ಭಾರತೀಯ ಕೃಷಿ ವಲಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಲು ಸರ್ಕಾರ ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಮಿಷನ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಹವಾಮಾನ ಬದಲಾವಣೆಯೂ ಬೆಳೆಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಕಡಿಮೆ ಮಾಡಲು ರೈತರಿಗೆ ನಿಖರ ಹವಾಮಾನ ಮುನ್ಸೂಚನೆ ಮಾಹಿತಿ ನೀಡುವುದು, ಹೆಚ್ಚುವರಿ ಇಳುವರಿ ನೀಡುವ ವಿವಿಧ ಬಿತ್ತನೆ ಬೀಜಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರಿಕೆ ಹೊರತಾಗಿಯೂ ಕೇಂದ್ರ ಸರ್ಕಾರ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಸಬ್ಸಿಡಿ ರಸಗೊಬ್ಬರಗಳನ್ನು ಒದಗಿಸುತ್ತಿದೆ . ಕೃಷಿ ಉತ್ಪಾದನೆಗೆ ರಸಗೊಬ್ಬರ ಅತ್ಯಗತ್ಯ ಅಂಶವಾಗಿದೆ. ರಸಗೊಬ್ಬರದ ಬೆಲೆ ಪರಿಶೀಲಿಸಲು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರತಿ ಚೀಲ ಯೂರಿಯಾಗೆ 266 ರೂಪಾಯಿಗಳಿಗೆ ರೈತರಿಗೆ ಒದಗಿಸಲಾಗುತ್ತಿದೆ ಎಂದು ಹೇಳಿದರು. ರೈತರ ಕಲ್ಯಾಣವು ಕೇಂದ್ರ ಸರ್ಕಾರದ ಪರಮ ಆದ್ಯತೆಯಾಗಿದ್ದು, ಈ ವರ್ಷದ ಬಜೆಟ್ ನಲ್ಲಿ ಕೃಷಿ ವಲಯಕ್ಕೆ ದಾಖಲೆಯ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.