ರಾಜ್ಯದಲ್ಲಿ ದಾವಣಗೆರೆಯು ಮೆಕ್ಕೆಜೋಳವನ್ನು ಅತಿಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲೊಂದಾಗಿದೆ. ಚಳಿಗಾಲದಲ್ಲಿಬಹಳಷ್ಟು ಉಪಯೋಗವಾಗುವ ಮೆಕ್ಕೆಜೋಳವು ಹೊರ ರಾಜ್ಯಗಳಿಗೂ ರಫ್ತಾಗುತ್ತದೆ. ಈಗಾಗಲೇ, ಈ ಜೋಳಕ್ಕೆ ಲದ್ದಿ ಹುಳು, ಹಂದಿಗಳು, ಮುಳ್ಳು ಸಜ್ಜೆ ಕಾಟ ಇತ್ತು. ಇದೀಗ ರೈತ ಬೆಳೆದ ಪಾಪ್ಕಾರ್ನ್ ಮೆಕ್ಕೆಜೋಳಕ್ಕೆ ಗಿಳಿಗಳ ಕಾಟ ಶುರುವಾಗಿದೆ. ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಹಗಲು-ರಾತ್ರಿ ಎನ್ನದೆ ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಪಾಪ್ಕಾರ್ನ್ ತಯಾರಿಸುವ ಮೆಕ್ಕೆಜೋಳಕ್ಕೆ ಹೆಸರುವಾಸಿಯಾಗಿದೆ. ಸಂತೇಬೆನ್ನೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತದೆ. ಸಂತೇಬೆನ್ನೂರಿನ ಮಾವಿನ ಬೆಳೆಯಂತೆ, ಈ ಪಾಪ್ಕಾರ್ನ್ ಮೆಕ್ಕೆಜೋಳ ಕೂಡ ಪ್ರಸಿದ್ಧಿ ಪಡೆದಿದೆ. ಉತ್ತರ ಭಾರತದಲ್ಲಿ ಚಳಿಗಾಲದಲ್ಲಿ ಮೆಕ್ಕೆಜೋಳವನ್ನು ಹರಳು ಮಾಡಿ, ನಂತರ ಪಾಪ್ಕಾರ್ನ್ ಮಾಡುವ ಮೂಲಕ ಸಿನಿಮಾ ಟಾಕೀಸ್, ಮಾಲ್ ಹಾಗೂ ಅಂಗಡಿಗಳಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ. ಶೀತ ಅತಿಯಾಗಿರುವ ಜಾರ್ಖಂಡ್, ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ, ದೆಹಲಿಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ರೈತರು ಗಿಳಿಗಳನ್ನು ಓಡಿಸಲು ಜಮೀನುಗಳಲ್ಲಿ ಶಬ್ದ ಮಾಡಲು ಕೂಲಿ ನೀಡಿ, ಆಳುಗಳನ್ನು ಇರಿಸಿ ಬೆಳೆ ಕಾಯುತ್ತಿದ್ದಾರೆ. ಸಂತೇಬೆನ್ನೂರಿನ ಕೂಗಳತೆಯಲ್ಲಿರುವ ಎಸ್ಬಿಆರ್ ಕಾಲೋನಿ, ಸಿದ್ದನಮಠ, ಚಿಕ್ಕಬ್ಬಿಗೆರೆ, ದೊಡ್ಡಬ್ಬಿಗೆರೆ, ಹೊಳೆನೂರು ಗ್ರಾಮಗಳಲ್ಲಿ ಗಿಳಿಗಳ ಕಾಟ ಮಿತಿಮೀರಿದೆ. ಮೆಕ್ಕೆಜೋಳವನ್ನು ಮೊದಲ ರೋಹಿಣಿ ಮಳೆಯಲ್ಲೇ ಬೆಳೆಯಬೇಕಾಗುತ್ತದೆ, ಇಲ್ಲದಿದ್ದರೆ ರೋಗ ತಗುಲುತ್ತದೆ.
ಈ ಟಿವಿ ಭಾರತ್ ಈ ಬಗ್ಗೆ ವಿಶೇಷ ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರೈತ ಯತೀಶ್ ”5 ಎಕರೆಯಲ್ಲಿ 1.5 ಲಕ್ಷ ಖರ್ಚು ಮಾಡಿ ಪಾಪ್ಕಾರ್ನ್ ಮೆಕ್ಕೆಜೋಳ ಬೆಳೆಯಲಾಗಿದೆ. ಅದರೆ, ಗಿಳಿಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಬೆಳೆಯು ಮನುಷ್ಯನ ಆಹಾರದ ಅವಿಭಾಜ್ಯ ಭಾಗವಾಗಿದೆ. ಜೋಳದ ಹಾಲುಕಾಳನ್ನೇ ಗಿಳಿಗಳು ತಿನ್ನುತ್ತಿವೆ. ಸಾವಿರಾರು ಗಿಳಿಗಳು ಗುಂಪಾಗಿ ಬಂದು ಕೆಲ ನಿಮಿಷಗಳಲ್ಲೇ ತೆನೆ ನಾಶ ಮಾಡುತ್ತಿವೆ. ರಾಜ್ಯ, ಕೇಂದ್ರ ಸರ್ಕಾರ ಪರಿಹಾರ ನೀಡಬೇಕಾಗಿದೆ. ಕಳೆದ ಬಾರಿ ಐದು ಎಕರೆ ಜೋಳ ಬೆಳೆದಿದ್ದು, 50 ಚೀಲ ಫಸಲು ಬರಬೇಕಿತ್ತು. ಆದರೆ, ಕೇವಲ 15 ಚೀಲಗಳಷ್ಟು ಮಾತ್ರ ಬಂದಿತ್ತು. ಹೀಗೆ, ಗಿಳಿಗಳ ಕಾಟ ಮುಂದುವರೆದರೆ ಈ ಬಾರಿಯೂ 20 ಚೀಲ ಫಸಲು ಬರುವುದೂ ಅನುಮಾನ“ ಎಂದರು. “ಸದ್ಯ 4-5 ಸಾವಿರ ರೂಪಾಯಿ ಪ್ರತಿ ಕ್ವಿಂಟಾಲ್ಗೆ ಬೆಲೆ ಇದೆ. ಬೀಜ ಬಿತ್ತನೆ, ಗೊಬ್ಬರ ಹಾಕಲು ಕೂಲಿಗೆ ಒಂದು ಎಕರೆಗೆ 25 ಸಾವಿರ ರೂ. ವ್ಯಯ ಮಾಡಲಾಗುತ್ತದೆ. ಒಂದು ಎಕರೆಗೆ 8ರಿಂದ 10 ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಇದೀಗ ಗಿಳಿಗಳ ಕಾಟದಿಂದ ಒಂದು ಎಕರೆಗೆ 2ರಿಂದ 3 ಕ್ವಿಂಟಾಲ್ ಮಾತ್ರ ಸಿಗುತ್ತಿದೆ. ಈ ಜೋಳವು ಪಾಪ್ಕಾರ್ನ್, ಚಪಾತಿ ಹಿಟ್ಟು, ರವಾ ಮಾಡಲು ಉಪಯೋಗವಾಗುತ್ತದೆ” ಎಂದು ಮತ್ತೊಬ್ಬ ರೈತ ಪ್ರಸನ್ನ ಕುಮಾರ್ ಹೇಳಿದರು.
ಗಿಳಿಗಳನ್ನು ಓಡಿಸಲು ತಟ್ಟೆ ಶಬ್ದ: ಗಿಳಿಗಳನ್ನು ಓಡಿಸಲು ತಟ್ಟೆ ಬಾರಿಸುವುದು, ಸ್ಪೀಕರ್, ಖಾಲಿ ಡಬ್ಬ ಬಾರಿಸುವುದು, ಕೂಗುವುದು ಸೇರಿ ಎಲ್ಲ ರೀತಿಯಲ್ಲಿ ವಿನೂತನ ಪ್ರಯೋಗ ಮಾಡಲಾಗುತ್ತಿದೆ. ಆದರೂ ಕೂಡ ಗಿಳಿಗಳ ಕಾಟ ಮುಂದುವರೆದಿದ್ದು, ರೈತರು ಹೈರಾಣಾಗಿದ್ದಾರೆ.
ಮೂಲ :ಈಟಿವಿ ಭಾರತ್