹಾಗೂ ಜೈವಿಕ ಕೀಟ ನಿಯಂತ್ರಣದಂತಹ ಕ್ರಮಗಳನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.
ಸಾವಯವ ಉತ್ಪನ್ನ ಎಂಬ ಪ್ರಮಾಣೀಕರಣ ಪಡೆಯಲು ನಿರ್ದಿಷ್ಟ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಅಮೆರಿಕದ ಯುಎಸ್ಡಿಎ ಸಾವಯವ ಪ್ರಮಾಣೀಕರಣ ವ್ಯವಸ್ಥೆಯಲ್ಲಿ, ಬೆಳೆ ಕಟಾವಿಗೆ ಮುನ್ನ ಕನಿಷ್ಠ ಮೂರು ವರ್ಷಗಳ ಕಾಲ ಭೂಮಿಯಲ್ಲಿ ನಿಷೇಧಿತ ವಸ್ತುಗಳನ್ನು ಬಳಸಿರಬಾರದು ಎಂಬ ನಿಯಮವೂ ಇದೆ. ಇದು ಅಮೆರಿಕದ ಪ್ರಮಾಣೀಕರಣ ವ್ಯವಸ್ಥೆಗೆ ಸಂಬಂಧಿಸಿದ ನಿಯಮವಾಗಿದ್ದು, ಭಾರತದ ಸಾವಯವ ಪ್ರಮಾಣೀಕರಣ ಮಾನದಂಡಗಳೊಂದಿಗೆ ಇದನ್ನು ಗೊಂದಲಪಡಿಸಬಾರದು.
ಪುನರುತ್ಪಾದಕ ಕೃಷಿ ಎಂದರೇನು? : ಪುನರುತ್ಪಾದಕ ಕೃಷಿಯು ಕೇವಲ ಕೃಷಿ ಉತ್ಪಾದನೆಯನ್ನು ಮುಂದುವರಿಸುವುದಕ್ಕಿಂತಲೂ ಮಣ್ಣಿನ ಆರೋಗ್ಯ ಮತ್ತು ಕೃಷಿಗೆ ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಮಣ್ಣಿನ ಸಾವಯವ ಅಂಶ ಹೆಚ್ಚಿಸುವುದು, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಸುಧಾರಿಸುವುದು, ಜೀವವೈವಿಧ್ಯ ಹೆಚ್ಚಿಸುವುದು, ಪೋಷಕಾಂಶಗಳ ಚಕ್ರವನ್ನು ಬಲಪಡಿಸುವುದು ಹಾಗೂ ಇಂಗಾಲವನ್ನು ಮಣ್ಣಿನಲ್ಲಿ ಸಂಗ್ರಹಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
ಈ ಕೃಷಿ ಪದ್ಧತಿಯಲ್ಲಿ ಐದು ಪ್ರಮುಖ ತತ್ವಗಳಿಗೆ ಒತ್ತು ನೀಡಲಾಗುತ್ತದೆ:
-
ಮಣ್ಣಿನ ಅತಿಯಾದ ಉಳುಮೆ ಮತ್ತು ಅಡಚಣೆಯನ್ನು ಕಡಿಮೆ ಮಾಡುವುದು.
-
ಮಣ್ಣಿನಲ್ಲಿ ಜೀವಂತ ಬೇರುಗಳಿರುವ ಅವಧಿಯನ್ನು ಹೆಚ್ಚಿಸುವುದು.
-
ಮಣ್ಣನ್ನು ಬೆಳೆ ಅವಶೇಷ ಅಥವಾ ಹೊದಿಕೆ ಬೆಳೆಗಳಿಂದ ಮುಚ್ಚಿಡುವುದು.
-
ಕೃಷಿ ವ್ಯವಸ್ಥೆಯಲ್ಲಿ ಪಶುಸಂಗೋಪನೆಯನ್ನು ಸಂಯೋಜಿಸುವುದು.
-
ಬೆಳೆ ವೈವಿಧ್ಯತೆಯನ್ನು ಹೆಚ್ಚಿಸುವುದು.
ಹೊದಿಕೆ ಬೆಳೆ, ಕಾಂಪೋಸ್ಟ್ ಬಳಕೆ, ಕಡಿಮೆ ಉಳುಮೆ ಮತ್ತು ನಿಯಂತ್ರಿತ ಪಶುಮೇಯಿಸುವಿಕೆ ಈ ತತ್ವಗಳನ್ನು ಅನುಷ್ಠಾನಗೊಳಿಸುವ ಕೆಲವು ವಿಧಾನಗಳಾಗಿವೆ.
ಒಂದೇ ಕೃಷಿಯಲ್ಲಿ ಎರಡೂ ವಿಧಾನಗಳನ್ನು ಅನುಸರಿಸಬಹುದೇ? : ಹೌದು. ಸಾವಯವ ಮತ್ತು ಪುನರುತ್ಪಾದಕ ಕೃಷಿಯ ಹಲವು ಕ್ರಮಗಳು ಪರಸ್ಪರ ಹೊಂದಾಣಿಕೆಯಾಗಿವೆ. ಹೊದಿಕೆ ಬೆಳೆ, ಕಾಂಪೋಸ್ಟ್ ಬಳಕೆ, ಕಡಿಮೆ ಉಳುಮೆ ಹಾಗೂ ಪಶುಸಂಗೋಪನೆ ಸಂಯೋಜನೆಯಂತಹ ಕ್ರಮಗಳನ್ನು ಎರಡೂ ಪದ್ಧತಿಗಳಲ್ಲಿ ಅನುಸರಿಸಬಹುದು.
ಆದರೆ ಸಾವಯವ ಕೃಷಿಗೆ ನಿರ್ದಿಷ್ಟ ಪ್ರಮಾಣೀಕರಣ ಮಾನದಂಡಗಳಿದ್ದರೆ, ಪುನರುತ್ಪಾದಕ ಕೃಷಿಗೆ ಜಾಗತಿಕವಾಗಿ ಒಂದೇ ರೀತಿಯ ಸಾರ್ವತ್ರಿಕ ಪ್ರಮಾಣೀಕರಣ ವ್ಯವಸ್ಥೆ ಇಲ್ಲ. ವಿವಿಧ ಸಂಸ್ಥೆಗಳು ತಮ್ಮದೇ ಆದ ಮಾನದಂಡಗಳ ಆಧಾರದ ಮೇಲೆ ಪ್ರಮಾಣೀಕರಣ ನೀಡುತ್ತವೆ.
ಸಾವಯವ ಮತ್ತು ಪುನರುತ್ಪಾದಕ ಕೃಷಿಯ ಪ್ರಮುಖ ವ್ಯತ್ಯಾಸ : ಸಾವಯವ ಕೃಷಿಯಲ್ಲಿ ಉತ್ಪಾದನೆ, ಸಂಸ್ಕರಣೆ ಮತ್ತು ಲೇಬಲ್ಗೆ ಸಂಬಂಧಿಸಿದ ನಿರ್ದಿಷ್ಟ ನಿಯಮಗಳನ್ನು ಪಾಲಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಪುನರುತ್ಪಾದಕ ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯಲ್ಲಿ ಕಾಲಕ್ರಮೇಣ ಆಗುವ ಸುಧಾರಣೆಯ ಫಲಿತಾಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಹೀಗಾಗಿ ಎರಡೂ ಪದ್ಧತಿಗಳು ಪರಸ್ಪರ ವಿರುದ್ಧವಾದವುಗಳಲ್ಲ. ಕೃಷಿಯ ದೀರ್ಘಕಾಲೀನ ಸುಸ್ಥಿರತೆಗೆ ಎರಡೂ ವಿಧಾನಗಳಲ್ಲಿರುವ ಸೂಕ್ತ ಕ್ರಮಗಳನ್ನು ಸ್ಥಳೀಯ ಮಣ್ಣು, ಹವಾಮಾನ, ಬೆಳೆ ಮತ್ತು ರೈತರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದು.
Organic and regenerative agriculture both aim to improve soil health, biodiversity and environmental sustainability, but they differ in their approach. Organic farming follows defined production and certification standards, while regenerative agriculture focuses on improving soil and ecosystem outcomes over time. Practices such as cover cropping, composting, reduced tillage and crop diversity can be common to both systems. A Western Growers Association FAQ explains their differences and areas of overlap, highlighting the importance of adapting farming practices to local conditions.


