ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ವಿಜ್ಞಾನಿಗಳು ಹವಾಮಾನವನ್ನು ಉತ್ತಮವಾಗಿ ತಿಳಿದುಕೊಳ್ಳುವ ಮತ್ತು ಮುನ್ಸೂಚನೆ ನೀಡುವ ದಿಕ್ಕಿನಲ್ಲಿ ಮಹತ್ವದ ಸಂಶೋಧನೆ ನಡೆಸಿದ್ದಾರೆ. ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಅಪಾಯಕಾರಿ ಶಾಖದ ಅವಧಿಗಳು ಯಾವಾಗ ಮತ್ತು ಹೇಗೆ ಕೊನೆಗೊಳ್ಳುತ್ತವೆ ಎಂಬುದರ ಬಗ್ಗೆ ಹೊಸ ಅಧ್ಯಯನ ನಡೆಸಿದ್ದಾರೆ.
ಈ ಸಂಶೋಧನೆ ವಾತಾವರಣದ ವಿಲೋಮ ಸ್ಥಿತಿ ಮೇಲೆ ಕೇಂದ್ರೀಕೃತವಾಗಿದೆ. ಈ ಸಂದರ್ಭದಲ್ಲಿ, ಮೇಲ್ಮೈ ಸಮೀಪದ ತಂಪಾದ ಗಾಳಿಯ ಮೇಲೆ ಬೆಚ್ಚಗಿನ ಗಾಳಿಯ ಪದರ ಕುಳಿತು ಶಾಖ ಮತ್ತು ತೇವಾಂಶವನ್ನು ಒಳಗಡೆ ಬಂಧಿಸುತ್ತದೆ. ಇದರಿಂದ ಗಾಳಿ ಇನ್ನಷ್ಟು ಬಿಸಿಯಾಗಿ ಹಾಗೂ ಆರ್ದ್ರವಾಗುತ್ತಾ ದೀರ್ಘ ಮತ್ತು ತೀವ್ರ ಶಾಖದ ಅಲೆಗಳು ಉಂಟಾಗುತ್ತವೆ.
ವಿಲೋಮ ಸ್ಥಿತಿ ದುರ್ಬಲಗೊಂಡಾಗ, ಸಂಗ್ರಹಿತ ಸುಪ್ತ ಶಾಖವು ಸಂವಹನದ ರೂಪದಲ್ಲಿ ಬಿಡುಗಡೆಯಾಗಿ ಗುಡುಗು ಮಳೆಯೊಂದಿಗೆ ಶಾಖದ ಅಲೆಯನ್ನು ಅಂತ್ಯಗೊಳಿಸುತ್ತದೆ. ಈ ಪ್ರಕ್ರಿಯೆ ಆರ್ದ್ರ ಶಾಖದ ಅವಧಿಯ ಅಂತ್ಯವನ್ನು ಮುನ್ಸೂಚಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಭಾರತದಂತಹ ದೇಶಗಳಲ್ಲಿ ಈ ಸಂಶೋಧನೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಸುಮಾರು 70% ಜನರು ಈಗಾಗಲೇ ಅತಿಯಾದ ಶಾಖದ ಅಪಾಯವಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಹೆಚ್ಚುತ್ತಿರುವ ತಾಪಮಾನ ಮತ್ತು ಆರ್ದ್ರತೆಯು ಮಾನವ ಆರೋಗ್ಯ, ಕೃಷಿ, ಮೂಲಸೌಕರ್ಯ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಪ್ರಸ್ತುತ ಹವಾಮಾನ ಮುನ್ಸೂಚನಾ ಸಾಧನಗಳು ಆರ್ದ್ರ ಶಾಖದ ಅಲೆಗಳು ಯಾವಾಗ ಕೊನೆಗೊಳ್ಳುತ್ತವೆ ಎಂಬುದನ್ನು ನಿಖರವಾಗಿ ಹೇಳಲು ಕಷ್ಟಪಡುತ್ತಿವೆ. MIT ಸಂಶೋಧನೆ ನೀಡುವ ಹೊಸ ಭೌತಿಕ ಚೌಕಟ್ಟು ಮುಂದಿನ ದಿನಗಳಲ್ಲಿ ಹವಾಮಾನ ಸಂಸ್ಥೆಗಳಿಗೆ ಹೆಚ್ಚು ನಿಖರ ಮತ್ತು ಪರಿಣಾಮಕಾರಿ ಮುನ್ಸೂಚನೆಗಳನ್ನು ನೀಡಲು ಸಹಾಯ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಮೂಲ: ಹವಾಮಾನ ಜರ್ನಲ್


