ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿ ಘಾಟ್ ನಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ, ಇಲ್ಲಿನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಆದರೆ, ಸದ್ಯ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ಒಂದು ವಾರದೊಳಗಾಗಿ ಘನ ವಾಹನ ಸಂಚಾರಕ್ಕೂ ಅವಕಾಶ ನೀಡುವ ಪ್ರಯತ್ನ ಮುಂದುರಿದಿದೆ.
ಸಕಲೇಶಪುರ ತಾಲೂಕಿನ ದೋಣಿಗಾಲ್ ಸಮೀಪ ಹೆದ್ದಾರಿ ಕುಸಿತ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಇದೀಗ ಕಾರು, ಜೀಪು, ಟೆಂಪೊ, ಮಿನಿ ವ್ಯಾನ್, ಸಾರಿಗೆ ಸಂಸ್ಥೆಯ ಬಸ್, ರಾಜಹಂಸ, ಐರಾವತ ಬಸ್‌ಗಳು, 6 ಚಕ್ರದ ವಾಹನಗಳು, 20 ಟನ್ ಸಾಮರ್ಥ್ಯದ ಸರಕು ಸಾಗಣೆ ವಾಹನಗಳು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಈ ಮಾರ್ಗದಲ್ಲಿ ಸಂಚರಿಸಬಹುದು. ಅಂಬುಲೆನ್ಸ್, ಅಗ್ನಿಶಾಮಕದಳದ ವಾಹನ ಸೇರಿದಂತೆ ತುರ್ತು ಸೇವಾ ವಾಹನಗಳು 24 ಗಂಟೆ ಸಂಚಾರ ಮಾಡಬಹುದು.
ಬುಲೆಟ್ ಟ್ಯಾಂಕರ್‌ಗಳು, ಕಾರ್ಗೋ ಕಂಟೈನರ್‌ಗಳು, ಉದ್ದ ಚಾಸಿ ಹೊಂದಿ ವಾಹನಗಳು, ಮಲ್ಟಿ ಎಕ್ಸೆಲ್ ಟ್ರಕ್ ಟ್ರೈಲರ್‌ಗಳು ಹಾಗೂ 20 ಟನ್‌ಗಿಂತ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ಸದ್ಯ ನಿರ್ಬಂಧಿಸಲಾಗಿದೆ. ಜುಲೈ 15 ರಿಂದ ಈ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.ಶಿರಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ #Shiradi #ಶಿರಾಡಿಘಾಟಿ #ಮಳೆ #rain pic.twitter.com/JlTuiivZNe
— theruralmirror (@ruralmirror) July 21, 2022
ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ಹೆದ್ದಾರಿ ಕುಸಿತ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು ಸದ್ಯದಲ್ಲೇ ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು . ಬದಲಿ ರಸ್ತೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ 2.2 ಕಿಲೋಮೀಟರ್ ಹೊಸ ರಸ್ತೆ ಮಾಡಲು 4.3 ಕೋಟಿ ಹಣವನ್ನು ಮಂಜೂರು ಮಾಡಲಾಗಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.