ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರಿಕೆಗೊಳ್ತಿದೆ. ಈ ಬಿಸಿ ಗಾಳಿಯನ್ನು ಎದುರಿಸಲು ಮಾಡಿಕೊಳ್ಳಲಾಗಿರುವ ಸಿದ್ಧತೆ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿದರು. ಸಭೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಪ್ರಧಾನಿಯವರಿಗೆ ಮುಂದಿನ ಕೆಲವು ತಿಂಗಳುಗಳ ಹವಾಮಾನ ಮುನ್ಸೂಚನೆಯ ವಿವರ ನೀಡಿದರು.
ಮುಂದಿನ ಋತುವಿನಲ್ಲಿ ಸಹಜ ಮುಂಗಾರು ಇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿಸಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ನಾಗರಿಕರು, ವೈದ್ಯಕೀಯ ವೃತ್ತಿಪರರು, ಪುರಸಭೆ ಮತ್ತು ಪಂಚಾಯತ್ ಅಧಿಕಾರಿಗಳು, ಅಗ್ನಿಶಾಮಕ ದಳದಂತಹ ವಿಪತ್ತು ಸ್ಪಂದನಾ ತಂಡಗಳೂ ಸೇರಿದಂತೆ ಎಲ್ಲರಿಗೂ ಪ್ರತ್ಯೇಕ ಜಾಗೃತಿ ಸಂದೇಶವನ್ನು ಕಳುಹಿಸಬೇಕು ಎಂದು ಪ್ರಧಾನಮಂತ್ರಿ ಸಭೆಯಲ್ಲಿ ಸಲಹೆ ನೀಡಿದರು.
ವಿಪರೀತ ಬಿಸಿಗಾಳಿಯಂಥ ಸಂದರ್ಭಗಳನ್ನು ಎದುರಿಸುವು ನಿಟ್ಟಿನಲ್ಲಿ ಮಕ್ಕಳನ್ನು ಜಾಗೃತಗೊಳಿಸಲು ಶಾಲೆಗಳಲ್ಲಿ ಕೆಲವು ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲು ಸಲಹೆ ನೀಡಲಾಯಿತು.
ಬೇಸಿಗೆಯ ಧಗೆ ಎದುರಿಸಲು ಏನೆಲ್ಲ ಮಾಡಬಹುದು? ಏನೆಲ್ಲ ಮಾಡಬಾರದು ಎಂಬ ಮಾರ್ಗಸೂಚಿಯನ್ನು ಸರಳವಾಗಿ ಅರ್ಥವಾಗುವ ಮಾದರಿಗಳಲ್ಲಿ ಸಿದ್ಧಪಡಿಸಬೇಕು. ಪ್ಯಾಂಪ್ಲೆಟ್ಗಳು, ಚಿತ್ರಗಳು, ಸಿನಿಮಾಗಳು ಇತ್ಯಾದಿಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ಪ್ರಧಾನಿ ಸಲಹೆ ನೀಡಿದರು.
ರಾಬಿ ಬೆಳೆಗಳ ಮೇಲೆ ಹವಾಮಾನದ ಪ್ರಭಾವ ಮತ್ತು ಪ್ರಮುಖ ಬೆಳೆಗಳ ನಿರೀಕ್ಷಿತ ಇಳುವರಿ ಬಗ್ಗೆಯೂ ಪ್ರಧಾನಿಗೆ ಮಾಹಿತಿ ನೀಡಲಾಯಿತು. ನೀರಾವರಿ, ನೀರು ಪೂರೈಕೆ, ಮೇವು ಮತ್ತು ಕುಡಿಯುವ ನೀರಿನ ಮೇಲ್ವಿಚಾರಣೆಗಾಗಿ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ಚರ್ಚಿಸಲಾಯಿತು. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ರಾಜ್ಯಗಳು ಮಾಡಿಕೊಂಡಿರುವ ಸನ್ನದ್ಧತೆ, ಆಸ್ಪತ್ರೆ ಮೂಲಸೌಕರ್ಯಗಳ ಬಗ್ಗೆಯೂ ಪ್ರಧಾನಿಯವರಿಗೆ ವಿವರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಪ್ರತಿ ದಿನ ಹವಾಮಾನ ಮುನ್ಸೂಚನೆ ನೀಡಲು ಪ್ರಧಾನಿ ಸಲಹೆ
ಸುಲಭವಾಗಿ ಅರ್ಥವಾಗುವಂತೆ ಮತ್ತು ಸರಳವಾಗಿ ಪ್ರತಿ ದಿನ ಹವಾಮಾನ ಮುನ್ಸೂಚನೆ ನೀಡುವಂತೆ ಭಾರತೀಯ ಹವಾಮಾನ ಇಲಾಖೆಗೆ ಮೋದಿ ಸೂಚನೆ ನೀಡಿದರು. ಟಿವಿಗಳಲ್ಲಿ, ಎಫ್ಎಂ ರೇಡಕಿಯೋಗಳಲ್ಲಿಯೂ ಹವಾಮಾನ ಮುನ್ಸೂಚನೆ ವಿವರ ಪ್ರಸಾರ ಮಾಡುವಂತೆ ಸಲಹೆ ನೀಡಿದರು. ಅಗ್ನಿಶಾಮಕ ಸಿಬ್ಬಂದಿಯಿಂದ ಎಲ್ಲಾ ಆಸ್ಪತ್ರೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಸುವಂತೆ ಮತ್ತು ಆಸ್ಪತ್ರೆಗಳಲ್ಲಿ ಅಗ್ನಿಶಾಮಕಕ್ಕೆ ಸಂಬಂಧಿಸಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಧಾನಿ ಸೂಚಿಸದರು ಎಂದು ಪ್ರಕಟಣೆ ತಿಳಿಸಿದೆ