ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗ ತೊಡಗಿದೆ. ಎರಡು ದಿನಗಳಿಂದ ಹವಾಮಾನ ಇಲಾಖೆ ರೆಡ್ ಎಲರ್ಟ್ ಘೋಷಣೆ ಮಾಡಿದೆ. ಇದೇ ಮಾದರಿಯಲ್ಲಿ ಮಳೆಯೂ ಸುರಿದಿದೆ. ಹಲವು ಕಡೆ 100 ಮಿಮೀ ಗಿಂತ ಅಧಿಕ ಮಳೆಯಾಗಿದೆ. ಇದೀಗ ಮತ್ತೆ ಮಲೆನಾಡು-ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಈ ನಡುವೆ ಗುಡ್ಡ ಕುಸಿತದ ಸುದ್ದಿಗಳು ಆರಂಭವಾಗಿದೆ. ಅಂಕೋಲಾದ ಬಳಿ ಗುಡ್ಡ ಕುಸಿತ ಸಂಭವಿಸಿದರೆ, ಮಡಿಕೇರಿ ಬಳಿಯ ಮದೆನಾಡಿನಲ್ಲಿ ರಸ್ತೆ ಕುಸಿತದ ಅಪಾಯ ಎದುರಾಗಿದೆ. ಕೊಯನಾಡು ಬಳಿ ಶಾಲಾ ಕಟ್ಟಡದ ಬಳಿ ಧರೆ ಕುಸಿತಗೊಂಡು ಹಾನಿಯಾಗಿದೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ ಸತತವಾಗಿ 100 ಮಿಮೀಗಿಂತ ಅಧಿಕ ಮಳೆಯಾಗುತ್ತಿದ್ದಂತೆಯೇ ಅಪಾಯಗಳು ಹೆಚ್ಚಾಗಲು ಆರಂಭವಾಗಿದೆ. ಕಳೆದ 24 ಗಂಟೆಯಲ್ಲಿ ಶಿರಸಿಯ ಮುಂಡಿಗೆ ಪಕ್ಷಿಧಾಮದ ಪ್ರದೇಶದಲ್ಲಿ 78 ಮಿಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಾಳುಗೋಡು, ಹರಿಹರ, ಕೊಲ್ಲಮೊಗ್ರ, ಸುಬ್ರಹ್ಮಣ್ಯ, ಬಳ್ಪ, ಚೆಂಬು, ಸುಳ್ಯ, ಬಾಳಿಲ ಸೇರಿದಂತೆ ಮಲೆನಾಡು ತಪ್ಪಲು ಪ್ರದೇಶದಲ್ಲಿ 100 ಮಿಮೀಗಿಂತ ಅಧಿಕ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ 75 ಮಿಮೀಗಿಂತ ಅಧಿಕ ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿಯೂ 120 ಮಿಮೀ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ 150-200 ಮಿಮೀ ಮಳೆಯಾಗಬಹುದು ಎಂದು ಹವಾಮಾನ ಮುನ್ಸೂಚನೆ ತಿಳಿಸುತ್ತದೆ.
ಭಾರೀ ಮಳೆಯಾಗುತ್ತಿದ್ದಂತೆಯೇ ಗುಡ್ಡ ಕುಸಿತ, ಧರೆ ಕುಸಿತದ ಸುದ್ದಿಗಳು ಕೇಳಲು ಆರಂಭವಾಗಿದೆ. ಸತತವಾಗಿ ಎರಡು ದಿನಗಳ ಕಾಲ ಮಲೆನಾಡು ಭಾಗದಲ್ಲಿ 100 ಮಿಮೀ ಮಳೆ ದಾಟುತ್ತಿದ್ದಂತೆಯೇ ಗುಡ್ಡದ ಮಣ್ಣು ಕುಸಿತಗೊಳ್ಳಲು ಆರಂಭಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಭಾರೀ ಪ್ರಮಾಣ ಗುಡ್ಡ ಕುಸಿತ ಸಂಭವಿಸಿದ್ದು, ಒಂದೇ ಕುಟುಂಬದ ಐವರು ಸೇರಿ ಒಟ್ಟು ಏಳು ಮಂದಿ ಮಣ್ಣನಡಿ ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಅಂಕೋಲ ಕುಮಟಾ ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ.ಗುಡ್ಡ ಕುಸಿತ ರಭಸಕ್ಕೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ,ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ.
ದಕ್ಷಿಣ ಕನ್ನಡ ಕೊಡಗು ಭಾಗದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದೆ. ಕೊಯನಾಡು ಸರ್ಕಾರಿ ಶಾಲೆ ಮೇಲೆ ಮತ್ತೆ ಬರೆ ಕುಸಿತವಾಗಿದೆ. ಶಾಲೆಯ ಮೇಲೆ ಬರೆ ಕುಸಿದಿದ್ದು ಭಾರಿ ಹಾನಿ ಸಂಭವಿಸಿದೆ. ಇದೇ ವೇಳೆ ಮಾಣಿ-ಮೈಸೂರು ಹೆದ್ದಾರಿಯ ಮಡಿಕೇರಿಯ ಮದೆನಾಡು ಬಳಿ ಮುಖ್ಯರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ರಸ್ತೆ ಕುಸಿಯುವ ಆತಂಕ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಇದೇ ರಸ್ತೆಯ ಮೊಣ್ಣಂಗೇರಿ ಬಳಿಯೂ ಅಪಾಯ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಆಗುಂಬೆ ಘಾಟಿಯಲ್ಲಿ ಕಳೆದ ಎರಡು ದಿನಗಳಿಂದ ಮಾಹಿತಿಯನ್ನು ಸ್ಥಳೀಯರು ನೀಡಿದ್ದು, ರಸ್ತೆ ಬದಿ ಕುಸಿತದ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ಸಕಲೇಶಪುರ ಸೇರಿದಂತೆ ಘಾಟಿ ಪ್ರದೇಶದಲ್ಲಿ ಮಳೆಯ ಸೂಚನೆ ಇದ್ದು, ಘಾಟಿ ರಸ್ತೆ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯವಿದೆ.
There has been a rise in rainfall in coastal and hilly regions. The meteorological department has issued a red alert for the next two days due to the consistent pattern of heavy rainfall. Many areas have received over 100 mm of rain. The precipitation continues in the hill and coastal regions. Reports of landslides have started to emerge, with a risk of road collapse near Ankola and Madenad near Madikeri. Additionally, a land slide near Koyanadu and caused damage to a nearby school building.