ಭಾರತ ಪ್ರವಾಸದಲ್ಲಿರುವ ಅಂಗೋಲಾ ಅಧ್ಯಕ್ಷ ಜೋವೊ ಮ್ಯಾನುಯೆಲ್ ಗೊನ್ಸಾಲ್ವೆಸ್ ಲಾರೆಂಕೊ ಮತ್ತು ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಇಂದು ಉಭಯ ದೇಶಗಳ ನಡುವೆ ದೆಹಲಿಯಲ್ಲಿ ಕೃಷಿ, ಸಾಂಪ್ರದಾಯಿಕ ಔಷಧ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳ ವಿನಿಮಯ ನಡೆಯಿತು.ಉಭಯ ದೇಶಗಳ ನಾಯಕರ ನಡುವೆ ನಡೆದ ನಿಯೋಗ ಮಟ್ಟದ ಮಾತುಕತೆಯ ನಂತರ ಈ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪೆಹಲ್ಗಾಮ್ ಉಗ್ರರ ದಾಳಿಯನ್ನು ಉಲ್ಲೇಖಿಸಿ, ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ಭಾರತ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದರು. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟದಲ್ಲಿ ಅಂಗೋಲಾ ನೀಡಿದ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದ ಪ್ರಧಾನಿ, ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಬೆದರಿಕೆ ಎಂದು ಭಾರತ ಮತ್ತು ಅಂಗೋಲಾ ಒಪ್ಪಿಕೊಂಡಿವೆ ಎಂದು ಹೇಳಿದರು.
ಉಭಯ ದೇಶಗಳು ಈ ವರ್ಷ ತಮ್ಮ ರಾಜತಾಂತ್ರಿಕ ಸಂಬಂಧಗಳ 40 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ಅಂಗೋಲಾದ ಸೇನಾ ಪಡೆಗಳ ಆಧುನೀಕರಣಕ್ಕಾಗಿ 200 ಮಿಲಿಯನ್ ಡಾಲರ್‌ಗಳ ರಕ್ಷಣಾ ಕ್ರೆಡಿಟ್ ಲೈನ್ ಅನ್ನು ಅನುಮೋದಿಸಲಾಗಿದೆ ಎಂದ ಪ್ರಧಾನಿ, ಅಂಗೋಲಾದ ಸಶಸ್ತ್ರ ಪಡೆಗಳ ತರಬೇತಿಯಲ್ಲಿ ಭಾರತ ಸಹಕರಿಸಲು ಸಂತೋಷವಾಗುತ್ತದೆ ಎಂದರು. ಆಫ್ರಿಕನ್ ಒಕ್ಕೂಟದ ಅಧ್ಯಕ್ಷತೆಗಾಗಿ ಅಂಗೋಲಾಗೆ ಶುಭಾಶಯ ಸಲ್ಲಿಸಿದ ಪ್ರಧಾನಿ, ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ, ಆಫ್ರಿಕನ್ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವ ದೊರೆತಿರುವುದು ಭಾರತಕ್ಕೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.