01.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕರಾವಳಿ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜೆಲ್ಲೆಗಳಾದ್ಯಂತ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ವಿಪರೀತ ಸೆಖೆಯ ವಾತಾವರಣದ ಮುನ್ಸೂಚನೆ ಇದೆ. ದಕ್ಷಿಣ ಕನ್ನಡದ ಸುಳ್ಯದ ಸುತ್ತಮುತ್ತ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ.
ಈಗಿನಂತೆ ಎಪ್ರಿಲ್ 1ರಿಂದ ಉಡುಪಿ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆ ಆರಂಭವಾಗುವ ಲಕ್ಷಣಗಳಿವೆ. ದಿನಗಳೆದಂತೆ ಮಳೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ.
ಮಲೆನಾಡು : ಕೊಡಗು ಜಿಲ್ಲೆಯ ಅಲ್ಲಲ್ಲಿ ಸಂಜೆ, ರಾತ್ರಿ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚೆನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಎಪ್ರಿಲ್ 1 ರಿಂದ ಮಲೆನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗಿನೊಂದಿಗೆ ಮಳೆ ಆರಂಭವಾಗುವ ಲಕ್ಷಣಗಳಿದ್ದು, ನಂತರದ ದಿನಗಳಲ್ಲಿ ಮಲೆನಾಡಿನ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.
ಒಳನಾಡು : ಉತ್ತರ ಹಾಗೂ ದಕ್ಷಿಣ ಒಳನಾಡು ಬಹುತೇಕ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ ಇದ್ದು, ಎಪ್ರಿಲ್ 2ರಿಂದ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆ ಆರಂಭವಾಗುವ ಲಕ್ಷಣಗಳಿವೆ. ಎಪ್ರಿಲ್ 3ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಮುನ್ಸೂಚನೆಗಳಿವೆ.
ಹಿಂದೂ ಮಹಾಸಾಗರದಿಂದ ಬಂಗಾಳಕೊಲ್ಲಿಯ ಮೂಲಕ ಹಾಗೂ ಬಂಗಾಳಕೊಲ್ಲಿಯ ಸುಮಾತ್ರ ಕಡೆಯಿಂದಲೂ ಗಾಳಿಯ ಉತ್ತಮ ಬೀಸುವಿಕೆಯಿಂದ ಮುಂಗಾರು ಪೂರ್ವದ ರೀತಿಯ ವಾತಾವರಣ ನಿರ್ಮಾಣವಾಗಿದೆ.