ಯುದ್ಧ ಪೀಡಿತ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರೊಂದಿಗೆ ಹಾಗೂ ರಷ್ಯಾ ಅಧ್ಯಕ್ಷ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಾತುಕತೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಯುದ್ಧ ಆರಂಭವಾದ ಬಳಿಕ ಇಂದು ಎರಡನೇ ಬಾರಿಗೆ ಉಕ್ರೇನ್ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಪ್ರಧಾನಿ ಮಾತನಾಡಲಿದ್ದಾರೆ.
ರಷ್ಯಾ ಯುದ್ಧ ಸಾರಿರುವುದರಿಂದ ಉಕ್ರೇನ್ ನಲುಗಿದೆ. ಇದರಿಂದ ಉಕ್ರೇನ್ನಲ್ಲಿ ಭಾರತೀಯರು ಸಿಲುಕಿದ್ದು, ಈಗಾಗಲೇ ಬಹುಪಾಲು ವಿದ್ಯಾರ್ಥಿಗಳನ್ನು ಭಾರತಕ್ಕೆ ಸ್ಥಳಾಂತರ ಮಾಡಲಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಉಕ್ರೇನ್ ಮೇಲೆ ಫೆ.24ರಿಂದ ರಷ್ಯಾ ದಾಳಿ ನಡೆಸುತ್ತಿದೆ. ಫೆ.26ರಂದು ಪ್ರಧಾನಿ ಮೋದಿ ಮತ್ತು ಝೆಲೆನ್ಸ್ಕಿ ನಡುವೆ ಚರ್ಚೆ ನಡೆದಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ನಿರ್ಣಯಕ್ಕೆ ಮತಹಾಕಲು ಭಾರತ ಒಪ್ಪಿರಲಿಲ್ಲ. ಅಂದರೆ ಪರ ಅಥವಾ ವಿರೋಧವಾಗಿ ಮತದಾನ ಮಾಡದೆ ತಟಸ್ಥ ನೀತಿ ಕಾಯ್ದುಕೊಂಡಿತ್ತು. ಇದಾದ ಬಳಿಕ ಝೆಲೆನ್ಸ್ಕಿಯವರು ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಉಕ್ರೇನ್ಗೇ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು. ಇದೀಗ ಮತ್ತೆ ರಷ್ಯಾ ಹಾಗೂ ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ.