ICAR (ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್) ಆಯೋಜಿಸಿದ ರೈತರ ಹಕ್ಕುಗಳ ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕೃಷಿಕ, ಭತ್ತದ ಕೃಷಿಯಲ್ಲಿ ತಳಿ ತಪಸ್ವಿ ಎಂದು ಹೆಸರುವಾಸಿಯಾಗಿರುವ ಅಮೈ ದೇವರಾವ್ ಅವರನ್ನು ಪುರಸ್ಕರಿಸಲಾಯಿತು.
ರೈತರ ಹಕ್ಕುಗಳ ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣ ದೆಹಲಿಯಲ್ಲಿ ಆರಂಭಗೊಂಡಿದೆ. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಅಮೈ ದೇವರಾಯರು ತಮ್ಮ ಐದು ಎಕರೆ ಗದ್ದೆಯಲ್ಲಿ 175ಕ್ಕೂ ಅಧಿಕ ಭತ್ತದ ತಳಿಗಳನ್ನು ಬೆಳೆದಿದ್ದಾರೆ. ಒಂದೇ ಗದ್ದೆಯಲ್ಲಿ ಅನೇಕ ಬಗೆಯ ತಳಿಗಳನ್ನು ನಾಟಿ ಮಾಡುವ ದೇವರಾವ್ ಅವರು ತಳಿ ತಪಸ್ವಿ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. 1988 ರಿಂದ ರಾಸಾಯನಿಕ ಬಳಕೆಗೆ ಸಂಪೂರ್ಣ ವಿದಾಯ ಹೇಳಿದ್ದಾರೆ. ಸಾವಯವ ಗೊಬ್ಬರನ್ನು ಬಳಸುವ ಇವರು ಭತ್ತವನ್ನು ಮನೆಯಲ್ಲಿಯೇ ಒಣಗಿಸಿ ಅಕ್ಕಿ ಮಾಡುತ್ತಾರೆ.