ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ

January 9, 2025
10:49 AM
ಸ್ವತಃ ದುಡಿಮೆಗಾರರೇ ತಮ್ಮ ಮಕ್ಕಳು ದೈಹಿಕ ದುಡಿಮೆಯ ವೃತ್ತಿಗೆ ಇಳಿಯಬಾರದೆಂದು ಬಯಸುತ್ತಾರೆ. ವಿದ್ಯೆಯ ಕ್ಷೇತ್ರದಲ್ಲಿ ದೊರಕುವ ಪದವಿಯಿಂದ ಜೀವನ ಸುಂದರವಾಗುತ್ತದೆಂದು ಅವರು ನಂಬಿದ್ದಾರೆ. ಆದರೆ ಅದೇ ಸತ್ಯವಲ್ಲ. ಪ್ರಾಯೋಗಿಕ ಅನುಭವವಿಲ್ಲದ ವಿದ್ಯೆ ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವುದಿಲ್ಲ.

ಸಿನರ್ಜಿ ಎಂದರೆ ವಿವಿಧ ಕೌಶಲಗಳ ಮತ್ತು ಸಾಮಥ್ರ್ಯಗಳ ಮಂದಿ ಸೇರಿ ಒಂದು ಕೆಲಸವನ್ನು ಪರಿಪೂರ್ಣವಾಗಿ ಮಾಡುವ ಪ್ರಕ್ರಿಯೆ. ಉದಾಹರಣೆಗೆ, ಹಿಂದಿನ ಕೃಷಿ ಕುಟುಂಬಗಳಲ್ಲಿ ಅನುಭವಸ್ಥರಾದ ಹಿರಿಯರು, ತ್ರಾಣವಂತರಾದ ಯುವಕರು ಮತ್ತು ಮಧ್ಯವಯಸ್ಕರು, ನಾಜೂಕು ಕೆಲಸಗಳ ಮಹಿಳೆಯರು ಮತ್ತು ಎಲ್ಲರ ಸಹಕಾರಕ್ಕೆ ಮಕ್ಕಳು ಸೇರಿ ದುಡಿಯುತ್ತಿದ್ದರು. ಇಲ್ಲಿ ಯಾರೊಬ್ಬರ ಕೆಲಸವು ಅನಿವಾರ್ಯ ಮತ್ತು ಶ್ರೇಷ್ಟ ಅಂತ ಇಲ್ಲ. ಎಲ್ಲರ ಕೆಲಸವೂ ಅನಿವಾರ್ಯವೇ. ಅದೇ ಸಿನರ್ಜಿ. ಯಾರೊಬ್ಬರಿಲ್ಲದಿದ್ದರೆ ಉಳಿದವರಿಗೆ ಕೆಲಸದ ಹೊರೆ ಹೆಚ್ಚಾಗುತ್ತದೆ. ಇಲ್ಲಿ ಯಾರೊಬ್ಬರ ಕೆಲಸಕ್ಕೆ ಸಂಬಳದ ಲೆಕ್ಕವಿಲ್ಲ. ಏಕೆಂದರೆ ಅದು ಕುಟುಂಬದ ದುಡಿಮೆ (Family labour). ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ದುಡಿಯುವುದು ಮತ್ತು ಅವರವರ ಅಗತ್ಯಕ್ಕೆ ತಕ್ಕಂತೆ ಪಡೆಯುವುದು ಅದರ ತತ್ವ. ಆದರೆ ಈಗ ಅದಿಲ್ಲ. ಕೆಲಸದ ಅರ್ಥವೇ ಬದಲಾಗಿದೆ. ಅದು ಅಲರ್ಜಿ, ಅಂದರೆ ಇಷ್ಟವಿಲ್ಲದ್ದಾಗಿದೆ.

