ಕೇಂದ್ರ ಸರ್ಕಾರ ಕೃಷಿ ವಲಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕನಿಷ್ಟ ಕೃಷಿ ಉತ್ಪಾದನೆ ಹೊಂದಿರುವ ದೇಶದ 100 ಜಿಲ್ಲೆಗಳಲ್ಲಿ ‘ಪಿಎಂ ಧನ-ಧಾನ್ಯ ಕೃಷಿ ಯೋಜನೆ’ಯನ್ನು ಜಾರಿಮಾಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಪಿಎಂ ಧನ-ಧಾನ್ಯ ಕೃಷಿ ಯೋಜನೆ ಸೇರಿದಂತೆ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಪಿಎಂ ಧನ-ಧಾನ್ಯ ಕೃಷಿ ಯೋಜನೆ 2025-26 ರಿಂದ ಮುಂದಿನ 6 ವರ್ಷಗಳ ಅವಧಿಗೆ ದೇಶಾದ್ಯಂತ 100 ಜಿಲ್ಲೆಗಳಲ್ಲಿ ಜಾರಿಯಾಗಲಿದೆ. ಈ ಯೋಜನೆಗೆ 24 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಒಟ್ಟಾರೆ 11 ಸಚಿವಾಲಯಗಳ 36 ಯೋಜನೆಗಳನ್ನು ಸಮನ್ವಯಗೊಳಿಸಿ, ಕೇಂದ್ರೀಕೃತ ಮಾದರಿಯಲ್ಲಿ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ರಾಜ್ಯ ಸರ್ಕಾರ ಹಾಗೂ ಕೃಷಿ ವಲಯಕ್ಕೆ ಸಂಬಂಧಸಿದ ಎಲ್ಲ ಪಾಲುದಾರರ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ದೇಶದ 1 ಕೋಟಿ 70 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆಯಡಿ ಕೃಷಿ ಉತ್ಪಾದಕತೆ ಹೆಚ್ಚಿಸುವುದು, ಬೆಳೆಗಳ ವೈವಿಧ್ಯೀಕರಣ , ಸುಸ್ಥಿರ ಪದ್ಧತಿ, ನೀರಾವರಿ ಸೌಲಭ್ಯ, ಪಂಚಾಯಿತಿ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಗೋದಾಮುಗಳ ಸ್ಥಾಪನೆ ಹಾಗೂ ಸಾಲ ಸೌಲಭ್ಯದ ನೆರವು ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ-ಎನ್ ಟಿ ಪಿಸಿಯ ಬಲವರ್ಧನೆಗೆ ಕ್ರಮಕೈಗೊಳ್ಳಲಾಗಿದ್ದು, ಮರು ಬಳಕೆ ಇಂಧನ ವಲಯದಲ್ಲಿ 20 ಸಾವಿರ ಕೋಟಿ ರೂಪಾಯಿ ಹೂಡಿಕೆಗೆ ಅನುಮತಿ ನೀಡಲಾಗಿದೆ. ವಿದ್ಯುತ್ ಉತ್ಪಾದನೆಯನ್ನು 2032 ರೊಳಗೆ 60 ಗಿಗಾ ವ್ಯಾಟ್ ಗೆ ಏರಿಸುವ ಗುರಿ ಹೊಂದಲಾಗಿದೆ. ಹಾಗೆಯೇ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಗೂ ಸಹ ಮರುಬಳಕೆ ಇಂಧನ ವಲಯದಲ್ಲಿ ಹೂಡಿಕೆ ಮಾಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯನಿರ್ವಹಿಸಿ, ಭೂಮಿಗೆ ವಾಪಸ್ಸಾಗಿರುವ ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆ ಸಲ್ಲಿಸುವ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಅವರು ದೇಶದ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ. ಈ ಯಶಸ್ಸು ಭಾರತದ ಗಗನಯಾನದ ಗುರಿ ತಲುಪುವಲ್ಲಿ ಮತ್ತೊಂದು ಹೆಜ್ಜೆಯನ್ನು ಇಟ್ಟಂತಾಗಿದೆ ಎಂದರು.