ಪಪ್ಪಾಯಿ ಬೆಳೆ ಕಲಿಸಿದ ಕೃಷಿ ಪಾಠ | ಕೃಷಿ ಬದುಕಿಗೊಂದು ಸ್ಫೂರ್ತಿಯ ಮಾತು |

March 28, 2025
8:12 AM
ಕೃಷಿ ಸವಾಲು, ಕೃಷಿ ಕಷ್ಟ, ಕೃಷಿ ಇನ್ನು ಸಾಧ್ಯವೇ ಇಲ್ಲ ಎನ್ನುವ ನೆಗೆಟಿವ್‌ ಪಟ್ಟಿಗಳ ನಡುವೆ ಕೃಷ್ಣಪ್ರಸಾದ್‌ ಅವರು  ಇತರೆಲ್ಲಾ ಕೃಷಿಕರೆಲ್ಲರ ನಡುವೆ ಮಾದರಿಯಾಗಿದ್ದಾರೆ. ಕೃಷಿ ಉಳಿಯುವುದು ಹಾಗೂ ಬೆಳೆಯುವುದು ಇಂತಹ ಪ್ರಯತ್ನಗಳ ಮೂಲಕ. ಕೃಷ್ಣಪ್ರಸಾದ್‌ ಅವರ ಜೊತೆಗಿನ ಮಾತುಕತೆ ಇಲ್ಲಿದೆ...

ಕೃಷಿ ಎಂದರೆ ಕೇವಲ ಬೆಳೆಯುವುದು ಮಾತ್ರವಲ್ಲ, ಕೃಷಿ ಉತ್ಪನ್ನಗಳಿಗೆ ಸೂಕ್ತ ಧಾರಣೆ , ಸರಿಯಾದ ಮಾರುಕಟ್ಟೆ ವ್ಯವಸ್ಥೆಯವರೆಗೂ ಇದೆ. ಕೃಷಿ ಉತ್ಪನ್ನ ಸರಿಯಾಗಿ ಮಾರುಕಟ್ಟೆ ಪ್ರವೇಶಿಸಿದರೆ ಮಾತ್ರವೇ ರೈತನಿಗೂ ಆದಾಯ, ರೈತನ ಯಶಸ್ಸು. ಒಂದು ವೇಳೆ ಮಾರುಕಟ್ಟೆಯೇ ಸಮಸ್ಯೆಯಾದರೆ ರೈತರು ಏನು ಮಾಡಬಹುದು..? ಸೋಲಬೇಕಾಗಿಲ್ಲ, ರೈತನೇ ಮಾರುಕಟ್ಟೆಗೆ ಇಳಿಯಬೇಕು ಎನ್ನುವುದಕ್ಕೆ ಉದಾಹರಣೆ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಎಡನಾಡು ಗ್ರಾಮದ ಕೃಷ್ಣಪ್ರಸಾದ್‌ ಅವರು ಮಾದರಿ. ಅವರೇ ಹೇಳುವ ಹಾಗೆ, “ಕೃಷಿ ಎನ್ನುವುದು ಉದ್ಯೋಗವಾದರೆ, ಕೃಷಿಕ ಎಂದರೆ ಅನ್ನದಾತನಾದರೆ ಮಾರುಕಟ್ಟೆ ಮಾಡುವುದು ಕೂಡಾ ಅವನ ಹಕ್ಕು. ಹೀಗಾಗಿ ತೋಟದಲ್ಲಿ ಸೊಳ್ಳೆ ಕಡಿಯುವಾಗ ಇಲ್ಲದ ಸ್ವಾಭಿಮಾನ ರಸ್ತೆ ಬದಿಯಲ್ಲಿ  ನಿಂತು ನಮ್ಮದೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವಾಗಲೂ ನಿಲ್ಲುವಾಗ ಏಕೆ..?” ಎನ್ನುತ್ತಾರೆ. ಅವರೊಂದಿಗಿನ ಮಾತುಕತೆ ಇಲ್ಲಿದೆ………..ಮುಂದೆ ಓದಿ…..

Advertisement
ಕೃಷಿಕ ಕೃಷ್ಣಪ್ರಸಾದ್‌

 

ಕೃಷ್ಣಪ್ರಸಾದ್‌ ಅವರು ಓದಿದ್ದು ಎಲ್‌ಎಲ್‌ಬಿ. ಕೆಲವು ಸಮಯ ವಕೀಲ ವೃತ್ತಿಯನ್ನೂ ಕಾಸರಗೋಡಿನಲ್ಲಿ ಮಾಡುತ್ತಿದ್ದರು. ಈ ವೃತ್ತಿಯ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದರು. ಪರಂಪರಾಗತವಾಗಿ ಬಂದಿರುವ ಅಡಿಕೆ, ತೆಂಗು  ಅವರ ಮುಖ್ಯಕೃಷಿಯಾಗಿತ್ತು. ಉಪಬೆಳೆಯಾಗಿ ಜಾಯಿಕಾಯಿ ಬೆಳೆದಿದ್ದರು.2021 ರ ಫೆಬ್ರವರಿ ಸಮಯದಲ್ಲಿ ಕಾಸರಗೋಡು ಕೃಷಿ ಇಲಾಖೆಯ ಅಧಿಕಾರಿ ಪಪ್ಪಾಯಿ ಕೃಷಿ ಮಾಡಲು ಕೃಷ್ಣಪ್ರಸಾದ್‌ ಅವರನ್ನು ಪ್ರೇರೇಪಿಸಿದರು, ಅದಕ್ಕೆ ಪೂರಕವಾಗಿ ಬೆಂಬಲಿಸಿದರು.ಸುಮಾರು 150 ಗಿಡಗಳನ್ನು ಮನಸ್ಸಿಲ್ಲದ ಮನಸ್ಸಿನಲ್ಲಿ ಪಪ್ಪಾಯಿ ಕೃಷಿ ಮಾಡಿದರು. ಆಗ ಅವರು ಮಾರುಕಟ್ಟೆಯ ಬಗ್ಗೆ ಯೋಚನೆ ಮಾಡಲಿಲ್ಲ. ಗಿಡ ಚೆನ್ನಾಗಿ ಬೆಳೆಯಿತು, ಜನವರಿ ವೇಳೆಗೆ ಇಳುವರಿಯೂ ಬಂತು. ಮಾರುಕಟ್ಟೆಗೆ ಹೋದಾಗ ಧಾರಣೆ ಇಲ್ಲ…!, ಕೇಳುವವರೇ ಇಲ್ಲದ ಸ್ಥಿತಿ.  ಅಂತೂ ಅಂಗಡಿಗಳಿಗೆ ಕೊಟ್ಟಾಗ ಹಣ ಇಲ್ಲ..!, ಇಂದು.. ನಾಳೆ ಎನ್ನುವ ಉತ್ತರ. ಇದೇ ಸವಾಲಾಯಿತು. ಪಪ್ಪಾಯಿ ಹಣ್ಣು ಆರಂಭವಾಗಿದೆ. ಮಾರುಕಟ್ಟೆ ಸಾಧ್ಯವಿಲ್ಲ. ಇಂತಹ ಪರಿಸ್ಥಿತಿ ಕೃಷಿಕರನ್ನು ಸಹಜವಾಗಿಯೇ ಕಂಗೆಡಿಸುತ್ತದೆ. ಕೃಷಿಯೇ ಬೇಡ ಎನ್ನುವ ಮನಸ್ಥಿತಿ ಇಲ್ಲಿ ಆರಂಭವಾಗುತ್ತದೆ. ಆದರೆ ಕೃಷ್ಣ ಪ್ರಸಾದ್‌ ಅವರು ಇದನ್ನೇ ಸವಾಲಾಗಿ ಸ್ವೀಕರಿಸಿದರು, ತಾವೇ ಸ್ವತ: ಪಪ್ಪಾಯಿ ಮಾರಾಟಕ್ಕೆ ಇಳಿದರು. ಯಶಸ್ಸೂ ಆದರು. ಸವಾಲು ಗೆದ್ದರು. ಇದಕ್ಕಾಗಿ ಕೃಷ್ಣಪ್ರಸಾದ್‌ ಅವರು ಇತರ ಕೃಷಿಕರಿಗೂ ಮಾದರಿ.

