ಕರ್ನಾಟಕ ರಾಜ್ಯದ ಮೊದಲ ಐಐಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಧಾರವಾಡ ಐಐಟಿ ಇದೀಗ ಲೋಕಾರ್ಪಣೆಗೊಂಡಿದೆ. ಧಾರವಾಡದಲ್ಲಿ ನಿರ್ಮಿಸಲಾಗಿದ್ದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೇ 2019ರಲ್ಲಿ ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಅವರೇ ಇದನ್ನು ಲೋಕಾರ್ಪಣೆ ಮಾಡಿದ್ದಾರೆ. ಬರೋಬ್ಬರಿ 850 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಐಐಟಿ ಧಾರವಾಡದಲ್ಲಿ 4 ವರ್ಷಗಳ ಬಿ.ಟೆಕ್., ಇಂಟರ್ ಡಿಸಿಪ್ಲಿನರಿ, 5 ವರ್ಷಗಳ ಪ್ರೋಗ್ರಾಂ, ಪಿಎಚ್ಡಿ ಮತ್ತು ಎಂಟೆಕ್ ಕೋರ್ಸ್ಗಳೂ ಇವೆ.
ಈ ಕ್ಯಾಂಪಸ್ ದೇಶದ ಮೊದಲ ಸ್ಮಾರ್ಟ್ ಮತ್ತು ಹಸಿರು ಐಐಟಿ ಕ್ಯಾಂಪಸ್ ಎಂದು ಹೇಳಲಾಗುತ್ತದೆ. ವಿದ್ಯತ್ ಮತ್ತು ನೀರು ಸ್ವಾವಲಂಬಿ, ಸುಸ್ಥಿರತೆಯ ಶೂನ್ಯ ಪಳೆಯುಳಿಕೆ ನಿರ್ಮಾಣದೊಂದಿಗೆ ಮಾನವ ಸೌಕರ್ಯ, ಪರಿಸರ ಮತ್ತು ಐತಿಹಾಸಿಕ ಮೂಲಗಳನ್ನು ಸಂರಕ್ಷಿಸುವುದು ಹೊಸ ಐಐಟಿ ಕ್ಯಾಂಪಸ್‌ನ ಕೆಲವು ಪ್ರಮುಖ ಲಕ್ಷಣಗಳಾಗಿವೆ.
ಕ್ಯಾಂಪಸ್ ಮಾಲಿನ್ಯ ಮುಕ್ತವಾಗಿಸಲು ಕ್ಯಾಂಪಸ್‌ನಲ್ಲಿ ಸೈಕಲ್‌ಗಳು ಮತ್ತು ಇ-ವಾಹನಗಳನ್ನು ಮಾತ್ರ ಬಳಸಲಾಗುವುದು. ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಪ್ರತಿರೂಪವಾದ ಕಲ್ಲಿನ ರಥದ ಪ್ರತಿಕೃತಿಯು ಆವರಣದ ಪ್ರವೇಶದ್ವಾರದಲ್ಲಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಯೊಬ್ಬ ವಿದ್ಯಾರ್ಥಿಯು ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂದು ಹೇಳಿದ್ದಾರೆ.
ಧಾರವಾಡದಲ್ಲಿರುವ ಐಐಟಿಯ ಹೊಸ ಕ್ಯಾಂಪಸ್ ಗುಣಮಟ್ಟದ ಶಿಕ್ಷಣವನ್ನು ಸುಗಮಗೊಳಿಸುತ್ತದೆ. ಇದು ಉತ್ತಮ ನಾಳೆಗಾಗಿ ಯುವ ಮನಸ್ಸುಗಳನ್ನು ಪೋಷಿಸುತ್ತದೆ. ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಸಿಗಬೇಕು.ಕಳೆದ ಒಂಬತ್ತು ವರ್ಷಗಳಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ನಾವು ಏಮ್ಸ್ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ಏಳು ದಶಕಗಳಲ್ಲಿ, ದೇಶವು ಕೇವಲ 380 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಕಳೆದ 9 ವರ್ಷಗಳಲ್ಲಿ 250 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ ಎಂದು ಪ್ರಧಾನಿ ಹೇಳಿದರು.
ಮೋದಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಲ್ಲಿ “ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್” ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಈ ದಾಖಲೆಯನ್ನು ಇತ್ತೀಚೆಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗುರುತಿಸಿದೆ. 1,507 ಮೀ ಉದ್ದದ ಫ್ಲಾಟ್ ಫಾರ್ಮ್ ಸುಮಾರು ರೂ. 20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ
530 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ವಿದ್ಯುದ್ದೀಕರಣ ಯೋಜನೆಯು ವಿದ್ಯುತ್ ನಿಂದ ತಡೆರಹಿತ ರೈಲು ಕಾರ್ಯಾಚರಣೆಯನ್ನು ಸ್ಥಾಪಿಸುತ್ತದೆ. ಹೊಸಪೇಟೆ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲಕರ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಹಂಪಿ ಸ್ಮಾರಕಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿಯ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು. ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ ಸುಮಾರು 520 ಕೋಟಿ ರೂ.
250 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಿರುವ ಜಯದೇವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ ಭಾಗದ ಜನರಿಗೆ ಹೃದ್ರೋಗ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ. ರೂ. 1,040 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದಧಾರವಾಡ ಬಹುಗ್ರಾಮ ನೀರು ಸರಬರಾಜು ಯೋಜನೆಗೆ ಕೂಡ ಶಂಕು ಸ್ಥಾಪನೆ ಮಾಡಲಾಗಿದೆ.
ಸುಮಾರು 150 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ತುಪ್ಪರಿಹಳ್ಳ ಪ್ರವಾಹ ಹಾನಿ ನಿಯಂತ್ರಣ ಯೋಜನೆಗೆ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಿದ್ದಾರೆ.