ಕರ್ನಾಟಕ ಚುನಾವಣೆಗೆ ದಿನಾಂಕ ಘೋಷಣೆ ಬಳಿಕ ರಾಜಕೀಯ ಪಕ್ಷಗಳು ಚುನಾವಣೆ ರ್‍ಯಾಲಿಗಳನ್ನು ನಡೆಸಿ ಮತದಾರರನ್ನು ಸೆಳೆಯಲು ಮುಂದಾಗುತ್ತಿವೆ. ಇದೇ ವೇಳೆ ಬಿಜೆಪಿ ಸಹ ತಮ್ಮ ಪಕ್ಷದ ಸ್ಟಾರ್ ಐಕಾನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿದೆ.
ಮೇ10ರಂದು ನಡೆಯಲಿರುವ ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ ಕರ್ನಾಟಕದಲ್ಲಿ 15-20 ರ್‍ಯಾಲಿಗಳಲ್ಲಿ ಭಾಗಿಯಾಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿರುವ ಬಿಜೆಪಿಯು ‘ಡಬಲ್ ಇಂಜಿನ್ ಸರ್ಕಾರದ’ ಅಡಿಯಲ್ಲಿ ಮಾಡಲಾಗಿರುವ ಅಭಿವೃದ್ಧಿ ಕೆಲಸಗಳ ಮುಖೇನ ಮತದಾರರ ಮುಂದೆ ಬರಲಿದೆ.
ಪ್ರಧಾನಿ ಮೋದಿ ಈ ವಾರಾಂತ್ಯದಲ್ಲಿ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಇನ್ನು ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಬಳಿಕ ಪ್ರಧಾನಿ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿದ್ದು ಇದು ಮೊದಲ ಭೇಟಿಯಾಗಿದ್ದು ಈ ವರ್ಷದಲ್ಲಿ ಇದು ರಾಜ್ಯಕ್ಕೆ ಎಂಟನೇ ಭೇಟಿಯಾಗಲಿದೆ.
ರಾಜ್ಯದಲ್ಲಿ ಪಕ್ಷಕ್ಕೆ ಪ್ರಬಲವಾದ ಸಂಘಟನಾ ನೆಲೆ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಬದ್ಧತೆಯೇ ನಮಗೆ ಎದ್ದುಕಾಣುವ ದೊಡ್ಡ ಅಂಶವಾಗಿದ್ದು ಇದು ರಾಜ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿಯೊಂದಿಗೆ ಜೊತೆಯಲ್ಲಿ ಸಾಗುವಂತೆ ಮಾಡಿದೆ ಎಂದು ಕರ್ನಾಟಕ ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ.
ರಾಜ್ಯ ಚುನಾವಣೆಗೆ ಮುನ್ನ ಬಿಜೆಪಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದೆ. ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಸಹ ಪ್ರಭಾರಿಗಳಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಕ್ಷದ ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಇದೆ. ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು ಮತ ಎಣಿಕೆ ಮೇ 13ರಂದು ನಡೆಯಲಿದೆ.