ಪಪ್ಪಾಯಿ ಇಳುವರಿ ಬರಲು ಆರಂಭವಾದ ತಕ್ಷಣವೇ ಮಾರಾಟವೂ ಅಗತ್ಯ. ದೀರ್ಘ ಕಾಲದ ದಾಸ್ತಾನು ಸಾಧ್ಯವಿಲ್ಲ. ಹೀಗಾಗಿ ಕೃಷ್ಣಪ್ರಸಾದ್‌ ಅವರಿಗೆ ಮಾರಾಟವೂ ಅನಿವಾರ್ಯವಾಯಿತು. ಮಾರುಕಟ್ಟೆಯಲ್ಲಿ ಧಾರಣೆ ಇಲ್ಲದಾಗ, ಹಣವೂ ಸಿಗದಾಗ ಮಾಡಿರುವ ಕೃಷಿಯಲ್ಲಿ ಆದಾಯ, ಕನಿಷ್ಟ ಬಂಡವಾಳ ಸಿಗಬೇಕಾದರೆ ಮಾರಾಟಕ್ಕೆ ಬೇಕಾದ ವ್ಯವಸ್ಥೆ ಅಗತ್ಯವಾಯಿತು. ಆಗ ತಾವೇ ರಸ್ತೆ ಬದಿ ನಿಂತು ನಮ್ಮದೇ ಕೃಷಿ ಉತ್ಪನ್ನವನ್ನು ಏಕೆ ಮಾರಾಟ ಮಾಡಬಾರದು ಎಂದು ನಿರ್ಧರಿಸಿ ರಸ್ತೆ ಬದಿಗೆ ಸ್ಕೂಟರ್‌ನಲ್ಲಿ ಬಂದು ನಿಂತರು. ಬದಿಯಡ್ಕ-ಕುಂಬಳೆ ರಸ್ತೆಯ ಸೀತಾಂಗೋಳಿ ಬಳಿಯ ಕುಳ್ಳಂಬೆಟ್ಟು ಎಂಬಲ್ಲಿ ಮಾವಿನ ಮರ ಅಡಿಯಲ್ಲಿ ಸ್ಕೂಟರ್‌ ನಲ್ಲಿ ಪಪ್ಪಾಯಿ ಜೊತೆಗೆ ಬಂದಿ ನಿಂತರು. ಆರಂಭದಲ್ಲಿ ಯಾರೂ ವಾಹನ ನಿಲ್ಲಿಸಿಲ್ಲ.  ಕೊನೆಗೆ ಆ ದಿನ ಒಬ್ಬ ಬಂದು, ವಿಚಾರಿಸಿದ, ಅಲ್ಲಿಂದ ವ್ಯಾಪಾರ ಆರಂಭ…ಈಗ ಕಾರಿನಲ್ಲಿ ಬಂದು ವ್ಯಾಪಾರ…

