ಭಾರತದಲ್ಲಿ ಪಾನ್ ಮಸಾಲಾ ಮಾರುಕಟ್ಟೆಯು ಬೆಳೆಯುತ್ತಿದ್ದು 2028 ರ ವೇಳೆಗೆ 53,672.3 ಕೋಟಿ ರೂಪಾಯಿಗೆ ತಲುಪುವ ನಿರೀಕ್ಷೆ ಇದೆ. ಹೀಗಾಗಿ ಅಡಿಕೆ ಬೇಡಿಕೆಯೂ ಇರಲಿದೆ. ಆದರೆ ಅಡಿಕೆ ಆಮದು ಸ್ಥಗಿತವಾಗಬೇಕು, ಕನಿಷ್ಟ ಆಮದು ದರವೂ ಏರಿಕೆಯಾಗಬೇಕು. ಹೀಗಾದರೆ ಮಾತ್ರವೇ ಇದುವರೆಗೆ ಅಡಿಕೆ ಬೆಳೆ ವಿಸ್ತರಣೆಯಾಗಿರುವ ಪ್ರಮಾಣವು ಸರಿಹೊಂದಿ ಅಡಿಕೆ ಭವಿಷ್ಯ ಸ್ಥಿರವಾಗಲಿದೆ.
ಸಂಸ್ಥೆಯೊಂದರ ಇತ್ತೀಚಿನ ವರದಿಯ ಪ್ರಕಾರ, “ಭಾರತದಲ್ಲಿ ಪಾನ್ ಮಸಾಲಾ ಮಾರುಕಟ್ಟೆಯ ಅಧ್ಯಯನ ನಡೆಸಿತ್ತು. ಭಾರತದಲ್ಲಿ ಈಗಿನ ಮಾರುಕಟ್ಟೆ ಗಾತ್ರದಲ್ಲಿ ಪಾನ್ ಮಸಾಲಾ ಮಾರುಕಟ್ಟೆಯು 2022 ರ ಅವಧಿಯಲ್ಲಿ 43,410.2 ಕೋಟಿಗೆ ತಲುಪಿದೆ. ಆದರೆ 2028 ರ ವೇಳೆಗೆ ಮಾರುಕಟ್ಟೆಯು 53,672.3 ಕೋಟಿಗೆ ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ 2023-2028 ರ ಅವಧಿಯಲ್ಲಿ 3.4% ನ ಬೆಳವಣಿಗೆಯನ್ನು ನಿರೀಕ್ಷೆ ಮಾಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ತಿಳಿಸಿದೆ.
ಪಾನ್ ಮಸಾಲವು ಅಡಿಕೆ ಸಹಿತ ಇತರ ಕೆಲವು ಉತ್ಪನ್ನಗಳನ್ನು ಒಳಗೊಂಡಿದೆ. ಭಾರತೀಯ ಪಾನ್ ಮಸಾಲಾ ಮಾರುಕಟ್ಟೆಯು ಬೆಳೆಯುತ್ತಲೇ ಇದೆ. ಸದ್ಯ ಬೇಡಿಕೆ ಹಾಗೂ ಪೂರೈಕೆಯಲ್ಲಿ ಕೊರತೆ ಇದೆ. ಇದಕ್ಕಾಗಿ ಅಡಿಕೆ ಆಮದು ಕೂಡಾ ನಡೆಯುತ್ತದೆ. ಆದರೆ ಭಾರತದಲ್ಲಿ ಪಾನ್ ಉದ್ಯಮ ಬೆಳೆಯುವ ವೇಳೆ ಅಡಿಕೆ ಬೇಡಿಕೆಯೂ ಹೆಚ್ಚಾಗಲಿದೆ. ಪ್ರಮುಖವಾಗಿ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಜಾರ್ಖಂಡ್ ಮೊದಲಾದ ಕಡೆಗಳಲ್ಲಿ ಅಡಿಕೆಯ ಬಳಕೆ ಹೆಚ್ಚುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ ಭವಿಷ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮುಂದಿನ 4-5 ವರ್ಷದಲ್ಲಿ ಸುಮಾರು 3.4 ರಷ್ಟು ಪಾನ್ ಮಸಾಲಾ ಮಾರುಕಟ್ಟೆ ಬೆಳೆಯುತ್ತದೆ, ಅದೇ ಸಮಯಕ್ಕೆ ಸುಮಾರು ಶೇ.20 ರಷ್ಟು ಅಡಿಕೆ ಬೆಳೆ ವಿಸ್ತರಣೆ ಪ್ರದೇಶದ ಅಡಿಕೆ ಮಾರುಕಟ್ಟೆ ಪ್ರವೇಶ ಮಾಡಲಿದೆ. ಹೀಗಾಗಿ ಬೇಡಿಕೆ ಮತ್ತು ಪೂರೈಕೆ ನಡುವೆ ವ್ಯತ್ಯಾಸದ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಈಗ ಅಡಿಕೆ ಆಮದು ದರ ಏರಿಕೆ, ಆಮದು ಸ್ಥಗಿತ ಕಡೆಗೆ ಸರ್ಕಾರವು ವಿಶೇಷ ಗಮನಹರಿಸಬೇಕಿದೆ.

ಕೃಷಿಕ, ಪತ್ರಕರ್ತ
Be the first to comment on "ಮುಂದಿನ 5 ವರ್ಷದಲ್ಲಿ ಭಾರತದ ಪಾನ್ ಮಸಾಲಾ ಉದ್ಯಮ 53 ಸಾವಿರ ಕೋಟಿಗೆ ತಲುಪುವ ನಿರೀಕ್ಷೆ | ಅಡಿಕೆ ಆಮದು ಸ್ಥಗಿತವಾದರೆ ಅಡಿಕೆ ಭವಿಷ್ಯ ಭದ್ರ… ? |"