ತಾಳೆ ಬೆಳೆಯು ಪ್ರಪಂಚದಾದ್ಯಂತ ಸಾಗುವಳಿ ಮಾಡಲ್ಪಡತ್ತಿರುವ ಖಾದ್ಯ ತೈಲ ಬೆಳೆಗಳಲ್ಲಿ ಅತ್ಯಂತ ಹೆಚ್ಚು ತೈಲದ ಇಳುವರಿ ನೀಡುವ ಬೆಳೆಯಾಗಿದ್ದು, ಪ್ರತಿ ಹೆಕ್ಟೇರಿಗೆ ವರ್ಷಕ್ಕೆ 4 ರಿಂದ 6 ಟನ್‍ಗಳಷ್ಟು ತೈಲದ ಇಳುವರಿಯನ್ನು ನೀಡುವ ಸಾಮಾರ್ಥ್ಯ ಹೊಂದಿರುತ್ತದೆ.
ಪ್ರಸ್ತುತ ಜಾಗತಿಕ ಖಾದ್ಯ ತೈಲ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ಹಣ್ಣಿನಿಂದ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಅಲ್ಲದೆ ವನಸ್ಪತಿ, ಸಾಬೂನು, ಗ್ಲಿಸರಿನ್ ಮತ್ತು ಪ್ಯಾರಾಫನ್ ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಹಣ್ಣಿನಿಂದ ಪಾಮ್ ಎಣ್ಣೆ ಮತ್ತು ಬೀಜದಿಂದ ಪಾಮ್ ಕರ್ನಲ್ ಎಣ್ಣೆಯನ್ನು ತೆಗೆಯಲಾಗುವುದು. ತಾಳೆ ಎಣ್ಣೆಯಲ್ಲಿ ಹೆಚ್ಚು ಕ್ಯಾರೋಟಿನ್ ಅಂಶವಿದ್ದು, ಇದು ಆರೋಗ್ಯಕ್ಕೆ ಉತ್ತಮ ಖಾದ್ಯ ತೈಲವೆನ್ನಬಹುದು. ತಾಳೆಬೆಳೆಯು ಗರಿಷ್ಟ 29-33℃ ಉಷ್ಣಾಂಶ ಮತ್ತು ಕನಿಷ್ಟ 22-24℃ ಇರುವ ಪ್ರದೇಶದಲ್ಲಿ ಹಾಗೂ ವರ್ಷವಿಡೀ ಸಮಾನ ಹಂಚಿಕೆಯಲ್ಲಿ 2000-3000 ಮಿ.ಮೀ. ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ. ಎರಡು ತಿಂಗಳು ನೀರಿನ ಕೊರತೆಯಾದರೂ ಸದೃಢವಾಗಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಳೆಬೆಳೆಗೂ ಕೂಡ ಉತ್ತಮ ಧಾರಣೆಯಿದ್ದು, ಸಾರ್ವಕಾಲಿಕ ಬೇಡಿಕೆ ಇದೆ. ಒಂದು ತಾಳೆ ಮರದಿಂದ ವರ್ಷಕ್ಕೆ ಕನಿಷ್ಟ 200 ಕೆ.ಜಿ. ಉತ್ಪನ್ನ ಸಿಗುತ್ತದೆ. ದೇಶದ ಬೇಡಿಕೆಗಿಂತ ತಾಳೆಬೆಳೆಯ ಉತ್ಪಾದನೆ ಕಡಿಮೆ ಇರುವ ಕಾರಣ, ತಾಳೆ ಎಣ್ಣೆಯನ್ನು ಭಾರತಕ್ಕೆ ಮಲೇಷ್ಯಾ, ಇಂಡೋನೇಷ್ಯಾ ಮುಂತಾದ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ತಾಳೆಬೆಳೆ ಪ್ರದೇಶ ಹೆಚ್ಚಿಸುವ ಹಾಗೂ ತಾಳೆಬೆಳೆ ತೋಟಗಳಲ್ಲಿ ಉತ್ತಮ ಬೇಸಾಯ ಪದ್ದತಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಬೆಂಬಲ ಬೆಲೆ, ಸಹಾಯಧನ, ನಿರ್ವಹಣೆ ವೆಚ್ಚವನ್ನು ನೀಡಲಾಗುತ್ತಿದೆ. ಗಿಡಗಳ ಪೂರೈಕೆ ಮಾಡುವ ಕಂಪೆನಿಯೇ ಬೆಳೆ ಖರೀದಿ ಒಪ್ಪಂದ ಮಾಡಿಕೊಳ್ಳುತ್ತದೆ.
2023-24 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ತಾಳೆಬೆಳೆ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ತಾಳೆಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಗುರಿಗಳು ನಿಗದಿಯಾಗಿರುತ್ತದೆ. ದೇಶಿಯ ಮೂಲದ ತಾಳೆ ಸಸಿಗಳಿಗೆ ರೂ. 20,000 ಪ್ರತಿ ಹೆಕ್ಟೇರ್‍ಗೆ ಹಾಗೂ ವಿದೇಶ ಮೂಲದ ತಾಳೆ ಸಸಿಗಳಿಗೆ ರೂ. 29,000 ಪ್ರತಿ ಹೆಕ್ಟೇರ್ ಗೆ ಸಹಾಯಧನ ನಾಟಿ ಮಾಡಿದ ಪೂರ್ಣ ವಿಸ್ತೀರ್ಣಕ್ಕೆ ನೀಡಲಾಗುತ್ತದೆ. ಹಾಗೂ ಅಭಿವೃದ್ಧಿ ಪಡಿಸಿದ ಪೂರ್ಣ ವಿಸ್ತೀರ್ಣಕ್ಕೆ ಮೊದಲ 4 ವರ್ಷಗಳಿಗೆ ನಿರ್ವಹಣೆಗಾಗಿ ರೂ. 5,250 ರಂತೆ ಸಹಾಯಧನ ನೀಡಲಾಗುತ್ತದೆ.
ತಾಳೆಬೆಳೆ ಬೇಸಾಯ ಕೈಗೊಳ್ಳಲು ಆಸಕ್ತಿಯುಳ್ಳ ಫಲಾನುಭವಿಗಳು ಹೆಚ್ಚಿನ ಮಾಹಿತಿಗೆ ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.