“ತಂತ್ರಜ್ಞಾನಗಳು ಬೆರಳ ತುದಿಯಲ್ಲಿರುವ ಕಾಲಘಟ್ಟದಲ್ಲಿ ಭಾರತೀಯ ಅಂಚೆ ಸೇವೆಯು ಈಗಲೂ ಜನಪರವಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬನ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಅಂಚೆ ಕಚೇರಿಯ ಸಂಪರ್ಕ, ಸ್ಪಂದನಗಳು ಜೀವಂತವಾಗಿವೆ. ನಗರಕ್ಕೂ ಹಳ್ಳಿಗೂ ಸಂವಹನ ಮಾಧ್ಯಮವಾಗಿ ಅಂಚೆ ಕಚೇರಿಯು ಕಾರ್ಯವೆಸಗುತ್ತಿದೆ. ಹಾಗಾಗಿ ಬದುಕಿನೊಂದಿಗೆ ಹೊಸೆದಿರುವ ಅಂಚೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದು ನಾಗರಿಕರ ಹೊಣೆಯಾಗಿದೆ,” ಎಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಹೇಳಿದರು.
ಅವರು ಪುತ್ತೂರು ಪ್ರಧಾನ ಅಂಚೆ ಕಚೇರಿಯಲ್ಲಿ ಜರುಗಿದ ‘ಮೆಯಿಲ್ ಡೇ’ ಸಂಭ್ರಮದಲ್ಲಿ ಮಾತನಾಡುತ್ತಾ, “ಸಾಹಿತ್ಯ ಕ್ಷೇತ್ರದ ಹಿರಿಯರಿಗೆಲ್ಲಾ ಅಂಚೆ ಇಲಾಖೆಯ ಸಂಪರ್ಕ ನಿಕಟವಾಗಿದ್ದು, ಸಾಹಿತ್ಯ ಹಾಗೂ ಅಂಚೆ ಒಂದೇ ಮನೆಯ ಸದಸ್ಯರಿದ್ದಂತೆ’ ಎಂದ ಕಳೆದ ಮೂವತ್ತನಾಲ್ಕು ವರುಷದಿಂದ ಅಡಿಕೆ ಪತ್ರಿಕೆ ಮತ್ತು ಅಂಚೆ ಕಚೇರಿಯ ಬಾಂಧವ್ಯವನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ‘ಪೂವರಿ’ ತುಳು ಮಾಸಿಕದ ಸಂಪಾದಕ ವಿಜಯಕುಮಾರ್ ಹೆಬ್ಬಾರಬೈಲು ಅವರನ್ನು ಕೂಡಾ ಗೌರವಿಸಲಾಯಿತು. ಅವರು ಅಂಚೆ ಇಲಾಖೆಯ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು. ಅಂಚೆ ವ್ಯವಸ್ಥೆಯನ್ನು ಅತಿ ಹೆಚ್ಚಾಗಿ ಬಳಸುತ್ತಿರುವ ಎರಡೂ ಪತ್ರಿಕೆಗಳ ಸಂಪಾದಕರುಗಳನ್ನು ಪ್ರಧಾನ ಅಂಚೆ ಪಾಲಕರಾದ ತೀರ್ಥಪ್ರಸಾದ್ ಎಸ್. ಇವರು ಶಾಲು, ಫಲಪುಷ್ಪ ನೀಡಿ ಗೌರವಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಉಪ ಅಂಚೆಪಾಲಕರಾದ ಗಾಯತ್ರೀ ಕೆ. ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು. ಎಲ್ಲಾ ಸಹಾಯಕ ಅಂಚೆಪಾಲಕರು, ಕಚೇರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿಂಗ್ ಡೇ ಪ್ರಯುಕ್ತ ಮಹಿಳಾ ಪ್ರಧಾನ ಕ್ಷೇತ್ರಿಯ ಬಚತ್ ಯೋಜನೆಯ ಹಿರಿಯ ಏಜೆಂಟರಾದ ವಿಜಯಾ ಪೈ ಅವರನ್ನು ಸಂಮಾನಿಸಲಾಗಿತ್ತು