ಮನೆಯಲ್ಲಿ ಧ್ಯಾನ್ಯ ಇದ್ದರೂ ಅದನ್ನು ಬೇಯಿಸಿ ಅನ್ನ, ಚಪಾತಿ ಅಥವಾ ರೊಟ್ಟಿ ಮಾಡಲು ದೈಹಿಕ ಶ್ರಮ ಅಗತ್ಯ. ಆ ಕೆಲಸವನ್ನು ಅಡುಗೆಯವರು ಮಾಡಿದರೆ ಯಜಮಾನರಿಗೆ ಶ್ರಮವಿಲ್ಲದೆ ಭೋಜನ ಹೊಟ್ಟೆಗೆ ಇಳಿಯುತ್ತದೆ. ಧ್ಯಾನ್ಯ ಬೆಳೆಯಲು ದೈಹಿಕ ಶ್ರಮ ಇದೆ. ಅದು ಕೂಡಾ ಕ್ರಮಬದ್ಧವಾದ ದೈಹಿಕ ಶ್ರಮ. ಈ ಶ್ರಮ ವಹಿಸಿದವರಿಗೆ ಬೆಳೆಯ ಮೇಲೆ ಅಧಿಕಾರ ಇದ್ದರೆ ಊಟದ ರುಚಿಯೇ ಬೇರೆ. ಆದರೆ ತಮ್ಮ ಆಸ್ತಿಯಲ್ಲಿ ಯಾರೇ ದುಡಿದರೂ ಧಾನ್ಯದ ಒಡೆಯನಿಗೆ ಊಟ ರುಚಿಸುತ್ತದೆ. ದುಡಿದವನಿಗೆ ಅರೆ ಹೊಟ್ಟೆ ತುಂಬಿದರೂ ಕೆಲಸಕ್ಕೆ ಹೋಗುತ್ತಾನೆ. ಒಡೆತನ ಮತ್ತು ಬಡತನಗಳ ಸಂಬಂಧ ಹೀಗೆ ಸಾಗಿ ಬಂದಿದೆ.
ಈಗ ಇಲ್ಲಿ ಚರ್ಚೆಗೆ ಎತ್ತಿರುವ ವಿಷಯವೆಂದರೆ ಅದು ಕೆಲಸದ ಬಗ್ಗೆ ಧೋರಣೆ ಏನಿದೆ ಎಂಬುದು. ದೈಹಿಕ ಶ್ರಮವೆಂದರೆ ಅದು ಅನಿವಾರ್ಯವಾಗಿ ಹಣಕ್ಕೆ ಮಾರುವ ಒಂದು ವಿನಿಮಯದ ವಸ್ತು. ಹಣವಿದ್ದವರು ಅಗತ್ಯವಿದ್ದಷ್ಟು ಕೊಳ್ಳಬಹುದಾದ ವಸ್ತು. ಅದನ್ನು ಬಿಟ್ಟು ಬೇರೇನೂ ಇಲ್ಲದವರೇ ಅದನ್ನು ಮಾರುತ್ತಾರೆ. ಅದು ಕೃಷಿ, ಕೈಗಾರಿಕೆ, ಅಡುಗೆಮನೆ, ಸ್ವಚ್ಛತೆ ಇತ್ಯಾದಿ ಯಾವುದೂ ಆಗಬಹುದು. ಹೀಗೆ ದುಡಿಯುವವರು ಒಂದಷ್ಟು ಉಳಿತಾಯ ಮಾಡಿ ವ್ಯಾಪಾರ ಮಾಡಿದರೆ ಈ ಕೆಲಸದಿಂದ ಬಿಡುಗಡೆಯಾಗಿ ಮತ್ತೊಂದು ದುಡಿಮೆಗೆ ವರ್ಗಾವಣೆಯಾಗುತ್ತದೆ. ಅದು ಸ್ವೋದ್ಯೋಗವೆಂಬ ಗೌರವಕ್ಕೆ ಪಾತ್ರವಾಗುತ್ತದೆ.
ಸಣ್ಣ ಹಿಡುವಳಿದಾರ ಕೃಷಿಕರೂ ಸ್ವಂತ ದುಡಿಮೆ ಮಾಡುತ್ತಾರೆ. ಏಕೆಂದರೆ ಅದರಿಂದ ಕಾರ್ಮಿಕರಿಗೆ ಕೊಡಬೇಕಾದ ವೇತನದ ಉಳಿತಾಯವಾಗುತ್ತದೆ. ಇದು ಅವರಿಗೆ ಸ್ವಂತ ಆದಾಯವಾಗಿ ಆರ್ಥಿಕ ಸ್ವಾವಲಂಬನೆಗೆ ಅನುಕೂಲವಾಗುತ್ತದೆ. ಹೀಗೆ ಅನುಕೂಲ ಹೆಚ್ಚಿಸಿದ ದೈಹಿಕ ದುಡಿಮೆಯೂ ಅವರಿಗೆ ಆಪ್ತವಾಗುವುದಿಲ್ಲ. “ಕೆಲಸಗಾರರನ್ನು ನೇಮಿಸಿಕೊಂಡು ಯಾವಾಗ ಈ ದುಡಿಮೆಯಿಂದ ಮುಕ್ತನಾಗುತ್ತೇನಪ್ಪಾ” ಎಂಬ ಹಂಬಲಿಕೆ ಅವರಲ್ಲಿರುತ್ತದೆ.

ಡ್ರೈವರ್‍ಗೆ ಡ್ರೈವಿಂಗ್, ಕಲಾವಿದನಿಗೆ ಕಲೆ, ಗುಮಾಸ್ತನಿಗೆ ಬರೆಯುವುದು, ಪೊಲೀಸ್ ಇನ್ಸ್ಪೆಕ್ಟರ್ರಿಗೆ ಆರೋಪಿಯ ವಿಚಾರಣೆ, ಶಿಕ್ಷಕರಿಗೆ ಪಾಠ ಮಾಡುವುದು ಕ್ರಿಕೆಟರಿಗೆ ಬ್ಯಾಟ್‍ಬೀಸುವುದು ಹೀಗೆ ತಮ್ಮ ತಮ್ಮ ಉದ್ಯೋಗಗಳು ಆಪ್ತವಾಗಿರುತ್ತವೆ. ಏಕೆಂದರೆ ಅವುಗಳಲ್ಲಿ ಕೌಶಲ್ಯದ ಕಂಪು ಇರುತ್ತದೆ. ಆದರೆ ಮೈಮುರಿದು ದುಡಿಯುವ ಕೆಲಸಗಳಲ್ಲಿ ಕೌಶಲವಿದ್ದರೂ ಅದಕ್ಕೆ ಬೆಲೆ ಕಡಿಮೆಯೇ. ಇದು ಸರಿಯಾದ ಮೌಲ್ಯ ಮಾಪನವಲ್ಲದಿದ್ದರೂ ಸಮಾಜದಲ್ಲಿ ಇರುವುದು ಹಾಗೆಯೇ. ಹಾಗಾಗಿ “ಈ ದುಡಿತ ತಮ್ಮ ತಲೆಮಾರಿಗೇ ಸಾಕು, ಮಕ್ಕಳಿಗೆ ಬೇಡ” ಎಂಬ ಧೋರಣೆ ಬೆಳೆದಿದೆ. ಹೀಗಾಗಿ ಮುಂದಿನ ತಲೆಮಾರು ಮಣ್ಣಿನ ಕೆಲಸದಿಂದ ಹೊರಗುಳಿಯಬೇಕಿದ್ದರೆ ಇರುವ ಒಂದೇ ದಾರಿಯೆಂದರೆ ಮಕ್ಕಳಿಗೆ ಶಿಕ್ಷಣ ನೀಡುವುದು. “ಮಕ್ಕಳನ್ನು ಶಾಲೆಗಳಿಗೆ ಕಳಿಸಿ ಓದು ಬರಹ ಗಳಿಸಿದರೆ ಮುಂದೆ ಕಚೇರಿ ಕೆಲಸಗಳು ಸಿಗುತ್ತವೆ. ಮೈಮುರಿದು ದುಡಿಯಬೇಕಾಗಿಲ್ಲ”. ಇಂತಹ ಒಂದು ಆಲೋಚನೆಯೊಂದಿಗೆ ಸೇರಿಕೊಂಡಿರುವ ಪರಿಕಲ್ಪನೆ ಎಂದರೆ ಶಾಲಾ ಮಕ್ಕಳು ಕೆಲಸಮಾಡಬೇಕಾಗಿಲ್ಲ ಎಂಬುದು.
