ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ರೈತರು ಯೋಜನೆಯ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಈಗಾಗಲೇ ಜಿಲ್ಲೆಯ ನೋಂದಾಯಿತ 248694 ಅರ್ಹ ರೈತರ ಪೈಕಿ 228933 ರೈತರು ಇ-ಕೆವೈಸಿ ಮಾಡಿಸಿಕೊಂಡಿದ್ದು, ಉಳಿದ 19761 ರೈತರು ಕೂಡಲೇ ಇ-ಕೆವೈಸಿ ಮಾಡಿಕೊಳ್ಳುವಂತೆ ವಿಜಯಪುರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.
ಇ-ಕೆವೈಸಿ ಮಾಡಿಕೊಳ್ಳದ ನೋಂದಾಯಿತ ರೈತರಿಗೆ ಮುಂದಿನ ಕಂತಿನ ಹಣ ಬಿಡುಗಡೆಯಾಗುವುದಿಲ್ಲ. ಇಕೆವೈಸಿ ಬಾಕಿ ಇರುವ ನೋಂದಾಯಿತ ರೈತರು ತಮ್ಮ ಗ್ರಾಮಕ್ಕೆ ಈಗಾಗಲೇ ನೇಮಿಸಲಾದ ಗ್ರಾಮ ಮಟ್ಟದ ನೋಡಲ್ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಇ-ಕೆವೈಸಿ ಮಾಡಿಕೊಳ್ಳಬೇಕು. ಒಂದೇ ಕುಟುಂಬ ಸದಸ್ಯರೇ ಎಂಬುವುದನ್ನು ಪರಿಶೀಲಿಸಿ ಅರ್ಹ – ಅನರ್ಹರೆಂದು ಘೋಷಿಸಬೇಕಾಗಿರುವ 31148 ಪ್ರಕರಣಗಳು ಬಾಕಿ ಇದ್ದು, ಈ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಇಬ್ಬರು ಸದಸ್ಯರು ಖುದ್ದಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಘೋಷಣೆಯನ್ನು ಸಲ್ಲಿಸಬೇಕು. ಘೋಷಣೆ ಸಲ್ಲಿಸದೇ ಇದ್ದಲ್ಲಿ ಅಂತಹ ಪ್ರಕರಣಗಳಿಗೆ ಮುಂದಿನ ಕಂತಿನ ಆರ್ಥಿಕ ನೆರವು ಸ್ಥಗಿತಗೊಳ್ಳುತ್ತದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.