ಕೃಷಿ ಉತ್ಪನ್ನಗಳೊಂದಿಗೆ ಕೃಷಿಕ ಕೃಷ್ಣಪ್ರಸಾದ್‌
ಕಾರಿನಲ್ಲಿ ತುಂಬಿರುವ ಕೃಷಿ ಉತ್ಪನ್ನ
ಪಪ್ಪಾಯಿ ಬೆಳೆ ಬೆಳೆದಾಗಿದೆ, ಮಾರಾಟ, ಮಾರುಕಟ್ಟೆ ಇಲ್ಲದಾಗ ಮೊದಲು ಕಂಗಾಲಾದೆ ಎನ್ನುವ ಕೃಷ್ಣಪ್ರಸಾದ್‌, ಮೊದಲ ಮಾರಾಟದಿಂದ ಧೈರ್ಯ ಬಂತು. ರಸ್ತೆ ಬದಿ ನಿಲ್ಲುವುದು ನಮಗೆ ಹಿತವಲ್ಲ ಅಂತ ಮನಸಿನೊಳಗೆ ಆತಂಕ ಇತ್ತು. ಆದರೆ ಸ್ವಾಭಿಮಾನ ಬದಿಗಿಟ್ಟು ರಸ್ತೆ ಬದಿಯಲ್ಲಿ ನಾನೇ ಬೆಳೆದ ಪಪ್ಪಾಯಿಯನ್ನು ಮಾರಾಟ ಮಾಡಲು ನಿಂತಾಗ ಒಂಥರಾ ಮುಜುಗರ ಅನಿಸಿದೆ, ಆದರೆ  ತೋಟದಲ್ಲಿಸೊಳ್ಳೆ ಕಡಿಯುವಾಗ ಇಲ್ಲದ ಸ್ವಾಭಿಮಾನ ರಸ್ತೆ ಬದಿ ನಿಂತು ನಮ್ಮದೇ ಬೆಳೆಯನ್ನು ಮಾರಾಟ ಮಾಡುವಾಗ ಏಕೆ ಎಂದು ಅನಿಸಿತು, ವ್ಯಾಪಾರವನ್ನ ಧೈರ್ಯವಾಗಿ ನಡೆಸಿದೆ. ಮೊದಲ ದಿನ ತೂಗುವುದಕ್ಕೆ ತಕ್ಕಡಿ, ಚಿಲ್ಲರೆ ಯಾವುದೂ ಇರಲಿಲ್ಲ. ಹೀಗಾಗಿ ಒಂದು ಹಣ್ಣಿಗೆ ಇಂತಿಷ್ಟು ಅಂತ ವ್ಯಾಪಾರ ಮಾಡಿದೆ.  ಧಾರಣೆ ಕಡಿಮೆ ಇತ್ತು, ಅಂದು ಒಂದೇ ದಿನದಲ್ಲಿ ಸುಮಾರು 60 ಕೆಜಿಯಷ್ಟು ಪಪ್ಪಾಯಿ ಮಾರಾಟವಾಗಿರಬಹುದು. ಸವಾಲು ಮನಸ್ಸನ್ನು ಎಷ್ಟು ಗಟ್ಟಿ ಮಾಡುತ್ತದೆ ಎಂದರೆ, ಆ ದಿನ ರಸ್ತೆ ಬದಿ ನಿಂತು ಪಪ್ಪಾಯಿ ಕೈಯಲ್ಲಿ ಹಿಡಿದು ವಾಹನ ಸವಾರರಿಗೆ ತೋರಿಸಿದ್ದೆ, ಮಾರಾಟ ಆದಂತೆಯೇ ಧೈರ್ಯ ಹೆಚ್ಚಾಯ್ತು. ಪ್ರತೀ ದಿನ ಮಧ್ಯಾಹ್ನ ನಂತರ ರಸ್ತೆ ಬದಿ ನಿಲ್ಲುವುದಕ್ಕೆ ಆರಂಭ ಮಾಡಿದೆ. ಯಾವ ಟೀಕೆ, ವ್ಯಂಗ್ಯಗಳಿಗೂ ಬಗ್ಗಲಿಲ್ಲ…
ಹೀಗೇ ವಿವರಿಸುತ್ತಾರೆ ಕೃಷ್ಣ ಪ್ರಸಾದ್.‌

ರಸ್ತೆ ಬದಿ ಮಾರಾಟಕ್ಕೆ ಜೋಡಣೆ
ನಂತರ ಏನು ಎನ್ನುವ ಪ್ರಶ್ನೆ ಬಂತು. ನನ್ನಂತೇ ಹಲವು ಕೃಷಿಕರಿಗೆ ಸಮಸ್ಯೆ ಇದೆ. ನಾನು ಬೆಳೆದ ಪಪ್ಪಾಯಿ ಖಾಲಿಯಾಗುತ್ತಿದ್ದಂತೆಯೇ ಒಂದಷ್ಟು ಗ್ರಾಹಕರು ಸಿದ್ಧರಾಗಿದ್ದರು.ಹೀಗಾಗಿ ಇತರ ಕೃಷಿಕರದ್ದೂ ಉತ್ಪನ್ನ ಮಾರಾಟ ಮಾಡಿದೆ. ಬಾಳೆ ಗೊನೆ, ಮಜ್ಜಿಗೆ, ಜೇನು, ತುಪ್ಪ, ಉಪ್ಪಿನಕಾಯಿ, ಹಪ್ಪಳ ಇತ್ಯಾದಿ ಈಗ ಮಾರಾಟ ಮಾಡುತ್ತೇನೆ ಈಗ. ಸುಮಾರು 25 ಬಗೆಯ ಉತ್ಪನ್ನ ಈಗ ರಸ್ತೆಬದಿ ಮಾರಾಟ ಮಾಡುತ್ತೇನೆ.ಪ್ರತೀ ದಿನ ಮಧ್ಯಾಹ್ನ ನಂತರ ರಸ್ತೆ ಬದಿಗೆ ಬಂದರೆ ಭಾನುವಾರ ಮಾತ್ರಾ ಇಡೀ ದಿನ ವ್ಯಾಪಾರ ಮಾಡುತ್ತೇನೆ….

