ನವದೆಹಲಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಪೊಂಗಲ್ ಹಬ್ಬದ ಆಚರಣೆಯಲ್ಲಿ ನರೇಂದ್ರ ಮೋದಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಪೊಂಗಲ್ ಹಬ್ಬದ ಸಾಂಸ್ಕೃತಿಕ ಮಹತ್ವ ಹಾಗೂ ಕೃಷಿಯೊಂದಿಗೆ ಅದರ ಆಪ್ತ ಸಂಬಂಧವನ್ನು ಸ್ಮರಿಸಿ, ನಿಸರ್ಗದ ಸಂರಕ್ಷಣೆಯೇ ನಮ್ಮ ಭವಿಷ್ಯದ ಭದ್ರತೆ ಎಂದು ಹೇಳಿದರು.
ಮುಂದಿನ ಪೀಳಿಗೆಗಾಗಿ ನೀರು ಮತ್ತು ಮಣ್ಣನ್ನು ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಪರಿಸರ ರಕ್ಷಣೆ ಮಾತ್ರವಲ್ಲ, ರೈತರು ಆರ್ಥಿಕವಾಗಿಯೂ ಸಬಲರಾಗಲು ಸಾಧ್ಯವೆಂದು ಅವರು ಹೇಳಿದರು. ಸಾವಯವ ಕೃಷಿಯತ್ತ ಸಾಗುವಿಕೆಯಿಂದ ಮಣ್ಣಿನ ಆರೋಗ್ಯ ಸುಧಾರಣೆ, ನೀರಿನ ಸಮರ್ಥ ಬಳಕೆ ಹಾಗೂ ಉತ್ಪಾದನಾ ವೆಚ್ಚದ ಕಡಿತ ಸಾಧ್ಯವಾಗುತ್ತದೆ ಎಂಬುದನ್ನೂ ಅವರು ಉಲ್ಲೇಖಿಸಿದರು.
ಇದೇ ಸಂದರ್ಭದಲ್ಲಿ, ಸಾವಯವ ಕೃಷಿ ಮಾದರಿಯಿಂದ ತಮ್ಮ ಬದುಕಿನಲ್ಲಿ ಬಂದ ಬದಲಾವಣೆಗಳನ್ನು ರಾಜ್ಯದ ರೈತ ಮಲ್ಲಿಕಾರ್ಜುನ ವಿವರಿಸಿದರು. ಪರಿಸರ ಸ್ನೇಹಿ ಕೃಷಿಯಿಂದ ಆದಾಯ ಹೆಚ್ಚಿದಂತೆ ಖರ್ಚು ಕಡಿಮೆಯಾಗಿ ಜೀವನಮಟ್ಟ ಸುಧಾರಿಸಿದೆ ಎಂದು ಅವರು ಆಕಾಶವಾಣಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಪೊಂಗಲ್ ಹಬ್ಬವು ಕೃಷಿ, ಪ್ರಕೃತಿ ಮತ್ತು ಸಮಾಜದ ನಡುವೆ ಇರುವ ಆಪ್ತ ಸಂಬಂಧವನ್ನು ನೆನಪಿಸುವುದಾಗಿ ಪ್ರಧಾನಿ ಹೇಳಿ, ಹಬ್ಬದ ಸಂಭ್ರಮದೊಂದಿಗೆ ಸುಸ್ಥಿರತೆಯ ಸಂದೇಶವನ್ನೂ ಮನೆಮಾತಾಗಿಸಲು ಕರೆ ನೀಡಿದರು.



