ನಮ್ಮದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ ಎಂಬ ಊರು. ನಮ್ಮೂರಿನಲ್ಲಿ ಈಗ್ಗೆ 1982 ನೇ ಇಸವಿಯಿಂದ ಮೈಸೂರು ಪೇಪರ್ ಮಿಲ್ ಕಾರ್ಯ ನಿರ್ವಹಣೆ ಮಾಡಿ ಕಳೆದ ಕೆಲವು ವರ್ಷಗಳಿಂದ ಎಂಪಿಎಂ ಕಾರ್ಯ ಸ್ಥಗಿತ ಗೊಳಿಸಿದೆ. ನಮ್ಮ ಜಮೀನಿನ ಮೇಲ್ಬಾಗದಲ್ಲಿ ಎಂಪಿಎಂ ಸ್ಥಂಸ್ಥೆಯ ನೆಡುತೋಪು ಸಂಶೋಧನಾ ಕೇಂದ್ರ ವಿದೆ. ಈ ಪೇಪರ್ ಪಲ್ಪ್ ವಡ್ ನಲ್ಲಿ ಮೊಟ್ಟಮೊದಲ ಬಾರಿಗೆ ಬಂದಿದ್ದು ಯುಕಲುಪ್ಟೋಸೋ ಸಿಟ್ರಡೋರ “ನೀಲಗಿರಿ” ನಂತರ ಬಂದದ್ದು “ಗಾಳಿ”. ತದನಂತರ ಎಂಪಿಎಂ ಪ್ಲಾಂಟೇಷನ್ ಆರಂಭವಾದಾಗ ಸಣ್ಣೆಲೆ ಅಕೇಶಿಯ ನೆಟ್ಟರು.
ಮಲೆನಾಡಿನ ಗುಡ್ಡ ದಲ್ಲಿ ಅಕೇಶಿಯ ಮತ್ತು ಗಾಳಿ ನೆಟ್ಟರು. ಈ ನೆಡು ತೋಪಿನ ಗಿಡಗಳಲ್ಲಿ ಮನುಷ್ಯ ಉಪಯೋಗಿ ಎಂದರೆ ಬಿಳಿ ತೊಗಟೆಯ ನೀಲಗಿರಿ ಮಾತ್ರ. ಇದರ ನಾಟ ಅತ್ಯಂತ ಗಟ್ಟಿ ಮತ್ತು ಇದು ವರಲೆ ಬರೋಲ್ಲ. ನೀಲಗಿರಿ ರೀಪರ್ ಅತ್ಯುತ್ತಮ. ನೀಲಗಿರಿ ಪಕಾಸಿ ಸಾಮಿಲ್ ನಲ್ಲಿ ಕೊಯ್ಸಿದ ತಕ್ಷಣ ಬಳಕೆ ಮಾಡಬೇಕು. ಇವು ಹಂಗೆ ತೆಗದಿಟ್ಟರೆ ಹೆಂಗಾತ ಹಂಗೆ ಬೆಂಡಾಗಿ ಬಿಡುತ್ತದೆ. ಸಣ್ಣೆಲೆ ಅಕೇಶಿಯ ಅತ್ಯುತ್ತಮ ನಾಟ ಕ್ಕೆ ಬರುತ್ತದೆ. ಈ ಸಣ್ಣೆಲೆ ಅಕೇಶಿಯ ವನ್ನು ನೀರು ತೇವಾಂಶ ಇಲ್ಲದ ಜಾಗದಲ್ಲಿ ಯಾವುದೇ ಬಗೆಯ ಫರ್ನಿಚರ್ ಮಾಡಿ ಬಳಸಬಹುದು.
ಆದರೆ ಸಣ್ಣೆಲೆ ಅಕೇಶಿಯ ನಮ್ಮ ಮಲೆನಾಡಿನ ಸಾಂಪ್ರದಾಯಿಕ ಹೊನ್ನೆ ನಂದಿ ಮುಂತಾದ ಕಾಡು ಜಾತಿಯ ಮರ ಗಳಂತೆ ಬಹಳ ದಿನಗಳ ಕಾಲ ಅಥವಾ ವರ್ಷಗಳ ಕಾಲ ಬಾಳಿಕೆ ಬರೋಲ್ಲ. ಮೊದಲ ಹದಿನೈದು ವರ್ಷಗಳ ಕಾಲ ಎಂಪಿಎಂ ಈ ಸಣ್ಣೆಲೆ ಅಕೇಶಿಯ ಗಿಡ ನೆಟ್ಟರು. ನಂತರ ಜನ ಈ ಅಕೇಶಿಯ ವನ್ನು ಕದ್ದಯ್ಯೊಲು ಶುರುವಾದ ಮೇಲೆ ಅದನ್ನು ಬಿಟ್ಟು. ” ದಪ್ಪ ಎಲೆ ಅಕೇಶಿಯ ” ನೆಡಲು ಶುರುಮಾಡಿದರು. ಇದು ಕೇವಲ ಪಲ್ಪ್ ಉಪಯೋಗಕ್ಕೆ ಮಾತ್ರ ಬರುವುದು. ನೋಡಲು ಸಣ್ಣೆಲೆ ಅಕೇಶಿಯ ದಂತೆ ಕಂಡು ಬಂದರೂ ಇದರ ಯಾವ ಗುಣವೂ ಸಣ್ಣೆಲೆ ಅಕೇಶಿಯ ದಂತಿಲ್ಲ. ಇದು ಅತ್ಯಂತ ಲಡ್ಡು. ಹೆಣ ಸುಡಲೂ ಬರೋಲ್ಲ.ಇದರ ಜೊತೆಯಲ್ಲಿ “ಮ್ಯಾಂಜಿಯಂ” ಮತ್ತು ಗಾಳಿ ಯ ತಮ್ಮ “ಫೈನಾನ್ಸ್ ” ಗಿಡ ನೆಡತೊಡಗಿದರು. ಮ್ಯಾಂಜಿಯಂ ದರಗನ್ನು ರೈತರು ಬಳಸಿದರು. ಇದರ ದರಗು ಹೊರತು ಇನ್ಯಾವ ಭಾಗವೂ ರೈತರಿಗೆ ಪ್ರಯತ್ನ ವಿಲ್ಲವಾಯಿತು.
ಈ ದೊಡ್ಡ ಎಲೆ ಅಕೇಶಿಯ ಮತ್ತು ಮ್ಯಾಂಜಿಯಂ ಮರವನ್ನು ಟಿಂಬರ್ ವ್ಯಾಪಾರಿಗಳು ಅಗ್ಗದ ದರದಲ್ಲಿ ಕೊಂಡು
ಅದರಿಂದ ಸೋಪಾ ಇತ್ಯಾದಿ ಫರ್ನಿಚರ್ ಮಾಡಿ ಅದಕ್ಕೆ ಬೀಟೆ ಸಾಗುವಾನಿ ಬಣ್ಣ ಹಚ್ಚಿ ಸಣ್ಣೆಲೆ ಅಕೇಶಿಯ ಎಂದು ಮಾರ ತೊಡಗಿದ್ದಾರೆ.
ಈ ಮ್ಯಾಂಜಿಯಂ ಮತ್ತು ದೊಡ್ಡೆಲೆ ಬೀಜ ಗಳು ಗಾಳಿಯಲ್ಲಿ ಹಾರಿ ರೈತರ ಭೂಮಿಯಲ್ಲಿ ಗಿಡವಾಗಿ ಮರವಾಗಿ ಪರ್ನಿಚರ್ ಆಗಿ ಗ್ರಾಹಕರಿಗೆ ಟೋಪಿ ಹಾಕುತ್ತಿದೆ. ಇವೀಗ ಮೊದಲೆಲ್ಲ ನಮ್ಮ ಮಲೆನಾಡಿನಲ್ಲಿ ಗಾಳಿಯಿಂದ ಕಾಡು ಜಾತಿಯ ಮರದ ಬೀಜ ಪ್ರಸರಣವಾಗಿ ಕಾಡಾಗಿ ಪರಿವರ್ತನೆ ಯಾಗುವ ಕಾರ್ಯವನ್ನು ಇದೀಗ ಭೂಮಿಯ ಮಹಾ ಮಾರಿ ಮ್ಯಾಂಜಿಯಂ ಮತ್ತು ದೊಡ್ಡೆಲೆ ಅಕೇಶಿಯ ಗಳು ಆಕ್ರಮಿಸಿ ಕೊಂಡು ಸಹಜ ಅರಣ್ಯ ಬೆಳೆಯದಂತೆ ತಡೆಯಾಗುತ್ತಿದೆ.
ಈ ಫೈನಾನ್ಸ್ ಎಂಬ ಗಾಳಿ ಜಾತಿಯು ಮರದ ಕಡ್ಡಿ ಎಲೆದರಗು ಶುಂಠಿಯ ಏರಿಯ ಮುಚ್ಚಿಗೆ ಆಗಿದ್ದು ಬಿಟ್ಟರೆ ಏನೂ ಪ್ರಯೋಜನ ಇಲ್ಲ. ಇದರ ಕಡ್ಡಿ ಎಲೆ ಮಳೆ ಬಂದಾಗ ಒಂದು ಬಗೆಯ ಸೋಪಿನ ನೊರೆ ಬಂದಂತೆ ಬರುತ್ತದೆ.
ಇದರ ಜೊತೆಯಲ್ಲಿ ಯುಕಲೊಪ್ಟಸ್ ಪೆಲ್ಲಿಟಾ ಎಂಬ ಇನ್ನೊಂದು ಮಹಾ ಮಾರಿ ಯನ್ನು ಎಂಪಿಎಂ ಮಲೆನಾಡಿಗೆ ತಂದಿತು.
ಇದು ಅನ್ನ ಕೊಡುವ ಗದ್ದೆಯನ್ನೂ ತಿನ್ನುತ್ತಿದೆ.
ಈ ಎಲ್ಲಾ ಜಾತಿಯಲ್ಲಿ ಈ ನೀಲಗಿರಿ ಜಾತಿಯ ಪೆಲ್ಲೆಟಾ ಅತ್ಯಂತ ವೇಗವಾಗಿ ಬೆಳೆಯುತ್ತದೆ. ರೈತರು ಜಾನುವಾರು ಗಳಿಗೆ ಒಂದು ಕಾಲದಲ್ಲಿ ಮೇವು ನೀಡುತ್ತಿದ್ದ ಹುಲ್ಲು ಬ್ಯಾಣದಲ್ಲಿ ಈ ಪೆಲ್ಲಿಟಾ ತಂದು ನೆಡತೊಡಗಿದರು. ಇದು ಆರು ವರ್ಷಗಳಿಗೆ ಕಟಾವಿಗೆ ಬರುತ್ತದೆ. ಒಂದು ಸರ್ತಿ ಕಟಾವು ಮಾಡಿದ ಮೇಲೆ ಒಂದು ಕಡಿತಲೆ ಆದ ಬುಡದಲ್ಲಿ ಮತ್ತೆ ಐದಾರು ಬುಡ ಹುಟ್ಟಿಕೊಳ್ತದೆ. ಇದಕ್ಕೆ ಚಿಕ್ಕ ಪ್ರಮಾಣದಲ್ಲಿ ಗೌರ್ಮೆಂಟ್ ಗೊಬ್ಬರ ಹಾಕಿದರೆ ಮತ್ತೆ ನಾಲ್ಕೈದು ವರ್ಷಗಳಿಗೆ ಕಟಾವಿಗೆ ಬರುತ್ತದೆ.
ಇದನ್ನು ಇಪ್ಪತ್ತು ವರ್ಷಗಳ ಕಾಲ ಬಿಟ್ಟರೆ ಇದರಿಂದ ರೀಪು ಪಕಾಸಿ ಮಾಡುವ ನಾಟ ಮಾಡಬಹುದು.
ಆದರೆ ಈ ಪೆಲ್ಲಿಟಾ ನೀಲಗಿರಿ ಯಷ್ಟು ಒಳ್ಳೆಯದಲ್ಲ (ನಾಟದ ವಿಚಾರದಲ್ಲಿ).
ಗಾಳಿ ಮರ ಬೂತ ಪ್ರೇತಗಳು ಕೂರಲು ಅನುಕೂಲ ವಾದ ಮರ. ರೈತರು ಸ್ಮಶಾನದ ಸಮೀಪ ಈ ಗಿಡ ನೆಡಬಹುದು. ಖಂಡಿತವಾಗಿಯೂ ಮಲೆನಾಡು ಕರಾವಳಿ ಗೆ “ಗಾಳಿ” ಸೂಕ್ತ ಪ್ಲಾಂಟೇಷನ್ ತಳಿ ಅಲ್ಲ. ಇದಕ್ಕೆ ಎಂಪಿಎಂ ನವರು ಗಾಳಿ ಪ್ಲಾಂಟೇಷನ್ ಮಾಡದೇ ಇರುವುದೇ ಸಾಕ್ಷಿ. ಗಾಳಿಮರ ಹಸಿ ಇದ್ದಾಗ ಮತ್ತು ಒಣಗಿದಾಗ ತುಂಬಾ ಗಟ್ಟಿ. ಆದರೆ ಕಡಿದು ಒಣಗಿದ ಮೇಲೆ ಈ ಗಾಳಿ ಮರ ಒಡೆದು ಬಿರುಕು ಬಿಡುತ್ತದೆ. ಈ ಬಿರುಕಿನಲ್ಲಿ ಕೋಲು ವರ್ಲೆ ಬಂದು ಸೇರು ಮರವನ್ನು ಸಂಪೂರ್ಣ ತಿಂದು ಹಾಕುತ್ತದೆ. ನಮ್ಮ ಮಲೆನಾಡು ಕರಾವಳಿಯಲ್ಲಿ ಗಾಳಿ ಅಡ್ಡ ಟಿಸಿಲೊಡೆಯುವುದರಿಂದ ಇವು ನೇರವಾಗಿ ಎತ್ತರ ಬೆಳೆಯೋಲ್ಲ.
ಯಾವುದೇ ರೀತಿಯಲ್ಲೂ ಯಾವುದೇ ಕಾರಣಕ್ಕೂ ರೈತರು ಪರಿಸರಕ್ಕೆ ಅತ್ಯಂತ ಹಾನಿಕಾರಕವಾದ ಈ ವಿದೇಶಿ ಸಸ್ಯ ಗಳನ್ನು ನೆಡಬೇಡಿ.
ಈ ಎಲ್ಲಾ ವಿದೇಶಿ ತಳಗಳನ್ನ ನಮ್ಮೂರ ಎಂಪಿಎಂ ಪ್ಲಾಂಟೇಷನ್ ನಲ್ಲಿ ಈಗಲೂ ನೋಡಬಹುದು. ಇವು ಪರಿಸರಕ್ಕೆ ಅತ್ಯಂತ ಹಾನಿಕಾರಕವಂತೂ ನೂರಕ್ಕೆ ನೂರರಷ್ಟು ಸತ್ಯ. ಭೂಮಿಯ ಪೋಷಕಾಂಶ ನಾಶ ಮಾಡುತ್ತದೆ ಮತ್ತು ಅಂತರ್ಜಲ ಕುಸಿ ಯಲು ಕಾರಣವಾಗುತ್ತದೆ.