ಮೊದಲು ನಾವು ಬೆಳೆದ ಪಪ್ಪಾಯಿ ಹಾಗೂ ಇತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತವಾದ ಧಾರಣೆ ಲಭ್ಯವಾದ ಬಳಿಕ ನಮ್ಮ ಗ್ರಾಮದ ಇತರ ಕೃಷಿಕರಿಗೂ ನ್ಯಾಯಯುತವಾದ ಧಾರಣೆ ನೀಡಿ ಖರೀದಿ ಮಾಡಿ ಮಾರಾಟ ಮಾಡುತ್ತೇನೆ. ಅಂದರೆ ನನ್ನಲ್ಲಿ ಧಾರಣೆ ಹೆಚ್ಚು ಎನ್ನುವ ಭಾವನೆ ಕೆಲವರಿಗೆ ಇದೆ. ಆದರೆ ನ್ಯಾಯಯುತವಾದ ಧಾರಣೆಯನ್ನೂ ರೈತರಿಗೆ ನೀಡಿದ್ದೇನೆ ಎನ್ನುವ ತೃಪ್ತಿ ಇದೆ.

ಸವಾಲುಗಳು ಹಲವು ಕಾಡಿದೆ. ರಸ್ತೆ ಬದಿ ನಿಲ್ಲಬೇಕು, ಬಿಸಿಲು-ಮಳೆಯ ರಕ್ಷಣೆ ಬೇಕು. ಒಂದು ಕಾಲದಲ್ಲಿ ರಸ್ತೆ ಅಗಲೀಕರಣವಾಗುವ ವೇಳೆ ನಾಶವಾಗುತ್ತಿದ್ದ ಮರವನ್ನು ನ್ಯಾಯಾಲಯದ ಮೊರೆ ಹೋಗಿ ಉಳಿಸಿಕೊಂಡಿದ್ದೆ. ಅದೇ ಮರವೇ ಈಗ ನಮಗೂ ಆಶ್ರಯವಾಗಿದೆ.ಅದೊಂದು ಕಾಕತಾಳೀಯವಾದ ಘಟನೆಯೂ ಆಗಿ ಹೋಗಿದೆ. ಅಂದು ಉಳಿಸಿದ ಮರವೇ ಈಗ ನಮ್ಮ ನೆರವಿಗೆ ಬಂದಿದೆ..!. ಕೃಷಿಕರು ನೆರವಾಗಿದ್ದರೆ, ಕೃಷಿ ವ್ಯಾಪಾರ ಎನ್ನುವುದು ಕೂಡಾ ಸವಾಲೇ ಆಗಿದೆ. ಇದೆಲ್ಲಾ ದಾಟಿ ಈಗ ಕೃಷಿ ಮಾರುಕಟ್ಟೆಯ ಯಶಸ್ಸು ಸಾಧ್ಯವಾಗಿದೆ.

