ಇಂಧನ ಬೆಲೆ ಒಂದು ರೂಪಾಯಿ ಹೆಚ್ಚಾದರೂ ಏರಿಕೆ ಬಗ್ಗೆ ದೇಶಕ್ಕೆ ದೇಶವೇ ಚರ್ಚೆ ನಡೆಸುತ್ತದೆ. ಕಾರಣ ಇಷ್ಟೇ, ಜಗತ್ತಿನಾದ್ಯಂತ ಅದರ ಮೇಲಿರುವ ಅವಲಂಬನೆ ಹೆಚ್ಚು. ತೈಲ ಬೆಲೆ ಆಧಾರದಲ್ಲಿಯೇ ಎಲ್ಲವೂ ದುಬಾರಿಯಾಗುತ್ತದೆ. ಇದೀಗ ಗಡಿಭಾಗದಲ್ಲಿ ಪೆಟ್ರೋಲ್ ಕಾರಣದಿಂದ ಕೇರಳದಿಂದ ಕರ್ನಾಟಕಕ್ಕೆ ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ಕೇರಳದಲ್ಲಿ ಪೆಟ್ರೋಲ್ ದರ ಕರ್ನಾಟಕಕ್ಕಿಂತ ಭಾರೀ ಹೆಚ್ಚು. ಕೇರಳ ಸರ್ಕಾರ ಸೆಸ್ ದರ ಹೆಚ್ಚಿಸಿದ ಕಾರಣ ಕೇರಳದಲ್ಲಿ ಪೆಟ್ರೊಲ್ ದರ ಹಿಗ್ಗಾಮುಗ್ಗಾ ಏರಿಕೆಯಾಗಿದೆ. ಕರ್ನಾಟಕಕ್ಕಿಂತ ಕೇರಳದಲ್ಲಿ ಪೆಟ್ರೋಲ್ ದರ 7 ರೂಪಾಯಿ ಹೆಚ್ಚಿದೆ. ಅದೇ ರೀತಿ ಡೀಸೆಲ್ ದರ 10 ರೂಪಾಯಿ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಲೀಟರ್ಗೆ 108.48 ರೂಪಾಯಿ ಆಗಿದ್ದರೆ. ಡೀಸೆಲ್ ಗೆ 97.40 ರೂಪಾಯಿಯಾಗಿದೆ. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.
ಅದೇ ರೀತಿ ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.48 ರೂಪಾಯಿಯಾಗಿದೆ. ಹೀಗಾಗಿ ಕೇರಳ ರಾಜ್ಯಕ್ಕಿಂತ 7 ರೂಪಾಯಿ ಕಡಿಮೆ ಬೆಲೆಗೆ ಪೆಟ್ರೋಲ್ ದೊರೆಯುತ್ತಿದೆ. ಇದೇ ಕಾರಣಕ್ಕೆ ಕೇರಳದ ಗಡಿಭಾಗಗಳಿಂದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಕರ್ನಾಟಕಕ್ಕೆ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಒಟ್ಟಾರೆ ಪೆಟ್ರೋಲ್, ಡೀಸೆಲ್ ದರಕ್ಕೆ ಹೋಲಿಸಿದರೆ ನಮ್ಮ ನೆರೆಯ ಕೇರಳಕ್ಕಿಂತ ಕರ್ನಾಟಕವೇ ಬೆಸ್ಟ್ ಎಂಬುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ.