ಭಾರತದ ಕೃಷಿ ಕ್ಷೇತ್ರದ ಅಭಿವೃದ್ಧಿ, ಬೆಳೆ ವೈವಿಧ್ಯತೆ ಮತ್ತು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕೃಷಿಯನ್ನು ಆಧುನೀಕರಣಗೊಳಿಸಿ ರೈತರನ್ನು ಸಬಲಗೊಳಿಸದೆ ವಿಕಸಿತ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿಯಲ್ಲಿ ಗುರುವಾರ ನಡೆದ ‘ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ 2026’ರಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಬೆಳವಣಿಗೆ, ರೈತರ ಆದಾಯ ಹೆಚ್ಚಳ, ಬೆಳೆ ಪದ್ಧತಿಗಳ ಬದಲಾವಣೆ, ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದರು. ದೇಶದ ವಿವಿಧ ಭಾಗಗಳ ಕೃಷಿ ವಿಜ್ಞಾನಿಗಳು, ಕೃಷಿ ಉದ್ಯಮಿಗಳು ಹಾಗೂ ರೈತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಕೃಷಿ ಕ್ಷೇತ್ರದಲ್ಲಿ ಶೇ.4ಕ್ಕೂ ಅಧಿಕ ಬೆಳವಣಿಗೆ : ಕಳೆದ ಒಂದು ದಶಕದಲ್ಲಿ ಭಾರತದ ಕೃಷಿ ಕ್ಷೇತ್ರವು ವಾರ್ಷಿಕ ಸರಾಸರಿ ಶೇ.4ಕ್ಕೂ ಅಧಿಕ ಬೆಳವಣಿಗೆ ದಾಖಲಿಸಿದೆ. ಸ್ವಾತಂತ್ರ್ಯಾನಂತರದ ಒಂದು ದಶಕದಲ್ಲಿ ಈ ಮಟ್ಟದ ಬೆಳವಣಿಗೆ ದಾಖಲಾಗಿರುವುದು ಇದೇ ಮೊದಲ ಬಾರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕಳೆದ 12ರಿಂದ 13 ವರ್ಷಗಳಲ್ಲಿ ಸುಮಾರು 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂಬ ವಿಶ್ವಬ್ಯಾಂಕ್ ಅಧ್ಯಯನವನ್ನು ಉಲ್ಲೇಖಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರ ನಡುವೆ ಬಡತನ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಬೆಳೆ ವೈವಿಧ್ಯತೆಗೆ ಹೆಚ್ಚಿನ ಒತ್ತು : ಗೋಧಿ, ಭತ್ತ ಮತ್ತು ಕಬ್ಬಿನಂತಹ ಸಾಂಪ್ರದಾಯಿಕ ಬೆಳೆಗಳನ್ನೇ ಅವಲಂಬಿಸುವ ಬದಲು ರೈತರು ಬೆಳೆ ವೈವಿಧ್ಯತೆಗೆ ಆದ್ಯತೆ ನೀಡಬೇಕು. ಜಾಗತಿಕ ಮಾರುಕಟ್ಟೆ, ಗ್ರಾಹಕರ ಆಹಾರ ಪದ್ಧತಿ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಅನುಗುಣವಾಗಿ ಕೃಷಿ ಪದ್ಧತಿಗಳಲ್ಲೂ ಬದಲಾವಣೆ ಅಗತ್ಯ ಎಂದು ಅವರು ಹೇಳಿದ್ದಾರೆ.
ಭಾರತದ ವಾರ್ಷಿಕ ಕೃಷಿ ಉತ್ಪನ್ನಗಳ ರಫ್ತು ಮೌಲ್ಯ ₹4 ಲಕ್ಷ ಕೋಟಿ ದಾಟಿದೆ. ಹಾಲು, ಬೇಳೆಕಾಳುಗಳು, ಸೆಣಬು, ಅಕ್ಕಿ ಮತ್ತು ಸಿರಿಧಾನ್ಯ ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ. ಗೋಧಿ, ಹತ್ತಿ, ಹಣ್ಣು, ತರಕಾರಿ ಮತ್ತು ಮೀನು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಪ್ರಧಾನಿ ವಿವರಿಸಿದ್ದಾರೆ.
ಹಾಲು, ಮೀನು, ಜೇನು ಉತ್ಪಾದನೆಯಲ್ಲಿ ಏರಿಕೆ : ಕಳೆದ ಒಂದು ದಶಕದಲ್ಲಿ ಕೃಷಿಯ ಪೂರಕ ಕ್ಷೇತ್ರಗಳಲ್ಲಿಯೂ ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಹಾಲಿನ ಉತ್ಪಾದನೆಯಲ್ಲಿ ಸುಮಾರು ಶೇ.70ರಷ್ಟು ಏರಿಕೆಯಾಗಿದೆ, ಮೊಟ್ಟೆ ಉತ್ಪಾದನೆಯಲ್ಲಿ ಸುಮಾರು ಶೇ.90ರಷ್ಟು ಹೆಚ್ಚಳವಾಗಿದೆ, ನೀಲಿ ಕ್ರಾಂತಿಯಡಿ ಮೀನು ಉತ್ಪಾದನೆ ಎರಡು ಪಟ್ಟು ಹೆಚ್ಚಾಗಿದೆ, ಜೇನು ಉತ್ಪಾದನೆ 80 ಸಾವಿರ ಟನ್ನಿಂದ 1.5 ಲಕ್ಷ ಟನ್ಗೆ ಏರಿಕೆಯಾಗಿದೆ, ತೋಟಗಾರಿಕಾ ಉತ್ಪಾದನೆ 280 ಮಿಲಿಯನ್ ಟನ್ನಿಂದ 350 ಮಿಲಿಯನ್ ಟನ್ಗಿಂತ ಹೆಚ್ಚಾಗಿದೆ.
ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲಿ ಕ್ರಾಂತಿ ಮತ್ತು ಸಿಹಿ ಕ್ರಾಂತಿಯ ಸಾಧನೆಗಳನ್ನು ಸಮಗ್ರ ಕೃಷಿ ಅಭಿವೃದ್ಧಿಯೊಂದಿಗೆ ಜೋಡಿಸುವುದರಿಂದ ರೈತರಿಗೆ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದ್ದಾರೆ.
ಸೌರಶಕ್ತಿಯಿಂದ ರೈತರಿಗೆ ಹೆಚ್ಚುವರಿ ಆದಾಯ : ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ (ಪಿಎಂ-ಕುಸುಮ್) ಯೋಜನೆಯಡಿ ಸುಮಾರು 12 ಲಕ್ಷ ಸೌರ ಪಂಪ್ಗಳನ್ನು ರೈತರಿಗೆ ಒದಗಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಇದರಿಂದ ರೈತರ ವಿದ್ಯುತ್ ವೆಚ್ಚ ಕಡಿಮೆಯಾಗುವುದರ ಜತೆಗೆ, ಕೃಷಿ ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಹೆಚ್ಚುವರಿ ಆದಾಯ ಗಳಿಸುವ ಅವಕಾಶವೂ ದೊರೆಯುತ್ತಿದೆ. ಕೃಷಿ ಉತ್ಪಾದನೆಯ ಜತೆಗೆ ಉತ್ಪಾದಕತೆ ಮತ್ತು ರೈತರ ಲಾಭಕ್ಕೂ ಆದ್ಯತೆ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.
ಪ್ರಯೋಗಾಲಯದ ಸಂಶೋಧನೆ ರೈತರ ಹೊಲಕ್ಕೆ ತಲುಪಬೇಕು : ಕೃಷಿ ಸಂಶೋಧನೆ ಮತ್ತು ರೈತರ ನಡುವಿನ ಅಂತರ ಕಡಿಮೆಯಾಗಬೇಕು. ವಿಜ್ಞಾನಿಗಳ ಪ್ರಯೋಗಾಲಯದಲ್ಲಿರುವ ಜ್ಞಾನ ನೇರವಾಗಿ ರೈತರ ಹೊಲಗಳಿಗೆ ತಲುಪಬೇಕು ಎಂಬ ‘ಲ್ಯಾಬ್ ಟು ಲ್ಯಾಂಡ್’ ಪರಿಕಲ್ಪನೆಯನ್ನು ಪ್ರಧಾನಿ ಒತ್ತಿಹೇಳಿದ್ದಾರೆ. 2014ರಲ್ಲಿ ದೇಶದಲ್ಲಿದ್ದ ಕೆಲವೇ ನೂರು ಮಣ್ಣಿನ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ ಈಗ 8,400ಕ್ಕೂ ಅಧಿಕವಾಗಿದೆ. ದೇಶದಲ್ಲಿ 725ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳಿವೆ ಎಂದು ಅವರು ತಿಳಿಸಿದ್ದಾರೆ.
ಡ್ರೋನ್, ಕೃತಕ ಬುದ್ಧಿಮತ್ತೆ ಬಳಕೆಗೆ ಉತ್ತೇಜನ : ನಮೋ ಡ್ರೋನ್ ದೀದಿ ಯೋಜನೆಯಡಿ ಗ್ರಾಮೀಣ ಮಹಿಳೆಯರು ಡ್ರೋನ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುತ್ತಿರುವುದು ಕೃಷಿಯಲ್ಲಿ ಹೊಸ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ರಸಗೊಬ್ಬರ ಮತ್ತು ಕೀಟನಾಶಕ ಸಿಂಪಡಣೆಗೆ ಮಾತ್ರವಲ್ಲದೆ, ಬಿತ್ತನೆ, ಕೊಯ್ಲು ಮತ್ತು ಇತರ ಕೃಷಿ ಚಟುವಟಿಕೆಗಳಲ್ಲಿಯೂ ಆಧುನಿಕ ಯಂತ್ರೋಪಕರಣಗಳ ಬಳಕೆ ಹೆಚ್ಚಬೇಕು. ಸಂವೇದಕ ಆಧಾರಿತ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆಯಿಂದ ರೈತರಿಗೆ ನಿಖರವಾದ ಕೃಷಿ ಮಾಹಿತಿ ಒದಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಆಹಾರ ಸಂಸ್ಕರಣೆ ಮತ್ತು ರಫ್ತು ಮಾರುಕಟ್ಟೆಯ ಸಂಪರ್ಕ ಕಲ್ಪಿಸುವ ಮೂಲಕ ರೈತರನ್ನು ಕೃಷಿ ಉದ್ಯಮಿಗಳನ್ನಾಗಿ ರೂಪಿಸಬೇಕು. ದೇಶದಲ್ಲಿ ಸ್ಥಾಪಿಸಲಾಗಿರುವ 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳು (FPO) ಸಣ್ಣ ರೈತರನ್ನು ಒಗ್ಗೂಡಿಸಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ನೆರವಾಗುತ್ತಿವೆ ಎಂದು ತಿಳಿಸಿದ್ದಾರೆ.
ರಸಗೊಬ್ಬರದ ಬೆಲೆ ನಿಯಂತ್ರಣಕ್ಕೆ ₹16 ಲಕ್ಷ ಕೋಟಿ ವೆಚ್ಚ : ಕಳೆದ 12 ವರ್ಷಗಳಲ್ಲಿ ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರ ಒದಗಿಸಲು ಕೇಂದ್ರ ಸರ್ಕಾರ ₹16 ಲಕ್ಷ ಕೋಟಿ ವೆಚ್ಚ ಮಾಡಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹5,000 ಬೆಲೆ ಇರುವ ಡಿಎಪಿ ರಸಗೊಬ್ಬರ ಚೀಲವನ್ನು ದೇಶದ ರೈತರಿಗೆ ₹1,300ಕ್ಕೆ ಹಾಗೂ ಸುಮಾರು ₹3,000 ಬೆಲೆಯ ಯೂರಿಯಾ ಚೀಲವನ್ನು ₹300ಕ್ಕಿಂತ ಕಡಿಮೆ ದರದಲ್ಲಿ ಒದಗಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಡೀಸೆಲ್ ದರವನ್ನು ಲೀಟರ್ಗೆ ₹50ರಷ್ಟು ಹೆಚ್ಚಿಸುವ ಒತ್ತಡವಿದ್ದರೂ, ಸರ್ಕಾರ ₹7ರಷ್ಟು ಮಾತ್ರ ಹೆಚ್ಚಿಸಿ ಉಳಿದ ₹43ರ ಹೊರೆ ತಾನೇ ಭರಿಸಿದೆ. ಇದಕ್ಕಾಗಿ ಪ್ರತಿ ತಿಂಗಳು ₹14,000 ಕೋಟಿ ಹೆಚ್ಚುವರಿ ವೆಚ್ಚ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವುದು, ರೈತರ ಆದಾಯ ಹೆಚ್ಚಿಸುವುದು ಮತ್ತು ಆಧುನಿಕ ತಂತ್ರಜ್ಞಾನವನ್ನು ಕೃಷಿಯೊಂದಿಗೆ ಬೆಸೆಯುವುದು ಭವಿಷ್ಯದ ಪ್ರಮುಖ ಆದ್ಯತೆಗಳಾಗಬೇಕು. ಸಮೃದ್ಧ ರೈತರು, ಅಭಿವೃದ್ಧಿ ಹೊಂದಿದ ಗ್ರಾಮಗಳು ಮತ್ತು ಲಾಭದಾಯಕ ಕೃಷಿಯ ಮೂಲಕ ವಿಕಸಿತ ಭಾರತದ ಗುರಿ ಸಾಧಿಸಬಹುದು ಎಂದು ಅವರು ತಿಳಿಸಿದ್ದಾರೆ.
Prime Minister Narendra Modi has called for agricultural modernisation, crop diversification and wider adoption of technology to improve farmers’ incomes and achieve the vision of Viksit Bharat. Addressing the Kisan Tak Bharat Agriculture Conference 2026 in New Delhi, he highlighted India’s agricultural growth of over 4 per cent annually during the past decade, agricultural exports exceeding ₹4 lakh crore and rising production in dairy, fisheries, honey and horticulture. He also stressed the importance of solar-powered farming, drones, artificial intelligence, soil testing, FPOs, value addition and stronger market access to make agriculture more profitable and sustainable.


