ಪಟ್ಲಿ ಗ್ರಾಮ ಕಪ್ಪು ಕಬ್ಬು ಬೆಳೆಯಲ್ಲಿ ರಾಜ್ಯದಲ್ಲೇ ವಿಶಿಷ್ಟ ಗುರುತನ್ನು ಹೊಂದಿದೆ. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಕಪ್ಪು ಕಬ್ಬಿಗೆ ಈ ಬಾರಿ ಕೂಡ ಭರ್ಜರಿ ಬೇಡಿಕೆ ಕಂಡುಬಂದಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಜೊತೆಗೆ ಹೊರರಾಜ್ಯಗಳಿಗೂ ಕಬ್ಬು ಸರಬರಾಜು ಆಗುತ್ತಿದೆ.
ಚನ್ನಪಟ್ಟಣ ಸಮೀಪದ ಪಟ್ಲಿ ಗ್ರಾಮದಲ್ಲಿ ಬೆಳೆದ ಕಪ್ಪು ಕಬ್ಬು ರುಚಿ, ತೂಕ ಮತ್ತು ಗುಣಮಟ್ಟದ ಕಾರಣದಿಂದ ವರ್ಷಗಳಿಂದಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯ ಪಡೆದುಕೊಳ್ಳುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಲೆ ಏರಿಳಿತ ಕಂಡಿದ್ದರೂ, ಸಂಕ್ರಾಂತಿ ಹಬ್ಬಕ್ಕೆಂದೇ ಈ ವಿಶೇಷ ಕಬ್ಬು ಬೆಳೆಯುವ ಪರಂಪರೆಯನ್ನು ರೈತರು ಮುಂದುವರಿಸಿಕೊಂಡು ಬಂದಿದ್ದಾರೆ.
ಈ ಬಾರಿ ಸ್ಥಳದಲ್ಲೇ 10 ಕಬ್ಬುಗಳಿಗೆ 120 ರೂಪಾಯಿಗಿಂತ ಮೇಲ್ಪಟ್ಟ ದರ ಲಭ್ಯವಾಗುತ್ತಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ವ್ಯಾಪಾರಿಗಳು ಪಟ್ಲಿ ಗ್ರಾಮಕ್ಕೆ ನೇರವಾಗಿ ಬಂದು ಕಬ್ಬು ಖರೀದಿ ಮಾಡುತ್ತಿದ್ದಾರೆ.
ಕೆ. ಲೋಕೇಶ್, ಕಳೆದ 20 ವರ್ಷಗಳಿಂದ ಕಬ್ಬಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದು, ಪಟ್ಲಿ ಗ್ರಾಮದ ಕಪ್ಪು ಕಬ್ಬಿಗೆ ಮಾರುಕಟ್ಟೆಯಲ್ಲಿ ಸದಾ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳುತ್ತಾರೆ.
ವ್ಯಾಪಾರಿ ಕಾಂತರಾಜ್, ಕಳೆದ ಎರಡು ವರ್ಷಗಳಿಂದ ಪಟ್ಲಿ ಗ್ರಾಮದಿಂದ ಕಬ್ಬು ಖರೀದಿ ಮಾಡಿ ಮಾಗಡಿಯಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. “ಇಲ್ಲಿನ ಕಬ್ಬಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ” ಎಂದು ಹೇಳಿದರು.
ಕಳೆದ 20 ವರ್ಷಗಳಿಂದ ಸಂಕ್ರಾಂತಿ ಹಬ್ಬಕ್ಕಾಗಿ ಮಾತ್ರವೇ ಕಪ್ಪು ಕಬ್ಬು ಬೆಳೆಯುತ್ತಿದ್ದೇವೆ. ಬೆಂಗಳೂರು ಮಾತ್ರವಲ್ಲದೆ ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಈ ಬಾರಿ ನಿರೀಕ್ಷೆಗೆ ತಕ್ಕ ಬೆಲೆ ಸಿಕ್ಕಿರುವುದು ಖುಷಿ ತಂದಿದೆ” ಎಂದು ರೈತ ಕುಮಾರ್ ಸಂತಸ ವ್ಯಕ್ತಪಡಿಸಿದರು.



