ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಮುಸ್ತಫಾ ಪೈಚಾರ್ ಬಂಧಿತ ಆರೋಪಿ. ಇಂದು ಬೆಳಗ್ಗೆ ಸಕಲೇಶಪುರದಲ್ಲಿ(Sakaleshpura) ಬಂಧಿಸಲಾಗಿದೆ(Arrest) ಎಂದು ರಾಷ್ಟ್ರೀಯ ತನಿಖಾ ದಳ (NIA) ಮೂಲಗಳು ತಿಳಿಸಿವೆ.
ಏನಿದು ಪ್ರಕರಣ? : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿಯ ಉದ್ಯಮಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ಅವರು ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್ ಅವರನ್ನು ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆರಂಭದಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಕಳೆದ ವರ್ಷ ಜನವರಿಯಲ್ಲಿ ಎನ್‌ಐಎ 20 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಎನ್‌ಐಎ ಚಾರ್ಜ್‌ಶೀಟ್‌ನ ಪ್ರಕಾರ, ಒಂದು ಸಮುದಾಯದ ಸದಸ್ಯರಲ್ಲಿ ಭಯವನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಕೋಮು ದ್ವೇಷ, ಅಶಾಂತಿಯನ್ನು ಸೃಷ್ಟಿಸಲು ಪಿಎಫ್‌ಐನ ಕಾರ್ಯಸೂಚಿಯ ಭಾಗವಾಗಿ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿತ್ತು.