ದೇಶದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಈ ಮೂಲಕ ಜನ ಕಲ್ಯಾಣ ಕಾರ್ಯಕ್ರಮಗಳ ಜಾರಿಗೆ ಒತ್ತು ನೀಡಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಕಳೆದೊಂದು ದಶಕದಲ್ಲಿ ಹೊಸದಾಗಿ 390 ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಐಐಟಿ, ಐಎಎಂ, ಏಮ್ಸ್ ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ. ಜಗತ್ತಿನ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯುತ್ತಮ 5 ಜಿ ನೆಟ್ ವರ್ಕ್ ಸೌಲಭ್ಯ ದೊರೆಯುತ್ತಿದೆ. ಜೊತೆಗೆ ಕಡಿಮೆ ದರದಲ್ಲಿ ಡೇಟಾ ದರವಿದೆ ಎಂದು ತಿಳಿಸಿದರು.12 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಇರುವ ಮಂದಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗದ ಜನರ ಕಲ್ಯಾಣಕ್ಕೆ ಒತ್ತು ನೀಡಿದೆ. ಜೊತೆಗೆ ಮೆಟ್ರೋ, ವಿಮಾನ ನಿಲ್ದಾಣ, ರೈಲ್ವೆ ಹಾಗೂ ಹೆದ್ದಾರಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ರೈತರಿಗೆ ಹಿಂದೆಂದಿಗಿಂತಲೂ ಕನಿಷ್ಠ ಬೆಂಬಲ ಬೆಲೆ-MSP ನೀಡಲಾಗುತ್ತಿದೆ. ಕಳೆದ 10 ವರ್ಷಗಳ ಹಿಂದೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಈಗ ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ. ಕೃಷಿ ವಲಯದಲ್ಲಿ ತಂತ್ರಜ್ಞಾನ ಆಧಾರಿತ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬ್ಯಾಂಕಿಂಗ್, ಆಶ್ರಯ ಮನೆಗಳ ನಿರ್ಮಾಣ, ಹೊಸ ಕಾಯ್ದೆಗಳ ಜಾರಿ, ಹೆದ್ದಾರಿಗಳ ನಿರ್ಮಾಣ, ರೈಲು ಕಾಮಗಾರಿ, ವಿಮಾನ ನಿಲ್ದಾಣಗಳ ನಿರ್ಮಾಣ ಸೇರಿದಂತೆ ಅನೇಕ ಆರ್ಥಿಕ ಸಹಕಾರಿಯಾಗುವ ಯೋಜನೆಗಳನ್ನು ಮಾಡಲಾಗಿದೆ. ಅಮೃತ್ ಭಾರತ ಯೋಜನೆಯಡಿ 61 ರೈಲು ನಿಲ್ದಾಣಗಳ ಪುನರ್ ನಿರ್ಮಾಣ ಕಾಮಗಾರಿ ನಡೆದಿದೆ. 244 ಮೇಲಸೇತುವೆ ಮತ್ತು ಕೆಳ ಸೇತುವೆಗಳನ್ನು ಮಾಡಲಾಗುತ್ತಿದೆ ಎಂದು ಪಿಪಿಟಿ ಮೂಲಕ ಮಾಹಿತಿ ನೀಡಿದರು.