ಮಲೆನಾಡಿನ ರೈತ ಬಾಂಧವರೇ ಈ ಪ್ಲಾಂಟೇಷನ್ ನಲ್ಲಿ ಇತ್ತೀಚೆಗೆ ಹೆಬ್ಬೇವು ಬೆಳೆ ಕೂಡ ಬೆಳೆಯಿರಿ ಎಂದು ನರ್ಸರಿ ಯವರು ಪ್ರಚೋದನೆ ಮಾಡುತ್ತಿದ್ದಾರೆ. ಆದರೆ ಈ ಹೆಬ್ಬೇವು ಕೂಡ ಮಲೆನಾಡಿನಲ್ಲಿ ಅತ್ಯಂತ ವಿಫಲವಾದ ಸಸ್ಯ. ಈ ಹೆಬ್ಬೇವಿನ ಸಸಿಗೆ ಬುಡದಲ್ಲಿ ಕಾಂಡಕೊರಕ ಕೀಟ ಬಾಧಿಸುತ್ತದೆ. ಮತ್ತು ಬಯಲು ಸೀಮೆಯಲ್ಲಿ ಬಂದಂತೆ ನಮ್ಮ ಮಲೆನಾಡಿನಲ್ಲಿ ವೇಗವಾಗಿ ಎತ್ತರವಾಗಿ ದಪ್ಪನಾಗಿ ಬೆಳೆಯೋಲ್ಲ.
ಹೀಗೆ ಶ್ರೀಗಂಧ ಕೂಡ … ಶ್ರೀಗಂಧ ಕ್ಕೆ ಮಲೆನಾಡಿನ ತೀರ್ಥಹಳ್ಳಿಸಾಗರ ಶೃಂಗೇರಿ ಹೊಸನಗರ ಇತರ ತಾಲ್ಲೂಕುಗಳು ಹೇಳಿ ಮಾಡಿಸಿದ ಭೂಮಿ. ಆದರೆ ಶ್ರೀಗಂಧ ಬೆಳೆದು ಕಟಾವಿಗೆ ಬರಲು ಕೆಂಚು ತಿರಳು ಬರಲು ಕನಿಷ್ಠ ನಲವತ್ತು ವರ್ಷ ಕಾಯಬೇಕು.
ಸಾಗವಾನಿ ಕೂಡ .. ಇದಕ್ಕೆ ವರ್ಷ ಗಟ್ಟಲೆ ಬೆಳವಣಿಗೆಗೆ ಕಾಲ ಬೇಕು. ರೈತರು ಇಂತಹ ಪ್ಲಾಂಟೇಷನ್ ಬೆಳೆಯನ್ನು ನರ್ಸರಿ ಯವರ ಪ್ರಚೋದನೆ ಗೊಳಗಾಗಿ ಹೆಚ್ಚು ಬಂಡವಾಳ ಹೂಡಿ ಬೆಳೆಯಬೇಡಿ. ಮತ್ತು ಪ್ಲಾಂಟೇಷನ್ ಪಲ್ಪ್ ವುಡ್ ನಲ್ಲಿ ಸದ್ಯ ನೀಲಗಿರಿ ಪೆಲ್ಲಿಟಾ ಕ್ಕೆಮಾತ್ರ ಉತ್ತಮ ಬೆಲೆ ಇದೆ.ಈ ‘”ಗಾಳಿ “, ದೊಡ್ಡೆಲೆ ಅಕೇಶಿಯ ” ಇದೆ ಎಂದರೆ ಟಿಂಬರ್ ವ್ಯಾಪಾರಿಗಳು ಹೆಚ್ಚು ಆಸಕ್ತಿ ತೋರುವು ದಿಲ್ಲ.
ರೈತರು ಇಂತಹ ಪ್ಲಾಂಟೇಷನ್ ಬೆಳೆ ಬೆಳೆಯುವಾಗ ನರ್ಸರಿ ಯವರ ಮಾತಿಗೆ ಮರುಳಾಗದೇ ಬೆಳೆದು ಸಾಧಿಸಿದ ರೈತರ ಮಾರ್ಗದರ್ಶನ ತೆಗೆದುಕೊಂಡು ಮುಂದುವರೆಯುವುದು ಒಳಿತು.