ಸುಮಾರು ಎರಡು ತಿಂಗಳಿನಿಂದ ನಿತ್ಯ ಮುಂಜಾನೆಯ ತೋಟದ ವಾಕಿಂಗ್ ಕೊನೆಯಾಗಿದೆ…. ಎಂತ ಹೇಳುತ್ತಿದ್ದಾಳೆ ಅನ್ನಿಸಿತಾ? ಈ ವರುಷದ ಕಾಡು ಮಾವಿನ ಹಣ್ಣು ಮುಗಿಯಿತು ಎಂಬುದು ವಿಷಯ. ಎರಡು ಮೂರು ಕವರ್ ತಗೊಂಡು ಬೇರೆ ಬೇರೆ ಜಾತಿಯ ಮಾವಿನ ಹಣ್ಣು ಹೆಕ್ಕಲು ಓಡೋಡಿ ಹೋಗುತ್ತಿದ್ದ ಕೆಲಸಕ್ಕೆ ಸದ್ಯ ವಿರಾಮ. ಇನ್ನು ಮುಂದಿನ ವರ್ಷ. ಯಾವ ಮಾವಿನ ಮರ ಫಲ ಬಿಡ ಬಹುದು?
ಉಪ್ಪಿನಕಾಯಿ ಮಿಡಿ ಹಾಕುವ ಮರ ಈ ಬಾರಿ ಹೂ ಬಿಟ್ಟಿತ್ತು ಆದರೆ ಉಳಿಯಲಿಲ್ಲ. ಮುಂದಕ್ಕೆ ಆಗ ಬಹುದೋ ಇಲ್ಲವೋ ಗೊತ್ತಿಲ್ಲ. ಸ್ವಲ್ಪ ಹಾಕಿದ ಉಪ್ಪಿನಕಾಯಿ ಸಾಕಗ ಬಹುದೋ ಗೊತ್ತಿಲ್ಲ. ನೆಕ್ಕರೆ ಮಾವಿನಕಾಯಿಯ ತುಂಡು ಉಪ್ಪಿನಕಾಯಿಯೇ ಗತಿಯಾ ಗೊತ್ತಿಲ್ಲ. ಯಾವುದಕ್ಕೂ ಇರಲಿ ಅಂತ ಸ್ವಲ್ಪ ಬೇಯಿಸಿದ ತುಂಡು ಹಾಕಿ ಇಟ್ಟು ಕೊಂಡರೆ ಧೈರ್ಯ ಅಂತ ಮಾಡಿ ಇಟ್ಟದ್ದೂ ಆಗಿದೆ. ಮನೆ ಎಂದ ಮೇಲೆ ಉಪ್ಪಿನಕಾಯಿ ಇಲ್ಲದಿದ್ದರೆ ಆದೀತೇ? ಬೇರೆ ಏನೂ ಇಲ್ಲದಿದ್ದರೂ ಒಂದು ತುಂಡು ಉಪ್ಪಿನಕಾಯಿ, ನೀರು ಮಜ್ಜಿಗೆ ಇದ್ದರೆ ನಮಗೆ ಮೃಷ್ಟಾನ್ನವೇ.
ನಿತ್ಯ ಕಾರ್ಯಕ್ರಮಕ್ಕೆ ಹೋಗಿ ಗಡದ್ದು ಊಟ ಮಾಡಿ ಬಾಯಿ ಕೆಟ್ಟಾಗ ಲಿಂಬೆಹುಳಿಯ ಚಪ್ಪೆ ಉಪ್ಪಿನಕಾಯಿ ಮಜ್ಜಿಗೆಗೆ ಸರಿಸಾಟಿಯಾದದ್ದು ಬೇರೆ ಯಾವುದೂ ಇಲ್ಲ. ಅದರಲ್ಲೂ ಈ ಉಪ್ಪಿನಕಾಯಿಗೆ ಬೇವಿನ ಸೊಪ್ಪು, ಗಾಂಧಾರಿ ಮೆಣಸು, ಶುಂಠಿಯ ಸಣ್ಣ ತುಂಡು, ಬೆಳ್ಳುಳ್ಳಿಯ ಕೊಚ್ಚಲು ತೆಂಗಿನ ಎಣ್ಣೆಯ ಒಗ್ಗರಣೆಗೆ ಲಿಂಬೆ ಹುಳಿಯ ರಸ ತೆಗೆದ ಸಿಪ್ಪೆಯ ಪುಟ್ಟ ತುಂಡುಗಳನ್ನು ಹಾಕಿ ಮಾಡಿದ ಉಪ್ಪಿನ ಕಾಯಿ ಸೂಪರ್. ಒಮ್ಮೆ ಮಾಡಿ ಹೇಳಿ ಆಯ್ತಾ!