ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದರೊಂದಿಗೆ ಭಾರತದಲ್ಲೇ ತಯಾರಿಸಿದ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕು ಎಂದು ಪ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.…..ಮುಂದೆ ಓದಿ….
ದೆಹಲಿಯಲ್ಲಿ ಶಾಂತಿ ಮತ್ತು ಆಧ್ಯಾತ್ಮಿಕ ಏಕತೆಗಾಗಿ ಜಾಗತಿಕ ನವಕರ್ ಮಹಾಮಂತ್ರ ದಿವಸ್ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು, ನವಕರ್ ಮಹಾಮಂತ್ರದ ತತ್ವಶಾಸ್ತ್ರವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನಕ್ಕೆ ಸಂಬಂಧಿಸಿದೆ. ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ತಕ್ಕಂತೆ ತಯಾರಿಸುವ ಅಗತ್ಯವಿದೆ ಎಂದರು. ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು ಮಾಡುವಂತೆ ಜನತೆಗೆ ಮನವಿ ಮಾಡಿದ ಅವರು, ನೀರನ್ನು ಉಳಿಸುವುದು, ತಾಯಿಯ ಹೆಸರಿನಲ್ಲಿ ಮರವೊಂದನ್ನು ಪೋಷಿಸುವುದು, ಸ್ವಚ್ಛತೆಯ ಧ್ಯೇಯ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ದೇಶೀಯ ಪ್ರವಾಸೋದ್ಯಮ, ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಯೋಗ ಮತ್ತು ಕ್ರೀಡೆಗಳನ್ನು ಜೀವನದ ಭಾಗವಾಗಿಸುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಇದರಲ್ಲಿ ಸೇರಿವೆ ಎಂದರು.
ಭಾರತದ ಇತಿಹಾಸ, ಹೆಗ್ಗುರುತು ಮತ್ತು ಆಧ್ಯಾತ್ಮಿಕ ಪ್ರಯಾಣದಲ್ಲಿ ಜೈನ ಧರ್ಮದ ಮಹತ್ವವನ್ನು ಪ್ರಸ್ತಾಪಿಸಿದ ಅವರು, ಜೈನ ಸಾಹಿತ್ಯವು ಭಾರತದ ಬೌದ್ಧಿಕ ವೈಭವದ ಬೆನ್ನೆಲುಬಾಗಿದೆ. ಜ್ಞಾನವನ್ನು ಸಂರಕ್ಷಿಸುವ ಸರ್ಕಾರದ ಬದ್ಧತೆಯಂತೆ ಪ್ರಾಕೃತ್ ಮತ್ತು ಪಾಲಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗಿದೆ. ಜೈನ ಸಮುದಾಯವು ಶತಮಾನಗಳಿಂದ ಸುಸ್ಥಿರ ಜೀವನಶೈಲಿ ಪಾಲಿಸಿಕೊಂಡು ಬಂದಿದೆ.. ಇದು ಭಾರತದ ಮಿಷನ್ ಲೈಫ್‌ಗೆ ಹೊಂದಾಣಿಕೆಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ 108ಕ್ಕೂ ಹೆಚ್ಚು ದೇಶಗಳ ಜನರು ಶಾಂತಿ ಮತ್ತು ಒಗ್ಗಟ್ಟಿನಿಂದ ಈ ಜಾಗತಿಕ ಪಠಣದಲ್ಲಿ ಪಾಲ್ಗೊಂಡಿದ್ದಾರೆ.