ಗೇರು ಹಣ್ಣು ಸೇವನೆಯಿಂದ ಪೌಷ್ಠಿಕಾಂಶದ ಕೊರತೆ ನಿವಾರಿಸಬಹುದಾಗಿದೆ. ವಿಶ್ವವಿದ್ಯಾಲಯ ಗೇರು ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಜೊತೆಗೆ ಗೇರು ಹಣ್ಣಿನ ಮೌಲ್ಯವರ್ಧನೆ ಕುರಿತು ರೈತರಿಗೆ ಮಾಹಿತಿ ನೀಡುತ್ತಿದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ ಜಗದೀಶ್ ಹೇಳಿದರು.
ಅವರು ಮಂಗಳೂರಿನ ಉಳ್ಳಾಲದ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮತ್ತು ವಿವಿಧ ಇಲಾಖೆಗಳ ಸಹಯೋಗದಿಂದ ಆಯೋಜಿಸಿದ್ದ ಕೃಷಿ ಮೇಳ ಮತ್ತು ಗೇರು ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಗೇರು ಕೃಷಿಯಿಂದ ರೈತರು ಆರ್ಥಿಕ ಲಾಭ ಪಡೆಯುವುದರ ಜೊತೆಗೆ , ಗೇರು ಹಣ್ಣು ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ ಎಂದರು.
ಕೃಷಿ ಮೇಳ ಮತ್ತು ಗೇರು ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಚಾಲನೆ ನೀಡಿ, ಕೃತಿಯ ಜೊತೆಗಿನ ಒಡನಾಟದಿಂದ ಮನುಷ್ಯರು ದೂರಾಗುತ್ತಿರುವ ಕಾರಣ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಉತ್ತಮ ಆರೋಗ್ಯಕ್ಕಾಗಿ ಮನುಷ್ಯ ಪ್ರಕೃತಿಗೆ ಹತ್ತಿರವಾಗಬೇಕಿದೆ.ಗೇರು ಕೃಷಿಯ ಮಹತ್ವವನ್ನು ಎಲ್ಲರೂ ಅರಿಯಬೇಕಿದ್ದು, ಗೇರು ಕೃಷಿಗೆ ಉತ್ತಮ ಮಾರುಕಟ್ಟೆ ಪರಿಚಯಿಸುವಲ್ಲಿ ಮೇಳಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತರನ್ನು ಸನ್ಮಾನಿಸಿ, ಗೇರು ಕೃಷಿ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೆಳದಿ ಶಿವಪ್ಪ ನಾಯಕ, ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ ಜಗದೀಶ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.