ಬೀಗುವಿಕೆಗಿಂತ ಮಾಗುವಿಕೆಯದು ಉತ್ತಮ
ಮಾಗಿಯೂ ಬೀಗದಿರುವಿಕೆಯು ಅತ್ಯುತ್ತಮ
ಮಾಗದೆ ಮಾಗಿರುವಂತೆ ಬೀಗುವುದು ವ್ಯಸನ
ಮಾಗದೆ ಬೀಗುವುದಕೆ ವೇಷವೇ ಸಾಧನ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||
ಮಾಗಲೋಸುಗ ಕಳಚಬೇಕು ಮುಖವಾಡವನು
ಮಾಗಲೋಸುಗ ತೆರೆಯಬೇಕಂತಃಚಕ್ಷುವನು
ಮಾಗಲೋಸುಗ ಸವೆಸಬೇಕು ಕಾಯವನು
ಮಾಗಲೋಸುಗ ಬಳಸಬೇಕಂತಃಕರಣವನು
ಪಂಚಜ್ಞಾನೇಂದ್ರಿಯ ಪಂಚಕರ್ಮೇಂದ್ರಿಯಂ
ಗಳನು ಸರಿಯಾದ ಕ್ರಮದಿಂದ ಬಳಸುತಲಿ
ಧರ್ಮಮಾರ್ಗವೆ ಸಾಧುಮಾರ್ಗವೆಂದರಿತು ಸನ್ಮಾರ್ಗದಲಿ ಮನುಜ ಸಾಗುವುದು ಒಳಿತು ||
ದೇಹ ತೊಳೆಯಲು ಬೇಕು ಸ್ನಾನ
ಮನವ ತೊಳೆಯಲು ಬೇಕು ಧ್ಯಾನ
ಬುದ್ಧಿ ಬೆಳೆಯಲು ಬೇಕು ಚಿಂತನ
ಬಾಹ್ಯ ಅಭ್ಯಂತರದಿ ಪಾಲಿಸಲು ಶೌಚವನು
ತೊಲಗುವುದು ಬೇಡದಾ ಕಳೆಯು
ಹುಲುಸಾಗಿ ಬೆಳೆಯುವುದು ಬೆಳೆಯು ||
ಫಲತುಂಬಿದಾ ವೃಕ್ಷ ಬಾಗುವುದು ದಿಟವು
ಬಾಗಿದಾ ವೃಕ್ಷವದು ಮಾಗಿದ ಸಂಕೇತವು ಬಾಗಬೇಕಾದಲ್ಲಿ ಬಾಗುವಾ ಕಾಯವದು
ಬೀಗದೆಂದೆಂದೂ ಮಾಗುವುದು ದಿಟವು
ಬಾಗಬೇಕಾದದ್ದು ಕಾಯ
ಮಾಗಬೇಕಾದದ್ದು ನ್ಯಾಯ ||
ಬೀಗುವವ ಬಾಗಲಾರ
ಬಾಗದವ ಮಾಗಲಾರ
ಮಾಗಿದವ ಬೀಗಲಾರ
ಬೀಗುವವ ಮಾಗಲಾರ
ಮಾಗುವುದು ಸಾಧನೆ
ಬೀಗುವುದು ಸುಮ್ಮನೆ ||
✍️ ಜಯಪ್ರಕಾಶ್ ಎ ನಾಕೂರು