ಇಂತಹ ಒಂದು ಪರಿಕಲ್ಪನೆಯು ಮಕ್ಕಳಲ್ಲಿ ಬೆಳೆಯುತ್ತಿರುವುದಕ್ಕೆ ಹೆತ್ತವರದ್ದೂ ಪ್ರೋತ್ಸಾಹವಿದೆ. “ಮಕ್ಕಳಿಗೆ ಓದಿ ಬರೆಯುವ ಕೆಲಸವೇ ಬೇಕಾದಷ್ಟಿದೆ. ಇನ್ನು ಅವರು ತೋಟ ಗದ್ದೆಗಳಲ್ಲಿ ದುಡಿದರೆ ಕಲಿಯುವುದು ಯಾವಾಗ?”; “ನಮ್ಮ ಕೆಲಸದ ಸಮಯಕ್ಕೂ ಅವರ ಶಾಲೆಯ ಸಮಯಕ್ಕೂ ಸರಿಹೊಂದುವುದಿಲ್ಲ”; “ಮನೆಕೆಲಸದಿಂದಾಗಿ ಕಲಿಯುವುದಕ್ಕೆ ಅಡಚಣೆಯಾಯಿತ್ತೆಂದು ದೊಡ್ಡವರಾದ ಮೇಲೆ ಹೇಳುವುದು ಬೇಡ”. ಪೋಷಕರ ಇಂತಹ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಮೈಮುರಿದು ಕೆಲಸ ಮಾಡುವ ಶ್ರಮದ ಬಗ್ಗೆ ತಾತ್ಸಾರಭಾವವನ್ನು ಹುಟ್ಟಿಸುತ್ತದೆ. ಪರಿಣಾಮವಾಗಿ ಒಂದಿಷ್ಟು ಆಲಸ್ಯವೂ ಸೇರಿಕೊಳ್ಳುತ್ತದೆ.

ಶಾಲೆಗಳಲ್ಲಿ ಕಾರ್ಯಾನುಭವದ ತರಗತಿಗಳಿರುತ್ತವೆ. ಆದರೆ ಅಂತಹ ಶ್ರಮದಾಯಕ ಕೆಲಸಗಳನ್ನೇನೂ ಮಾಡಿಸುವುದಿಲ್ಲ. ಸಾಮಾನ್ಯ ಕಸ ಹೆಕ್ಕುವ ಕೆಲಸಗಳನ್ನೂ ಮಾಡಿಸಲು ಶಿಕ್ಷಕರು ಹೆದರುವ ಸನ್ನಿವೇಶವಿದೆ. “ಏನು ಶಾಲೆಯಲ್ಲಿ ಕೆಲಸ ಮಾಡಿಸ್ತೀರಾ? ನಾವು ಮಕ್ಕಳನ್ನು ಶಾಲೆಗೆ ಕಳಿಸುವುದು ಕಸ ಹೆಕ್ಕುವುದಕ್ಕಲ್ಲ. ವಿದ್ಯೆ ಕಲಿಯುವುದಕ್ಕೆ. ಅದನ್ನು ಮೊದಲು ಮಾಡಿ” ಎಂದು ಗದರಿಸುವ ಫೋನ್ ಪೋಷಕರಿಂದ ಶಿಕ್ಷಕರಿಗೆ ಬಂದರೆ ಅಚ್ಚರಿ ಇಲ್ಲ. ಇದಕ್ಕೆ ಕಾರಣ, ಹೆತ್ತವರ ಅಭಿಪ್ರಾಯವು ಮಕ್ಕಳು ದುಡಿಮೆಯ ಅನುಭವ ಪಡೆಯುವ ವಿರುದ್ಧವೇ ಇದೆ. ಅದೂ ಕೂಡ ಸ್ವತಃ ದುಡಿದು ಸಂಪಾದಿಸುವ ಪೋಷಕರಲ್ಲಿರುವುದು ಒಂದು ಅಚ್ಚರಿಯ ವಿಷಯವಾಗಿದೆ.

