ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಏಪ್ರಿಲ್ 9ರಂದು ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಭದ್ರತೆ ದೃಷ್ಟಿಯಿಂದ ನಾಳೆಯಿಂದಲೇ ಬಂಡೀಪುರದಲ್ಲಿ ಸಫಾರಿ, ಹೋಂ ಸ್ಟೇ ಹಾಗೂ ರೆಸಾರ್ಟ್ ಗಳನ್ನು ಬಂದ್ ಮಾಡಲಾಗುತ್ತಿದೆ.
ಪ್ರಧಾನಿ ಮೋದಿ ಅವರು ಏಪ್ರಿಲ್ 9ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ನಡೆಸಲಿದ್ದಾರೆ. ಹೀಗಾಗಿ ಗುರುವಾರದಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಬಂಡೀಪುರ ವ್ಯಾಪ್ತಿಯ ಎಲ್ಲ ಹೋಂ ಸ್ಟೇಗಳು, ರೆಸಾರ್ಟ್ ಗಳನ್ನು ಬಂದ್ ಮಾಡಲಾಗುತ್ತಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿದ ಚಾಮರಾಜನಗರ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು, ರಸ್ತೆ ನಿರ್ವಹಣೆ, ಪೂರ್ವ ಸಿದ್ದತೆ, ಹಾಗೂ ಭದ್ರತೆ ದೃಷ್ಟಿಯಿಂದ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಬಂಡೀಪುರವನ್ನು ತಲುಪುವ ಮಾರ್ಗದ ದುರಸ್ತಿ ಕಾರ್ಯ ನಡೆದಿದೆ. ಅಲ್ಲದೆ ಮೇಲುಕಮನಹಳ್ಳಿಯಲ್ಲಿಯೂ(ಸಫಾರಿ ಪಾಯಿಂಟ್) ರಸ್ತೆಗಳನ್ನು ದುರಸ್ತಿ ಮಾಡಿಸಿ, ಸಫಾರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯು ನಿರತರಾಗಿದ್ದಾರೆ.