ಉಡುಪಿಯಲ್ಲಿ ಕಳೆದ ಒಂದು ವಾರದಿಂದ ಮಳೆ ಆರ್ಭಟ ಜೋರಾಗುತ್ತಿದೆ. ಸಮುದ್ರದ ಅಬ್ಬರಕ್ಕೆ ಉಡುಪಿಯ ಕಾಪು ತಾಲೂಕಿನ ಪ್ರಸಿದ್ಧ ಪಡುಬಿದ್ರೆ ಬೀಚ್ ಕೊಚ್ಚಿ ಹೋಗುತ್ತಿದೆ. ಪಡುಬಿದ್ರೆ ಬೀಚ್ನ ಬದಿಯಲ್ಇಂಲಿ ನೆಟ್ಟಟಿರುವ ತೆಂಗಿನ ಮರಗಳ ಸುತ್ತ ಹಾಕಿದ್ದ ಇಂಟರ್ ಲಾಕ್ ಕೊಚ್ಚಿ ಹೋಗಿದ್ದು, ಐದಾರು ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಪಡುಬಿದ್ರೆ ಬೀಚ್ನ ಮೀನುಗಾರರ ಗೋಡಾನ್ ಅಪಾಯದಲ್ಲಿದೆ. ಬಲೆ ಸಂಗ್ರಹ ಮಾಡಿಟ್ಟಿರುವ ಮೀನುಗಾರರ ಗೋಡಾನ್ಗೆ ಸಮುದ್ರದಲೆಗಳು ಅಪ್ಪಳಿಸುತ್ತಿವೆ.
ಜೊತೆಗೆ ಪಡುಬಿದ್ರೆ ಬೀಚ್ನಲ್ಲಿ ಪ್ರವಾಸಿಗರಿಗಾಗಿ ನಿರ್ಮಿಸಿದ ವಾಚ್ ಟವರ್ ಸಹ ಅಪಾಯದಲ್ಲಿದೆ. ಹೀಗಾಗಿ ಪಡುಬಿದ್ರೆ ಬಿಚ್ಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಡಳಿತ ಆದೇಶಿಸಿದೆ. ಪೊಲೀಸರು ಮತ್ತು ಲೈಫ್ ಗಾರ್ಡ್ಗಳನ್ನು ನೇಮಿಸಲಾಗಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲೂ ಮಳೆ ಅಬ್ಬರ ಮುಂದುವರೆದಿದೆ. ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ತುಂಗಾ ನದಿಯಲ್ಲಿ ಬೃಹದಾಕಾರದ ಮರದ ದಿಮ್ಮಿಗಳು ಕೊಚ್ಚಿ ಬರುತ್ತಿವೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಶೃಂಗೇರಿ ಶಾರಾದಾಂಬೆ ದೇವಾಲಯದ ತುಂಗಾ ನದಿ ತಟದಲ್ಲಿರುವ ಕಪ್ಪೆ ಶಂಕರ ದೇವಾಲಯ ಮುಳುಗಡೆಯಾಗಿದೆ. ಭಾರೀ ಮಳೆ ಹಿನ್ನೆಲೆ, ಜಿಲ್ಲಾದ್ಯಂತ ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ. ಚಿಕ್ಕಮಗಳೂರಿನ 34 ಗ್ರಾಮ ಪಂಚಾಯಿತ್ 77 ಗ್ರಾಮಗಳು ಡೇಂಜರ್ ಎಂದು ಗುರುತು ಮಾಡಲಾಗಿದೆ.