ವಾಸ್ತವಿಕವಾಗಿ ದೇಹಕ್ಕೆ ದುಡಿಮೆಯು ತೀರಾ ಅಗತ್ಯವಾಗಿದೆ. ಯೋಗಾಸನ, ಧ್ಯಾನ, ಪ್ರಾಣಾಯಾಮಗಳನ್ನು ಮಾಡಿದರೂ ಕೆಲಸ ಮಾಡುವುದರಿಂದ ದೇಹಕ್ಕೆ ಭೂಮಿಯ ನೇರ ಸ್ಪರ್ಶ ಸಿಗುತ್ತದೆ. ಎಲ್ಲಾ ಪ್ರಾಣಿಗಳಂತೆಯೇ ಮನುಷ್ಯನಿಗೂ ಭೂಮಿಯ ಸ್ಪರ್ಶದ ಅಗತ್ಯವಿದೆ. ಬರಿಗಾಲಲ್ಲಿ ಶಾಲಾ ಮೈದಾನದಲ್ಲಿ ಆಟ ಆಡುವ ಮಕ್ಕಳಿಗೆ ದಿನಾಲೂ Earthing ಪಡೆಯುವ ಲಾಭವಿದೆ. ನಿರಂತರವಾಗಿ ಶೂ, ಸಾಕ್ಸ್ ಹಾಕಿ ಇಡೀ ದಿನ ನೆಲದ ಸ್ಪರ್ಶದಿಂದ ತಪ್ಪಿಸಿಕೊಳ್ಳುವ ಮಕ್ಕಳಿಗೆ Circuit complete ಆಗುವುದಿಲ್ಲವೆಂಬ ಅಭಿಪ್ರಾಯವನ್ನು ಪ್ರಕಟಿಸಿರುವ ಚಿಕಿತ್ಸಕರೂ ಇದ್ದಾರೆ. ಅಲ್ಲದೆ ಬರಿಗಾಲಲ್ಲಿ ಬಯಲಲ್ಲಿ ಓಡಾಡುವ ಮಕ್ಕಳಿಗೆ ಸಹಜವಾಗಿ ಅಕ್ಯುಂಪಂಕ್ಚರ್ ಚಿಕಿತ್ಸೆ ಲಭಿಸುವ ಲಾಭವೂ ಇದೆ. ಇದಲ್ಲದೆ ಹಾರೆ, ಪಿಕ್ಕಾಸು, ಇಸ್ಮುಳ್ಳು ಮುಂತಾದ ಪರಿಕರಗಳನ್ನು ಬಳಸುವ ಕೌಶಲವು ಮಕ್ಕಳಿಗೆ ದೇಹದ ಅಂಗಾಂಗಗಳನ್ನು ಪೂರ್ಣವಾಗಿ ಬಳಸುವ ಅವಕಾಶ ನೀಡುತ್ತದೆ. ಇಂತಹ ಕೆಲಸಗಳನ್ನು ಪೋಷಕರೊಡನೆ ಮನೆಯಲ್ಲೇ ಮಕ್ಕಳು ಮಾಡಿದರೆ ಆಗ ಅವರಿಗೆ ತಮ್ಮ ತಂದೆ ತಾಯಿಯ ಪರಿಶ್ರಮದ ಪರಿಚಯವೂ ಸಿಗುತ್ತದೆ. ಒಟ್ಟಾಗಿ ಕೆಲಸ ಮಾಡುವುದರಿಂದ ವಿವಿಧ ಕೌಶಲಗಳು ಒಂದೆಡೆ ಸೇರಿ ಕೆಲಸವು ಪರಿಪೂರ್ಣವಾಗಿ ಜರಗುತ್ತದೆ. ಕೃಷಿ ಕೆಲಸಗಳೆಂದರೆ ಅವುಗಳಲ್ಲಿ ಕೆಲವನ್ನು ಮಾಡಲು ಮಕ್ಕಳೇ ಸರಿ. ಬಾಲ್ಯದಲ್ಲಿ ಬಾಗುವ ದೇಹ ದೊಡ್ಡವರಾದಾಗ ಬಾಗುವುದಿಲ್ಲ. ಹಾಗಾಗಿ ಮಕ್ಕಳು ಮನೆಯಲ್ಲಿ ಕೆಲಸ ಮಾಡಿದರೆ ಮತ್ತೆ ಶಾಲೆಯಲ್ಲಿ ನಾಚಿಕೆ, ಮುಜುಗರ ಪಡುವುದಿಲ್ಲ.

ನಾವು ಕಾಯಕವೇ ಕೈಲಾಸ, ದುಡಿಮೆಯೇ ಜೀವನ, Work is worship, Dignity of labour ಮುಂತಾದ ನಾಣ್ನುಡಿಗಳನ್ನು ತಿಳಿದಿದ್ದೇವೆ. ಆದರೆ ನಮ್ಮ ಮನಸ್ಸಿನಾಳದಲ್ಲಿ ದೈಹಿಕ ಪರಿಶ್ರಮಕ್ಕೆ ತಳಮಟ್ಟದ ಸ್ಥಾನ ಕೊಟ್ಟಿದ್ದೇವೆ. ನನ್ನ ಶಿಷ್ಯಂದಿರಲ್ಲಿ ಕೆಲವರು “ಏನ್ಮಾಡ್ತಿದ್ದೀಯಾ?” ಎಂತ ಕೇಳಿದರೆ “ಏನೂ ಇಲ್ಲಾ” ಎನ್ನುತ್ತಾರೆ. ಆಳವಾಗಿ ಕೇಳಿದಾಗ ಅವರು ತಮ್ಮ ಕೃಷಿ ವೃತ್ತಿಯ ಬಗ್ಗೆ ಹೇಳುತ್ತಾರೆ. ಅಂದರೆ ಸ್ವಂತ ಕೃಷಿ ಮಾಡುತ್ತಿದ್ದರೂ ಅವರು ಅದನ್ನು ಗೌರವದ ಉದ್ಯೋಗವೆಂದು ತಿಳಿಯುವುದಿಲ್ಲ. ನಮ್ಮ ಶಿಕ್ಷಣವು ಅಂತಹ ಮಾನಸಿಕತೆಯನ್ನು ರೂಪಿಸಿದೆ. ಕೃಷಿಕರೂ ಸ್ವಾಭಿಮಾನದಿಂದ ತಾವೇನೂ ಕಡಿಮೆ ಇಲ್ಲ ಎಂತ ಹೇಳುವ ಮನೋಸ್ಥೈರ್ಯ ಪಡೆಯಬೇಕು.

ಬಡವರಷ್ಟೇ ದೈಹಿಕ ಪರಿಶ್ರಮದಿಂದ ಬದುಕನ್ನು ಸಾಧಿಸಬೇಕೆಂದೇನೂ ಇಲ್ಲ. ಧನವಂತರಲ್ಲೂ ದುಡಿಯುವವರಿದ್ದಾರೆ ವಿದೇಶಗಳಲ್ಲಿ ಕಚೇರಿ ಕೆಲಸವನ್ನು ಮುಗಿಸಿಕೊಂಡು ಬಂದು ಮನೆಯಲ್ಲಿ ಹಾರೆ ಪಿಕ್ಕಾಸು ಬುಟ್ಟಿ ಹಿಡಿದು ಮಣ್ಣಿನ ಕೆಲಸ ಮಾಡುವವರಿದ್ದಾರೆ. ಬಡಗಿಯ ಅಥವಾ ಪ್ಲಂಬರ್ ಕೆಲಸವನ್ನು ಅವರೇ ಮಾಡುತ್ತಾರೆ. ನಮ್ಮ ದೇಶದಲ್ಲೂ ನಮ್ಮ ಮನೆಯ ಕೆಲಸವನ್ನು ನಿಯಮಿತವಾಗಿ ನಾವೇ ಮಾಡುವ ಸಂಸ್ಕೃತಿ ಬರಬೇಕಾದರೆ ದೈಹಿಕ ಶ್ರಮಕ್ಕೆ ಮರ್ಯಾದೆ ಕೊಡಬೇಕು. ಅದು ಶಾಲೆಗಳಲ್ಲೇ ಬೆಳವಣಿಗೆ ಆಗಬೇಕು.

ಸ್ವತಃ ದುಡಿಮೆಗಾರರೇ ತಮ್ಮ ಮಕ್ಕಳು ದೈಹಿಕ ದುಡಿಮೆಯ ವೃತ್ತಿಗೆ ಇಳಿಯಬಾರದೆಂದು ಬಯಸುತ್ತಾರೆ. ವಿದ್ಯೆಯ ಕ್ಷೇತ್ರದಲ್ಲಿ ದೊರಕುವ ಪದವಿಯಿಂದ ಜೀವನ ಸುಂದರವಾಗುತ್ತದೆಂದು ಅವರು ನಂಬಿದ್ದಾರೆ. ಆದರೆ ಅದೇ ಸತ್ಯವಲ್ಲ. ಪ್ರಾಯೋಗಿಕ ಅನುಭವವಿಲ್ಲದ ವಿದ್ಯೆ ವ್ಯಕ್ತಿಯ ಸಾಮರ್ಥ್ಯವನ್ನು ವೃದ್ಧಿಸುವುದಿಲ್ಲ. ಅಂತಹ ಮಕ್ಕಳು ಬದುಕಿನಲ್ಲಿ ಸೋಲುವಾಗ ಅವರಲ್ಲಿ ಸಂಪಾದನೆಗೆ ವಿದ್ಯೆಯೂ ಇರುವುದಿಲ್ಲ, ದುಡಿಯುವ ಚೈತನ್ಯವೂ ಇರುವುದಿಲ್ಲ.

ಬರಹ :
ಚಂದ್ರಶೇಖರ ದಾಮ್ಲೆ

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?
March 14, 2025
6:37 AM
by: ದ ರೂರಲ್ ಮಿರರ್.ಕಾಂ
ಸ್ತ್ರೀಯರ ಸಬಲೀಕರಣದ ಹೊಸ ಸವಾಲುಗಳು
March 13, 2025
10:44 PM
by: ಡಾ.ಚಂದ್ರಶೇಖರ ದಾಮ್ಲೆ
ಏಪ್ರಿಲ್‌ನಲ್ಲಿ ಶನಿ ನಕ್ಷತ್ರ ಪ್ರವೇಶದಿಂದ 5 ರಾಶಿಗಳ ಲೈಫ್ ಚೇಂಜ್ ಆಗುವ ಸಾಧ್ಯತೆ‌ |
March 13, 2025
7:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror