Advertisement
ಅಂಕಣ

ಮಕ್ಕಳಿಗೆ ಹೆತ್ತವರೇ ಪರಿವೀಕ್ಷಕರು

Share
ಶಿಕ್ಷಕರು ಭೇಟಿಯಾದಾಗ ಸಾಮಾನ್ಯವಾಗಿ ಹೆತ್ತವರಿಂದ ತಮ್ಮ ಮಕ್ಕಳ ಬಗ್ಗೆ ಕೇಳಿ ಬರುವ ದೂರು ಹೀಗಿರುತ್ತದೆ, “ಎಲ್ಲಾ ಹುಶಾರಿದ್ದಾನೆ. ಆದ್ರೆ ಓದುವುದಿಲ್ಲ. ಕೇಳಿದ್ರೆ ಯಾವುದಕ್ಕೂ ಉತ್ತರ ಕೊಡುವುದಿಲ್ಲ. ಒಂದೋ ಮೊಬೈಲು, ಇಲ್ದಿದ್ರೆ ಅಂಗಳದಲ್ಲಿ ಆಟ. ಪುಸ್ತಕ ಹಿಡಿ ಎಂತ ಹೇಳಿದ್ರೆ ಸಿಟ್ಟು. ನೀವೇ ಜೋರು ಮಾಡಬೇಕು”. ಅವರ ಈ ಮಾತಿನಲ್ಲಿ ಸಮಸ್ಯೆಯೂ ಇದೆ, ಅದರ ಕಾರಣಗಳೂ ಇವೆ. ಆದರೆ ಅವರು ಕಂಡುಕೊಂಡ ಜೋರು ಮಾಡಬೇಕು ಎನ್ನುವ ಪರಿಹಾರ ಸರಿಯಲ್ಲ. ಏಕೆಂದರೆ ಅವರು ಮಗುವಿನ ಸ್ವಸಾಮರ್ಥ್ಯದ ಬೆಳವಣಿಗೆಗೆ  ಪ್ರೇರಣೆ ನೀಡಿರುವುದಿಲ್ಲ.
ಈ ಪ್ರೇರಣೆ ಸಿಕ್ಕುವುದು ತೀರಾ ಎಳೆಯ ಮಕ್ಕಳನ್ನು ಮಾತಾಡಿಸುತ್ತ ಆಟವಾಡಿಸಿದಾಗ. ಹುಟ್ಟಿದ ಮಗುವಿನ ಮೊದಲ ಐದು ವರ್ಷಗಳಲ್ಲಿ ಅದರ ಮೆದುಳಿನ ಬೆಳವಣಿಗೆಯೂ ವೇಗವಾಗಿಯೇ ಆಗುತ್ತದೆ. ಇದು ಜೈವಿಕ ವಿಕಸನದ ವಿದ್ಯಮಾನ. ತೊಟ್ಟಿಲಲ್ಲಿ ಮಲಗಿ ನಿದ್ರಿಸಿದ ಮಗು ಎಚ್ಚರಗೊಂಡ ಬಳಿಕ ಸುತ್ತುಮುತ್ತಲಿನ ಧ್ವನಿಗಳಿಗೆ ಕಿವಿಗೊಡುತ್ತದೆ. ಆ ಹಂತದಲ್ಲಿ ಹಿರಿಯರೂ ಮಕ್ಕಳನ್ನು ಸಿಳ್ಳು, ನಗು, ಆ..ಹಾ..ಹಾ.. ಮುಂತಾದ ಧ್ವನಿಗಳಿಂದಲೇ ಮಾತಾಡಿಸ್ತಾರೆ. ಮಗುವಿನ ಪ್ರತಿಕ್ರಿಯೆಯೂ ಧ್ವನಿಗಳ  ರೂಪದಲ್ಲೇ ಇರುತ್ತದೆ. ಆದರೆ ಎಚ್ಚರಗೊಂಡ ಮಗುವನ್ನು ಬಿಟ್ಟು ಅಮ್ಮ ತನ್ನ ಕೆಲಸಕ್ಕೆ ಹೋಗುವಂತಿಲ್ಲ. ಅದು ಸಂಪರ್ಕ ಕಡಿದ ನೋವನ್ನು ಅನುಭವಿಸುತ್ತದೆ. ಆಡಲು ಒಂದು ವಸ್ತುವನ್ನು ಕೊಟ್ಟು ಅಮ್ಮ ತನ್ನ ಕೆಲಸಕ್ಕೆ ತೆರಳಿದರೂ ಮಗು ಆಟಿಕೆಯನ್ನು ಎಸೆದು ಅಮ್ಮನನ್ನು ಕರೆಯುತ್ತದೆ. ಅದನ್ನೇ  connectivity ಅನ್ನುತ್ತಾರೆ. ಅದು ಅಮ್ಮನಿಗೆ ಯಾವತ್ತೂ ಸಮಯದ ನಷ್ಟ ಅಲ್ಲ. ತುಂಬಾ ಲಾಭದಾಯಕವಾದ ಹೂಡಿಕೆಯೆಂದೇ ಹೇಳಬಹುದು.
ಅಂಬೆಗಾಲಿಟ್ಟು ಮಗು ಓಡಾಡುವ ಹಂತಕ್ಕೆ ಬಂದಾಗ ಅಪ್ಪನೊಂದಿಗಿನ connectivity ಹೆಚ್ಚುತ್ತದೆ. ಕೂಡುಕುಟುಂಬದಲ್ಲಿ ಅಜ್ಜ ಅಜ್ಜಿಯೂ ಮಾತಾಡಿಸುತ್ತ ಆಟ ಆಡಿಸುವ ಪಾತ್ರ ನಿರ್ವಹಿಸುತ್ತಾರೆ. ಇದರಿಂದ ಮಗುವಿನ ಅರಿವಿನ ಪರಿಧಿಯಲ್ಲಿ ವಿವಿಧ ವಸ್ತುಗಳು ಮತ್ತು ಪ್ರಕ್ರಿಯೆಗಳು ಸೇರಿಕೊಳ್ಳುತ್ತವೆ.  ಈ ಹಂತದಲ್ಲಿ ಅಣು ಕುಟುಂಬಗಳಲ್ಲಿ ಹೆತ್ತವರು ತಮ್ಮದೇ ಕೆಲಸಗಳಲ್ಲಿ ಮುಳುಗುತ್ತಾರೆ. ಆಗ ಮಗುವಿಗೆ ತಾನೇನು ಮಾಡಬೇಕೆಂದು ತಿಳಿಯದೆ ಗೊಂದಲವಾಗುತ್ತದೆ. ಅಳುವಿನಿಂದ ಆರಂಭವಾಗುವ ಮಗುವಿನ ಪ್ರತಿಕ್ರಿಯೆ ನಂತರ  ಸುಸ್ತಾಗಿ ಸುಮ್ಮನಾಗುತ್ತ ಜಡತೆಗೆ ಒಳಗಾಗುತ್ತದೆ. ಇಂತಹ ಜಡತೆಯ  ಸಂದರ್ಭಗಳು  ಹೆಚ್ಚಿದಂತೆ ಮಗುವಿನ ಸಾಮರ್ಥ್ಯಗಳ ವಿಕಸನ ಸ್ಥಗಿತಗೊಳ್ಳುತ್ತದೆ. ಹಾಗಾಗಿ ಮಗು ಎಚ್ಚರವಿರುವಷ್ಟು ಹೊತ್ತು ಅದರ ಬೆನ್ನು ಬಿಡದೆ ಪ್ರಚೋದಿಸುತ್ತಿರಬೇಕು. ವಸ್ತುಗಳನ್ನು  ತೋರಿಸಿ ವಿವರಿಸುವುದು, ಚೆಂಡು ಎಸೆದು ತರಲು ಹೇಳುವುದು, ಚೆಂಡನ್ನು ತಮ್ಮತ್ತ ಎಸೆಯಲು ಹೇಳುವುದು, ಆಟದಲ್ಲಿ ಸ್ಪರ್ಧೆಗಿಳಿದು ಸೋತು ಮಗುವಿಗೆ ಗೆದ್ದ ಖುಷಿ ಕೊಡುವುದು ಇತ್ಯಾದಿಗಳು ಮಗುವಿನ ಮನಸ್ಸಿನಲ್ಲಿ ಕಲ್ಪನೆಗಳು ಗರಿಗೆದರುವಂತೆ ಮಾಡುತ್ತವೆ. ಅನೇಕ ವಸ್ತುಗಳ ತುಲನಾತ್ಮಕ ಸ್ವರೂಪಗಳನ್ನೂ ಗುಣಗಳನ್ನೂ ಅರ್ಥೈಸಿಕೊಳ್ಳುತ್ತದೆ. ಅವುಗಳ ಹೆಸರುಗಳನ್ನು ತಿಳಿದುಕೊಳ್ಳುತ್ತದೆ. ಯಾವುದೇ ವಸ್ತುಗಳನ್ನು ಕಂಡಾಗ ತನಗೆ ಗೊತ್ತಿರುವ ಹೆಸರುಗಳನ್ನು ನೆನಪಿಸಿಕೊಳ್ಳುತ್ತದೆ ಮತ್ತು ಗೊತ್ತಿಲ್ಲದ್ದನ್ನು ಪ್ರತ್ಯೇಕಿಸುತ್ತದೆ. ಇದರಿಂದ ಮಗುವಿನ ಸ್ಮರಣಶಕ್ತಿಯೂ ಹೆಚ್ಚುತ್ತದೆ. ಮಗುವಿನಲ್ಲಿ ತೊದಲ್ನುಡಿಗಳಲ್ಲಿ ಮಾತಾಡುವುದು ಮತ್ತು ನಗಿಸುವುದು, ಕಣ್ಮುಚ್ಚುವ ಮತ್ತು ಅಡಗುವ ಆಟ ಆಡುವುದರ ಮೂಲಕ ಮಗು ತನ್ನ ಸಂಬಂಧಗಳನ್ನು ವಿಸ್ತರಿಸಿಕೊಳ್ಳುತ್ತದೆ. ಇದು ಅದರ ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿದೆ.
ಆಧುನಿಕ ಜಗತಿನಲ್ಲಿ ವಿವಾಹಕ್ಕಾಗಿ ಗಂಡು ಹೆಣ್ಣಿನ ಆಯ್ಕೆಯಲ್ಲಿ ಉದ್ಯೋಗವು ಮಹತ್ವದ ಪಾತ್ರ ವಹಿಸುತ್ತದೆ. ಮಗು ಹುಟ್ಟಿದ ಬಳಿಕ ಬಾಣಂತನದ ರಜೆಗಳೆಲ್ಲ ಮುಗಿದಾಗ ಮಗುವಿನ ಆರೈಕೆಗಾಗಿ ತಾಯಿ ಉದ್ಯೋಗವನ್ನು ಬಿಡಬೇಕಾದ ಸಂದರ್ಭ ಬರುತ್ತದೆ. ಆದರೆ ಲಕ್ಷಾಂತರ  ವೇತನದ ಉದ್ಯೋಗವನ್ನು ಬಿಡಲು ಆಕೆ ಸಿದ್ಧಳಿರುವುದಿಲ್ಲ. ಏನಿದ್ದರೂ  ನಾಲ್ಕೈದು ವರ್ಷಗಳಲ್ಲಿ ಮಗು ಶಾಲೆಗೆ ಹೋಗಲು ಸಿದ್ಧವಾಗುತ್ತದೆ. ಕೈಯಲ್ಲಿದ್ದ ಉದ್ಯೋಗವನ್ನು ಬಿಟ್ಟರೆ ಆಮೇಲೆ ಮನೆಯಲ್ಲಿ ಮಾಡುವುದೇನು? ಹಾಗಾಗಿ ಆ ನಾಲ್ಕೈದು ವರ್ಷಗಳ ಕಾಲ ಮಗುವನ್ನು ‘ನೋಡಿಕೊಳ್ಳುವುದಕ್ಕಾಗಿ’ ಆಳುಗಳನ್ನು ನೇಮಿಸಿಕೊಂಡು ಸುಧಾರಿಸುವುದೇ ಒಳ್ಳೆಯದೆಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ಮಗುವಿಗೆ ಆ ನಾಲ್ಕೈದು ವರ್ಷಗಳೇ ಬಹಳ ಪ್ರಾಮುಖ್ಯವಾದುವುಗಳು. ಆಗಲೇ ಅದಕ್ಕೆ ಪ್ರೀತಿಯ ಸಹಿತವಾದ ಪೆÇೀಷಣೆ ಬೇಕಾಗುತ್ತದೆ. ಮಗುವಿನ ಆಹಾರ ಸೇವನೆ ಮತ್ತು ನಿದ್ರೆಗೆ ನಿಗದಿತತೆ ಇರುವುದಿಲ್ಲ. ಅದರ ಆಟದ ಆಸಕ್ತಿಗೂ ನೋಡಿಕೊಳ್ಳುವವರೇ ಸ್ಪಂದಿಸಬೇಕು. ಆದರೆ ಅದು ಕೆಲಸದಾಳುಗಳು ಅರ್ಥಮಾಡಿಕೊಂಡು ಸ್ಪಂದಿಸುವುದೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ.
ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಹೆತ್ತವರಿಂದಾಗಬೇಕಾದ ಅಗತ್ಯವಾದ ಕಾರ್ಯಗಳು ಬೇರೆಯೇ ಇವೆ. ತಾಯಿಯ ಸಾಮೀಪ್ಯ, ದೇಹದ ಕಾವು, ಧ್ವನಿಯ ಮಾರ್ದವತೆ, ಅಪ್ಪಿಕೊಳ್ಳುವ ಬಿಗಿ, ಭಾವನೆಗಳ ಸ್ಪಂದನೆ, ಮಾತಿನ ಕಲಿಕೆ ಇಂತಹ ಕ್ರಿಯೆಗಳು ಮೆದುಳಿನ ಬೆಳವಣಿಗೆಗೆ ಅಗತ್ಯ. ಕೊಡುವ-ಪಡೆಯುವ, ಹಂಚುವ, ತನ್ನದು-ನಿನ್ನದೆಂದು ಪ್ರತ್ಯೇಕಿಸುವ, ಸಲಹೆಗಳನ್ನು ಸ್ವೀಕರಿಸುವ, ಆಜ್ಞೆಗಳನ್ನು ಒಪ್ಪುವ, ಮುಕ್ತವಾಗಿ ಮಾತಾಡುವ, ತನ್ನ ಆಸಕ್ತಿಗಳನ್ನು ಗುರುತಿಸಿಕೊಳ್ಳುವ, ಹೆತ್ತವರ ಮಾರ್ಗದರ್ಶನಕ್ಕೆ ಬದ್ಧರಾಗುವ ಗುಣಗಳಿಗೆ ಮಗುವಾಗಿದ್ದಾಗಲೇ ಅಸ್ತಿವಾರ ಹಾಕಬೇಕು. ಆಡಿಸಲು ಸಮಯವಿಲ್ಲದೆ ಮಗುವಿನ ಕಡೆಗೆ ಹೆತ್ತವರು ತೋರುವ ಏಕಮುಖ ಪ್ರೀತಿಯು ಅದರ ಸ್ವಚ್ಛಂದತೆಗೆ, ಹಟಮಾರಿತನಕ್ಕೆ, ತನ್ನದೇ ಸರಿ ಎಂಬ ಭಾವನೆಗೆ ಕಾರಣವಾಗುತ್ತದೆ. ಹೀಗೆ ಬೆಳೆದ ಮಗುವಿಗೆ ಹೆತ್ತವರ ನಿರೀಕ್ಷೆಗೆ ತಕ್ಕಂತೆ ಕ್ರಿಯಾಶೀಲತೆಯಿಂದ ಸಾಧನೆ ಮಾಡುವ ಆಸಕ್ತಿಯಾಗಲೀ ಸಾಮರ್ಥ್ಯವಾಗಲೀ ಇರುವುದಿಲ್ಲ. ಆಗ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ಮಗುವಿನ ಆರಂಭಿಕ ಐದು ವರ್ಷಗಳಲ್ಲಿ ಆಡಿಸುತ್ತ ಮಾತಾಡಿಸುತ್ತ ಸೃಜನಶೀಲ ಗುಣಸ್ವಭಾವಗಳನ್ನು ಬೆಳೆಸಬೇಕಿತ್ತು ಎಂದು ತಿಳಿದಾಗ ಕಾಲ ಕಳೆದಿರುತ್ತದೆ.
ಇದು ಭಾರೀ ಸಂಪಾದನೆಯಲ್ಲಿ ತೊಡಗಿ ಮಕ್ಕಳಿಗೆ ಸಮಯ ಕೊಡಲಾಗದ ಹೆತ್ತವರ ಕಥೆಯಷ್ಟೇ ಅಲ್ಲ. ಮಧ್ಯಮ ಮತ್ತು ಬಡವರ್ಗದಲ್ಲೂ ಈ ಸಮಸ್ಯೆ ಇದೆ. ಅವರಿಗೂ ಸಂಪಾದನೆಗಾಗಿ ದುಡಿಯುವ ಅನಿವಾರ್ಯತೆ ಇರುವುದರಿಂದಾಗಿ ಮಕ್ಕಳಿಗೆ ತಮ್ಮಷ್ಟಕ್ಕೇ ಎಂಗೇಜ್ ಆಗಿರಲು ಟಿ.ವಿ. ಮತ್ತು ಮೊಬೈಲ್ ಕೊಡುವುದು ಅಭ್ಯಾಸವಾಗಿದೆ. ತಮಗೂ ಕೂಡಾ ಮನರಂಜನೆಗಾಗಿ ಈ ಗೆಜೆಟ್‍ಗಳೇ ಸಹಕಾರಿಯಾಗುತ್ತವೆ. ಹೀಗೆ ಸೃಜನಶೀಲ ಚಿಂತನೆಗೆ ಅವಕಾಶವಿಲ್ಲದಂತೆ ಮಕ್ಕಳನ್ನು ಬೆಳೆಸಿದ ಬಳಿಕ ಅವರನ್ನು ಕಲಿಕೆ ಮತ್ತು ಸಾಧನೆಯ ಮಾರ್ಗದತ್ತ ಹೊರಳಿಸುವುದು ಕಷ್ಟವಾಗುತ್ತದೆ.
ಬೇಗ ಏಳುವುದಿಲ್ಲ,  ಓದುವುದಿಲ್ಲ, ಮೊಬೈಲಿನಲ್ಲೇ ಮುಳುಗಿರುತ್ತಾರೆಂಬ ಒಂದೇ ದೂರನ್ನು ಆರರಿಂದ ಹದಿನಾರು ವರ್ಷದ ಮಕ್ಕಳ ಬಗ್ಗೆ ಎದುರೆದುರೇ ಹೆತ್ತವರು ಹೇಳಿದಾಗ ಯಾವುದೇ ಸ್ಪಂದನೆ ಇಲ್ಲದೆ ಮಕ್ಕಳು ನಿಂತಿರುತ್ತಾರೆ. ಅವರಿಗದು ಕಿರಿಕಿರಿಯಾಗುತ್ತದಷ್ಟೇ ಹೊರತು ತಾನು ಸರಿಯಾಗಬೇಕೆಂಬ ಚಿಂತನೆ ಮೂಡುವುದಿಲ್ಲ. ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳ ಮೇಲೂ ಈ ದೂರು ಕೇಳಿ ಬರುತ್ತದೆ.  ಆದರೆ ಮಕ್ಕಳನ್ನು ನಿಯಂತ್ರಿಸುವುದರಲ್ಲಿ ತಾವು ಕೈಲಾಗದವರೆಂದು ಹೆತ್ತವರು ಮಕ್ಕಳೆದುರೇ ಹೇಳುವುದು ಆಭಾಸವೆನ್ನಿಸುತ್ತದೆ. ಹೆತ್ತವರು ಹೇಳಿದರೆಂದು ಶಿಕ್ಷಕಿಯರು ಮಕ್ಕಳನ್ನು ಬೈಯುವುದರಿಂದ ಅವರನ್ನು ವೈರಿಗಳಾಗಿ ಮಾಡಿಕೊಂಡ ಪ್ರಮಾದವಾಗುತ್ತದಷ್ಟೇ ಹೊರತು ಮತ್ತೇನೂ ಲಾಭವಾಗುವುದಿಲ್ಲ. ನಾನು ಹೆತ್ತವರಿಗೆ ಹೇಳುವುದಿಷ್ಟೇ ‘ಈಗ ನೀವೇ ದಾರಿಗೆ ಬರಬೇಕು. ಮೊಬೈಲ್ ಉಪಯೋಗವನ್ನು ನೀವೇ ಕಡಿಮೆ ಮಾಡಿ. ಫೋನ್‌ ನಲ್ಲಿ ಸುದೀರ್ಘವಾಗಿ ಮಾತಾಡದೆ ಸಂಕ್ಷಿಪ್ತವಾಗಿ ಮಾತು ಮುಗಿಸಿ. ಮನರಂಜನೆಗೆ ಟಿ.ವಿ.ಯನ್ನು ಅವಲಂಬಿಸದಿರಿ. ಮಕ್ಕಳ ಓದು ಬರಹದ ಪ್ರಗತಿಯ ನಿತ್ಯ ಪರಿವೀಕ್ಷಕರಾಗಿ ಸಮಯ ನೀಡಿ. ಮಕ್ಕಳು ಕ್ರಿಯಾಶೀಲತೆಯನ್ನು ತೋರಿದಾಗ ಗುರುತಿಸಿ ಪ್ರಶಂಸಿಸಿ. ಮಕ್ಕಳಿಗೆ ತಾವೇ ಬೆಳೆಯಲು ಅವಕಾಶ ನೀಡಿ. ನಿಮ್ಮ ಇಂತಹ ಸಹಕಾರದೊಂದಿಗೆ ಮಕ್ಕಳ ಸ್ವಯಂ ಪ್ರಯತ್ನವೇ ಅವರಲ್ಲಿ ಸಾಮರ್ಥ್ಯವನ್ನು ವೃದ್ಧಿಸುತ್ತದೆ.’
ಬರಹ :
ಚಂದ್ರಶೇಖರ ದಾಮ್ಲೆ
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

Published by
ಡಾ.ಚಂದ್ರಶೇಖರ ದಾಮ್ಲೆ

Recent Posts

ಅಡಿಕೆ ಸಿಪ್ಪೆಯ ರಸದಿಂದ ಸೋಪು | ಸೋಪಿನಲ್ಲಿದೆ ಔಷಧೀಯ ಮೌಲ್ಯ | ಪೇಟೆಂಟ್‌ ಪಡೆದ ಪುತ್ತೂರಿನ ಸಂಸ್ಥೆ |

ಅಡಿಕೆ ಸಿಪ್ಪೆಯ ರಸದಿಂದ ತಯಾರಿಸಿ ಸೋಪಿಗೆ ಈಗ ಪೇಟೆಂಟ್‌ ಲಭಿಸಿದೆ. ಪುತ್ತೂರಿನ ಸತ್ವಂ…

5 hours ago

ಕ್ಯಾಶ್ಯೂ ಫಾರ್ಮರ್ಸ್ ಟ್ರ್ಯಾಕಿಂಗ್ ಸಿಸ್ಟಮ್ | ರೈತರಿಗೆ ಇದು ಅನುಕೂಲ ಹೇಗೆ..?

ಕೃಷಿಕರಿಗೆ ತಾವು ಕೊಂಡ ಗಿಡ/ತಳಿಗಳ ಮಾಹಿತಿಯನ್ನು ಸುಲಭದಲ್ಲಿ ಪಡೆಯಲನುವಾಗುವ ಕ್ಯೂಆರ್ ಕೋಡ್ ಹಾಗೂ…

15 hours ago

ಹವಾಮಾನ ವರದಿ | 17-09-2024 | ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು-ಮಳೆ| ರಾಜ್ಯದ ಉಳಿದೆಡೆ ಮೋಡ-ಬಿಸಿಲು |

ಈಗಿನ ಹವಾಮಾನ ಪರಿಸ್ಥಿಯಲ್ಲಿ ರಾಜ್ಯದಲ್ಲಿ ನಿರ್ದಿಷ್ಟ ಪರಿಸರದಲ್ಲೇ ಮಳೆಯ ಮುನ್ಸೂಚನೆ ನೀಡಿಲು ಸಾಧ್ಯವಾಗುತ್ತಿಲ್ಲ.

16 hours ago

ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ | ದಕ್ಷಿಣ ಕನ್ನಡದಲ್ಲೂ ಯಶಸ್ವಿಯಾಗಿ ಅನುಷ್ಟಾನ |

ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ ದೇಶದಾದ್ಯಂತ ಚಾಲನೆಗೊಂಡಿದೆ. ಈ ಯೋಜನೆಯಡಿ “ಮಾದರಿ ಸೌರ…

2 days ago

ಹಾಲಿನ ದರ ಹೆಚ್ಚಳ ಚರ್ಚೆ| ಹೈನುಗಾರರಿಗೆ ಪ್ರಯೋಜನವೇನು…? |

ಹಾಲಿನ ದರ ಹೆಚ್ಚಳದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳೂ…

2 days ago