ಮನೆಯಲ್ಲಿ ಅಡಿಕೆ, ತೆಂಗು ಅನೇಕ ವರ್ಷಗಳಿಂದ ಇದೆ. ಜಾಯಿಕಾಯಿ ಬೆಳೆಯ ಹೊಸದಾಗಿ ಸೇರ್ಪಡೆಯಾಗಿದೆ, ಯಶಸ್ಸಾಗಿದೆ. ಪಪ್ಪಾಯಿ ಬೆಳೆಯ ಮೂಲಕ ಹೊಸ ಸಾಧ್ಯತೆಯನ್ನೂ ತೆರೆದಾಗಿದೆ.ಇದೀಗ ಹಲಸು ಬೆಳೆಯನ್ನೂ ಮಾಡುತ್ತಿದ್ದೇವೆ. ಇರುವ ಜಾಗದಲ್ಲಿ ಸುಮಾರು 40 ಕ್ಕೂ ಅಧಿಕ ವಿವಿಧ ತಳಿಯ ಹಲಸು ಬೆಳೆಯಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಹಲಸು ಕೂಡಾ ನಮ್ಮದೇ ಮರದಲ್ಲಿ ಲಭ್ಯವಾಗುತ್ತದೆ. ಅಂತೂ ಕೃಷಿಯಲ್ಲಿ ನಷ್ಟವಿಲ್ಲ, ಲಾಭವಿದೆ, ನೆಮ್ಮದಿಯೂ ಇದೆ. ಆದರೆ ರೈತನೇ ಸವಾಲುಗಳನ್ನು ಎದುರಿಸಬೇಕು, ಮಾನಸಿಕ ಧೈರ್ಯವನ್ನು ತಂದುಕೊಳ್ಳಬೇಕು
ಎನ್ನುತ್ತಾರೆ ಕೃಷ್ಣಪ್ರಸಾದ್.‌

ಕೃಷಿ ಸವಾಲು, ಕೃಷಿ ಕಷ್ಟ, ಕೃಷಿ ಇನ್ನು ಸಾಧ್ಯವೇ ಇಲ್ಲ ಎನ್ನುವ ನೆಗೆಟಿವ್‌ ಪಟ್ಟಿಗಳ ನಡುವೆ ಕೃಷ್ಣಪ್ರಸಾದ್‌ ಅವರು  ಇತರೆಲ್ಲಾ ಕೃಷಿಕರೆಲ್ಲರ ನಡುವೆ ಮಾದರಿಯಾಗಿದ್ದಾರೆ. ಕೃಷಿ ಉಳಿಯುವುದು ಹಾಗೂ ಬೆಳೆಯುವುದು ಇಂತಹ ಪ್ರಯತ್ನಗಳ ಮೂಲಕ. ಕೃಷಿ ಮಾಡಿ, ಫಲ ಬರುವಷ್ಟರಲ್ಲಿ ಮಾನಸಿಕವಾಗಿ ಕುಗ್ಗದೆ ಇನ್ನಷ್ಟು ಬೆಳೆಸಿ, ಪರ್ಯಾಯ ಮಾರ್ಗವನ್ನು ತಾವೇ ಕಂಡುಕೊಳ್ಳುವ ಮೂಲಕ ಯಶಸ್ಸು ಸಾಧಿಸಬಹುದು. ಹೀಗಾಗಿ ಕೃಷಿಕ ಕೃಷ್ಣಪ್ರಸಾದ್‌ ಅವರು  ಕೃಷಿಕ ವಲಯಕ್ಕೆ ಸ್ಫೂರ್ತಿ.

 

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣ ಪತ್ತೆ | ಹೆಚ್ಚುತ್ತಿರುವ ಬರ್ಮಾ ಅಡಿಕೆ ಸಾಗಾಟ |
March 31, 2025
9:38 PM
by: The Rural Mirror ಸುದ್ದಿಜಾಲ
ಮೈಕ್ರೋಪ್ಲಾಸ್ಟಿಕ್‌ಗಳು ಕೃಷಿಗೆ ಅಡ್ಡಿ-ಇಳುವರಿಯ ಮೇಲೆ ಪರಿಣಾಮ | ವಿಜ್ಞಾನಿಗಳಿಂದ ಎಚ್ಚರಿಕೆ |
March 31, 2025
8:00 AM
by: ವಿಶೇಷ ಪ್ರತಿನಿಧಿ
ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ | ಯುಗಾದಿಗೆ ರೈತರಿಗೆ ಕೊಡುಗೆ |
March 30, 2025
9:53 PM
by: The Rural Mirror ಸುದ್ದಿಜಾಲ
‘ಪರಿಸರ-2025’ ರಾಷ್ಟ್ರೀಯ ಸಮ್ಮೇಳನ | ಉಸಿರಾಡುವ  ಗಾಳಿ , ಕುಡಿಯುವ ನೀರು ,  ಪಕ್ಷಿಗಳ ಕೂಗಿನ ಬಗ್ಗೆ ಯೋಚಿಸುವ ಅಗತ್ಯವಿದೆ
March 30, 2025
9:26 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group